This is the title of the web page
This is the title of the web page

Please assign a menu to the primary menu location under menu

Local News

ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು : ಧರ್ಮಣ್ಣ ನಾಯಕ


ರಾಯಬಾಗ: ಜನೆವರಿ-೨೧: “ಎರಡು ಸಾವಿರ ವರ್ಷಗಳಷ್ಟು ಇತಿಹಾಸವಿರುವ ಶ್ರೀಮಂತ ಭಾಷೆ ಕನ್ನಡ. ಅಂಥ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಷ್ಟೇ ಭಾಷೆಗಳನ್ನು ಕಲಿತರೂ ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು” ಎಂದು ಹಿರಿಯ ಚಿಂತಕರಾದ ಧರ್ಮಣ್ಣ ನಾಯಕ ಕರೆ ನೀಡಿದರು.
ರಾಯಬಾಗದ ಪರಮಾನಂದವಾಡಿಯಲ್ಲಿ ಜರುಗಿದ ರಾಯಬಾಗ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ” ರಾಯಬಾಗ ತಾಲೂಕು ಹೊಯ್ಸಳರ ಕಾಲದ ಸಾಹಿತ್ಯ ಪರಂಪರೆ ಹೊಂದಿದ್ದು, ಇಲ್ಲಿ ಬ್ರಿಟಿಷರು ಕಾಲದಲ್ಲಿ ಕನ್ನಡ ಶಾಲೆಗಳು ಆರಂಭವಾಗುವ ಮೂಲಕ ಕನ್ನಡ ಸೇವೆಯ ಹೆಜ್ಜೆಗುರುತುಗಳು ಕಾಣಸಿಗುತ್ತವೆ. ಈ ಭಾಗದ ಜಾನಪದ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು ಭಾವೈಕ್ಯತೆ ಸಾರುವ ಲಾವಣಿ, ಡೊಳ್ಳಿನ ಪದ, ಭಜನೆ, ರಿವಾಯತ ಪದ, ಸೋಬಾನೆ ಪದಗಳು ಇಲ್ಲಿಯ ರೈತ ಕಾರ್ಮಿಕರ ಮನೆಮಾತಾಗಿವೆ. ಕನ್ನಡದ ಅಂಥ ಸಂಪದ್ಭರಿತ ಪರಂಪರೆಯನ್ನು ಉಳಿಸಲು ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ ಅವರು ” ಕಾವೇರಿಯಿಂದ ಗೋದಾವರಿವರೆಗೆ ಹರಡಿದ್ದ ಕನ್ನಡ ನಾಡು ಸ್ವಾತಂತ್ರಾ ನಂತರ ಭಾಷವಾರು ರಾಜ್ಯಗಳಾಗಿ ವಿಂಗಡನೆಯದಾಗ ಅನೇಕ ಅಪ್ಪಟ ಕನ್ನಡ ಪ್ರದೇಶಗಳು ನಮ್ಮ ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳನಾಡು, ಕೇರಳ ಹಾಗೂ ಗೋವೆ ರಾಜ್ಯಗಳಲ್ಲಿ ಹಂಚಿಹೋಗಿವೆ. ಹೀಗಾಗಿ ಆಯಾ ರಾಜ್ಯ ಸರ್ಕಾರಗಳು ಆ ಪ್ರದೇಶದಲ್ಲಿರುವ ಹೊರನಾಡ ಕನ್ನಡಿಗರ ಕುರಿತು ವಿಶೇಷ ಕಾಳಜಿ ವಹಿಸಿ ಅವರ ಜೀವನಮಟ್ಟ ಸುಧಾರಿಸಬೇಕು” ಎಂದು ಒತ್ತಾಯಿಸಿದರು.
ವಿವಿಧ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ, ಹಿರಿಯ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ ಅವರು ಮಾತನಾಡಿ, ” ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ. ಕನ್ನಡ ನಾಡು, ನುಡಿ, ಗಡಿ, ಜಲ, ಭಾಷೆಗಳ ವಿಷಯದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕರ್ನಾಟಕ ಸರ್ಕಾರದ್ದು. ಸರ್ವೋಚ್ಚ ನ್ಯಾಯಾಲಯದಲ್ಲಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ಹಾಗೂ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ನೆರೆಯ ಮಹಾರಾಷ್ಟ್ರದ ಜತ್ತ ತಾಲೂಕಿನಲ್ಲಿರುವ ಕನ್ನಡಿಗರಿಗೆ ಅಲ್ಲಿಯ ಸರ್ಕಾರ ತಾರತಮ್ಯ ನೀತಿ ಅನುಸರಿಸಿ ಕಿರುಕಳ ಕೊಡುತ್ತಿದೆ. ಹೀಗಾಗಿ ಅವರ ರಕ್ಷಣೆಗೆ ಕರ್ನಾಟಕ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು” ಎಂದು ಆಗ್ರಹಿಸಿದರು.
ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ನಾಡದೇವಿಗೆ ಪೂಜೆ ಸಲ್ಲಿಸಿದರು. ಪರಮಾನಂದವಾಡಿ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಖಿಲಾರೆ ಮೆರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಸಾಹಿತಿ ಶಿವಾನಂದ ಬೆಳಕುಡ ಪರಿಷತ್ತಿನ ಧ್ವಜ ಹಸ್ತಾಂತರಿಸಿದರು. ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಆಶಯ ನುಡಿಯನ್ನಾಡಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಶಾಸಕ ದುರ್ಯೋದನ ಐಹೊಳೆ ಪುಸ್ತಕ ಮಳಿಗೆ ಉದ್ಘಾಟಿಸಿದರು.
ಕನ್ನಡ ಜಗತ್ತು ಕುರಿತು ಡಾ. ರತ್ನಾ ಬಾಳಪ್ಪನವರ ಹಾಗೂ ವಿಠಲ ಜೋಡಟ್ಟಿ ಉಪನ್ಯಾಸ ನೀಡಿದರು. ಡಾ. ವಿ. ಎಸ್. ಮಾಳಿ ಅಧ್ಯಕ್ಷತೆ ವಹಿಸಿದ್ದರು.
ಕವಿ ಕಲ್ಲೇಶ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಕವಿ ಸಮಯ ಕವಿಗೋಷ್ಠಿ ಜರುಗಿತು. ಐ. ಆರ್. ಮಠಪತಿ ಅವರ ಅಧ್ಯಕ್ಷತೆ ಹಾಗೂ ಅವಳೆಕುಮಾರ, ಸಿದ್ದು ಹುಲ್ಲೋಳಿ ಅವರ ಉಪಸ್ಥಿತಿಯಲ್ಲಿ ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಸತ್ಕರಿಸಿ ಗೌರವಿಸಲಾಯಿತು.
ಸಮ್ಮೇಳನದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡುವಂತಾಗಬೇಕು. ಗಡಿನಾಡಿನ ನೆಲ, ಜಲ, ಭಾಷೆ ರಕ್ಷಣೆಗೆ ಸರ್ಕಾರ ಕಾಯ್ದೆ ರೂಪಿಸಬೇಕು ಹಾಗೂ ನಾಮಫಲಕಗಳಲ್ಲಿ ಕನ್ನಡವನ್ನು ಮೊದಲ ಆದ್ಯತೆಯಲ್ಲಿ ಬರೆಸಿ, ಕನ್ನಡ ಅಂಕಿ ಬಳಸಲು ಸರ್ಕಾರ ಕಾನೂನು ರೂಪಿಸಬೇಕು ಎಂಬ ಒಟ್ಟು ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ರಾಯಬಾಗ ತಾಲೂಕಾ ಅಧ್ಯಕ್ಷ ರವೀಂದ್ರ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಬಸವರಾಜ ಸನದಿ, ಬಾಲಕೃಷ್ಣ ಜಂಬಗಿ, ಸುಖದೇವ ಕಾಂಬಳೆ, ಎಂ. ವೈ. ಮೆಣಸಿನಕಾಯಿ, ಲಕ್ಷ್ಮಣ ಜಂಬಗಿ, ರಾಮಣ್ಣ ಗಸ್ತಿ, ಜಿನ್ನಪ್ಪ ಅಸ್ಕಿ, ಬಿ. ಬಿ. ಮುಗಳಿಹಾಳ, ಬಸನಗೌಡ ಆಸಂಗಿ, ಲಕ್ಷ್ಮಣ ಚೌರಿ, ಶಂಕರ ಕ್ಯಾಸ್ತಿ, ದೇಮಪ್ಪ ಯಲ್ಲಟ್ಟಿ ಮುಂತಾದವರು ಉಪಸ್ಥಿತರಿದ್ದರು. ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು.


Gadi Kannadiga

Leave a Reply