This is the title of the web page
This is the title of the web page

Please assign a menu to the primary menu location under menu

Local News

ಕಿತ್ತೂರು ಉತ್ಸವ: ಪೂರ್ವಭಾವಿ ಸಭೆ ೫ ಕೋಟಿ ರೂಪಾಯಿ ಶಾಶ್ವತ ಅನುದಾನ ಬಿಡುಗಡೆಗೆ ಪ್ರಯತ್ನ: ಶಾಸಕ ಮಹಾಂತೇಶ್ ದೊಡ್ಡಗೌಡ್ರ


ಬೆಳಗಾವಿ, ಆ.೨೨: ಪ್ರತಿವರ್ಷ ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅನುಕೂಲವಾಗುವಂತೆ ಕನಿಷ್ಠ ಐದು ಕೋಟಿ ರೂಪಾಯಿ ಶಾಶ್ವತ ಅನುದಾನವನ್ನು ಪ್ರತ್ಯೇಕವಾಗಿ ತೆಗೆದಿರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರದ ಗಮನಸೆಳೆದು ಶಾಶ್ವತ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹೇಳಿದರು.ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸುವುದಕ್ಕೆ ಸಂಬಂಧಿಸಿದಂತೆ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ(ಆ.೨೨) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಶಾಸಕರು ಹಾಗೂ ಸರಕಾರಗಳು ಬದಲಾದಾಗ ಅನುದಾನಕ್ಕಾಗಿ ಅಲೆದಾಡುವ ಪರದಾಟ ತಪ್ಪಲಿದೆ ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹೇಳಿದರು.ಕನಿಷ್ಠ ಐದು ಕೋಟಿ ರೂಪಾಯಿ ತೆಗೆದಿರಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು.ವೀರಜ್ಯೋತಿಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಯೋಜನೆ ರೂಪಿಸಲಾಗುವುದು.
ಹಂಪಿ ಉತ್ಸವ, ದಸರಾ ಮಾದರಿಯಲ್ಲಿ ವಿಜೃಂಭಣೆಯಿಂದ ಕಿತ್ತೂರು ಉತ್ಸವ ಆಚರಿಸುವ ನಿಟ್ಟಿನಲ್ಲಿ ಸಲಹೆ ನೀಡಲಾಗಿದೆ. ಉತ್ಸವದ ಅವಧಿಯನ್ನು ಹೆಚ್ಚಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.
ಮಹಿಳೆಯರಿಗಾಗಿ ಒಂದು ದಿನ ವಿಶೇಷ ಕಾರ್ಯಕ್ರಮ ಒದಗಿಸಬೇಕು ಆಶಯವಿದೆ. ಅದೇ ರೀತಿ ದಸರಾ ಕ್ರೀಡಾಕೂಟ ಮಾದರಿಯಲ್ಲಿ ಕಿತ್ತೂರು ಉತ್ಸವದಲ್ಲಿ ಆಯೋಜಿಸಲು ಸಲಹೆ ನೀಡಲಾಗಿದೆ.
ಖೇಲೋ ಇಂಡಿಯಾ ಯೋಜನೆಯಡಿ ೬-೭ ಕೋಟಿ ರೂಪಾಯಿ ಅನುದಾನ ಸಿಗುತ್ತದೆ. ಇದನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ೧೭ ಎಕರೆ ಜಮೀನನ್ನು ಈಗಾಗಲೇ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.
ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಮಾನ್ಯ ಪ್ರಧಾನಮಂತ್ರಿಗಳು ಅಥವಾ ರಾಷ್ಟ್ರಪತಿ ಅವರನ್ನು ಆಹ್ವಾನಿಸುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹೇಳಿದರು.ಚೆನ್ನಮ್ಮನ ಕೋಟೆಯ ಪ್ರತಿರೂಪ ನಿರ್ಮಾಣಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕೋಟೆಯ ಸುತ್ತಮುತ್ತಲಿನ ಕಂದಕ ಕುರಿತು ಸಮಗ್ರ ಸಮೀಕ್ಷೆ ಕೈಗೊಂಡು ಚೆನ್ನಮ್ಮನ ಕೋಟೆಯ ಪ್ರತಿರೂಪವನ್ನು ನಿರ್ಮಿಸಲು ಜಾಗೆಯನ್ನು ಅಂತಿಮಗೊಳಿಸಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದರು.
ಅಂತಿಮ ವರದಿಯನ್ನು ಆಧರಿಸಿ ಸ್ವತಃ ಮುಖ್ಯಮಂತ್ರಿಗಳೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಶಾಸಕ ದೊಡ್ಡಗೌಡ್ರ ಸಭೆಯಲ್ಲಿ ತಿಳಿಸಿದರು. ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸಬೇಕು ಎಂಬ ಬೇಡಿಕೆಗೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಇದಕ್ಕೂ ಒಪ್ಪಿಗೆಯನ್ನು ನೀಡಿದ್ದಲ್ಲದೇ ಜನರಿಂದ ಸಲಹೆಗಳನ್ನು ಸ್ವೀಕರಿಸಲು ಸೂಚನೆ ಕೂಡ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಜನರ ಸಲಹೆಗಳನ್ನು ಆಧರಿಸಿ ಉತ್ಸವದ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡ್ರ ತಿಳಿಸಿದರು.ಸಭೆಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಪ್ರಕಾಶ್ ನಿಟ್ಟಾಲಿ, ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಆಧರಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಅನುದಾನ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಗಮನಸೆಳೆಯಲಾಗುವುದು ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಕಿತ್ತೂರಿನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಿತ್ತೂರು ಉತ್ಸವ ಬರೀ ಉತ್ಸವವಾಗದೇ ಚನ್ನಮ್ನ ಜೋರಾಟ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂಬ ಆಶಯದಿಂದ ಕೋಟೆಯ ಪ್ರತಿರೂಪವನ್ನು ನಿರ್ಮಿಸಲಾಗುತ್ತಿದೆ ಎಂದರು. ಕೋಟೆಯ ಪ್ರತಿರೂಪ ನಿರ್ಮಾಣ ಕೆಲಸ ಎಲ್ಲರ ಸಹಮತದೊಂದಿಗೆ ಆದಷ್ಟು ಬೇಗನೇ ಆರಂಭಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮಾತನಾಡಿ, ರಾಜ್ಯಮಟ್ಟದ ಉತ್ಸವವನ್ನಾಗಿ ಉನ್ನತೀಕರಿಸುವ ಉದ್ದೇಶದಿಂದ ಎರಡು ತಿಂಗಳು ಮುಂಚೆ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಜನರು ನೀಡಿದ ಸಲಹೆಗಳನ್ನು ಆಧರಿಸಿ ಉತ್ಸವದ ಯಶಸ್ವಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಲಾವಿದರ ಆಯ್ಕೆ, ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ, ಉಪ ಸಮಿತಿ ರಚನೆ ಸೇರಿದಂತೆ ಎಲ್ಲ ಸಲಹೆಗಳನ್ನು ಆಧರಿಸಿ ಸಕಲ ವ್ಯವಸ್ಥೆ ಮಾಡಲಾಗುವುದು. ಕಿತ್ತೂರಿನ ಕೋಟೆಯ ಪ್ರತಿರೂಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಗುರುತಿಸಿ ಕೂಡಲೇ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ೨೦೨೧ ರಲ್ಲಿ ೭೫ ಲಕ್ಷ ರೂಪಾಯಿ ಅನುದಾನದಲ್ಲಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿರುತ್ತದೆ ಎಂದು ಹೇಳಿದರು.
ಸ್ವಾಗತಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಉನ್ನತೀಕರಿಸುವ ಉದ್ದೇಶದಿಂದ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು, ಸಲಹೆ-ಸೂಚನೆಗಳನ್ನು ಸರಕಾರಕ್ಕೆ ಕಳಿಸಲಾಗುವುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ್, ಕಿತ್ತೂರು ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಚನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ, ಡಿಡಿಪಿಐ ಬಸವರಾಜ ನಾಲತವಾಡ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಸಯೀದಾ ಆಫ್ರಿನ್ ಬಾನು ಬಳ್ಳಾರಿ, ಡಿಎ??? ಡಾ.ಮಹೇಶ್ ಕೋಣಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ನಾಗರಿಕರ ಸಲಹೆ-ಸೂಚನೆಗಳು:
ಕಿತ್ತೂರು ಉತ್ಸವದ ಅಂಗವಾಗಿ ವೀರಜ್ಯೋತಿಯು ಇಡೀ ರಾಜ್ಯದಲ್ಲಿ ಸಂಚರಿಸಬೇಕು. ಬೆಂಗಳೂರಿನಲ್ಲಿ ಕೂಡ ಒಂದು ಕಾರ್ಯಕ್ರಮ ಏರ್ಪಡಿಸಿ ಜ್ಯೋತಿಯನ್ನು ಬೀಳ್ಕೊಡಬೇಕು ಎಂದು ದಿನೇಶ್ ವಳಸಂಗ ಸಲಹೆ ನೀಡಿದರು.ಉತ್ಸವದ ಉದ್ಘಾಟನೆಗೆ ಮಾನ್ಯ ಪ್ರಧಾನಮಂತ್ರಿಗಳನ್ನು ಆಹ್ವಾನಿಸಬೇಕು ಹಾಗೂ ಅಂತರ್ ರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸಬೇಕು ಎಂದರು. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲು ಉತ್ಸವದ ಸಂದರ್ಭದಲ್ಲಿ ಸಮಾನಾಂತರ ವೇದಿಕೆಗಳನ್ನು ನಿರ್ಮಿಸಬೇಕು ಎಂದು ವೆಂಕಟೇಶ್ ಉಣಕಲಕರ ಒತ್ತಾಯಿಸಿದರು.
ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸುವುದಾದರೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಾಗಬೇಕು. ಕಿತ್ತೂರು ಕೋಟೆಯ ಪ್ರತಿರೂಪವನ್ನು ಕೋಟೆಯ ಅಕ್ಕಪಕ್ಕದಲ್ಲಿಯೇ ನಿರ್ಮಿಸಬೇಕು ಎಂದು ಅನಿಲ್ ಎಮ್ಮಿ ಅಭಿಪ್ರಾಯಪಟ್ಟರು.
ಚಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯದ ಇತರೆ ಉತ್ಸವಗಳಿಗಿಂತ ವಿಭಿನ್ನವಾಗಿ ಕಿತ್ತೂರು ಉತ್ಸವ ಆಚರಿಸಬೇಕು. ಉತ್ಸವದ ಸಂದರ್ಭದಲ್ಲಿ ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಎಲ್‌ಇ.ಡಿ. ಪರದೆಗಳನ್ನು ವ್ಯವಸ್ಥೆ ಮಾಡಬೇಕು; ಸಾಹಿತಿಗಳು, ಕಲಾವಿದರಿಗೆ ಅತ್ಯುನ್ನತ ಗೌರವವನ್ನು ನೀಡುವ ವ್ಯವಸ್ಥೆೆ್ಥ ಆಗಬೇಕು; ಉತ್ಸವದ ಸವಿನೆನಪಿಗಾಗಿ ಶಾಶ್ವತ ಕೆಲಸವೊಂದನ್ನು ಮಾಡಬೇಕು ಎಂದು ಮನವಿ ಮಾಡಿಕೊಂಡರು. ಸುತ್ತ್ತಮುತ್ತಲಿನ ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಉತ್ಸವದ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಬಸವರಾಜ ಸಲಹೆ ನೀಡಿದರು. ರಾಣಿಚೆನ್ನಮ್ಮನ ಹೋರಾಟದ ಬದುಕನ್ನು ವಿವಿಧ ಭಾಷೆಗಳಲ್ಲಿ ಮುದ್ರಿಸಿ ದೇಶಾದ್ಯಂತ ಪ್ರಚುರಪಡಿಸಬೇಕು; ಉತ್ಸವದ ಸಂದರ್ಭದಲ್ಲಿ ಪಟ್ಟಣದ ಸ್ವಚ್ಛತೆ ಹಾಗೂ ಮೂಲಸೌಕರ್ಯವನ್ನು ಒದಗಿಸಬೇಕು; ದಸರಾ ಕ್ರೀಡಾಕೂಟ ಮಾದರಿಯಲ್ಲಿ ಕ್ರೀಡೆಗಳನ್ನು ಏರ್ಪಡಿಸಬೇಕು; ಐತಿಹಾಸಿಕ ಹೋರಾಟದ ಮೇಲೆ ಬೆಳಕು ಚೆಲ್ಲುವಂತಹ ಧ್ವನಿಬೆಳಕು ಕಾರ್ಯಕ್ರಮ ಆಯೋಜಿಸಬೇಕು; ವಿಶೇಷ ಚೇತನ ಕ್ರೀಡಾಪಟು ಹಾಗೂ ಕಲಾವಿದರಿಗೂ ಪ್ರೋತ್ಸಾಹ ನೀಡಬೇಕು;ಕಿತ್ತೂರು ಕೋಟೆಯನ್ನು ವರ್ಷವಿಡಿ ಪ್ರವಾಸಿಸ್ನೇಹಿ ತಾಣವಾಗಿ ರೂಪಿಸಬೇಕು; ಕಿತ್ತೂರು ಕೋಟೆಗೆ ದೀಪಾಲಂಕಾರ; ಕೋಟೆ ಎದುರು ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪಿಸಬೇಕು; ತಕ್ಷಣವೇ ಉಪ ಸಮಿತಿಗಳನ್ನು ರಚಿಸಬೇಕು ಎಂಬುದು ಸೇರಿದಂತೆ ವಿವಿಧ ರೀತಿಯ ಸಲಹೆಗಳನ್ನು ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರು ನೀಡಿದರು.


Gadi Kannadiga

Leave a Reply