This is the title of the web page
This is the title of the web page

Please assign a menu to the primary menu location under menu

Local News

ವಿಶ್ವ ವಿದ್ಯಾಲಯಗಳು ಜ್ಞಾನದಾಹವಾಗಬೇಕು: ಸಂಸದ ಎಲ್. ಹನುಮಂತಯ್ಯ


ಬೆಳಗಾವಿ ಜೂ. : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಹಯೋಗದಲ್ಲಿ ವಿಶ್ವ ವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹದಿನೆಂಟು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಎಲ್. ಹನುಮಂತಯ್ಯ ಅವರು ಮಾತನಾಡಿದರು. ವಿಶ್ವ ವಿದ್ಯಾಲಯಗಳಿಗೆ ಜ್ಞಾನದಾಹವಿರಬೇಕು. ಇಲ್ಲಿ ಸದಾ ಜ್ಞಾನವನ್ನು ಬಿತ್ತರಿಸುವ ಕಾರ್ಯ ನಡೆಯಬೇಕು. ಇಲ್ಲಿನ ಜ್ಞಾನ ಕೇವಲ ಪಂಡಿತರಿಗಷ್ಟೇ ಸೀಮಿತವಾಗದೆ ಸಾಮಾನ್ಯರ ಬದುಕಿಗೆ ಹತ್ತಿರವಿರಬೇಕು. ಇಂದು ಸರ್ಕಾರಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇವು ಎಲ್ಲರ ಸೊತ್ತು. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಬಹುತೇಕ ವಿಶ್ವವಿದ್ಯಾಲಯಗಳು ಹೆಸರಿಗಷ್ಟೇ ವಿಶ್ವವಿದ್ಯಾಲಯವಾಗಿದ್ದು ಗುಣಾತ್ಮಕ ಶಿಕ್ಷಣದಿಂದ ದೂರಾಗಿವೆ. ಖಾಸಗಿ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳು ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದ್ದರೂ ಅವು ಉಳ್ಳವರ ಶ್ರೀಮಂತರ ಸೊತ್ತಾಗಿದೆ ಎಂದು ಕಳಕಳಿ ವ್ಯಕ್ತಪಡಿಸಿದರು. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಆಮೂಲಾಗ್ರವಾಗಿ ಬದಲಾಗಬೇಕು ಆಗ ಮಾತ್ರ ಸರ್ವರಿಗೂ ಉತ್ತಮ ಶಿಕ್ಷಣ ಸಿಗಲು ಸಾಧ್ಯ ಎಂದರು.
ಪುಸ್ತಕಗಳ ಕುರಿತು ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪ್ರೊ. ಬಸವರಾಜ ಕಲ್ಗುಡಿ ತಾತ್ತ್ವಿಕ ಚಿಂತನೆ ಮತ್ತು ಸಾಮಾಜಿಕ ಅರಿವು ಮೂಡಿಸುವ ಕೃತಿಗಳು ಪ್ರಕಟವಾಗಬೇಕು. ಇಲ್ಲಿ ಬಿಡುಗಡೆಗೊಂಡ ಎಲ್ಲಾ ಕೃತಿಗಳು ಮೌಲಿಕವಾಗಿವೆ. ಒಂದು ವಿಶ್ವವಿದ್ಯಾನಿಲಯದಲ್ಲಿ ಬೋಧನಾಂಗ, ಸಂಶೋಧನಾಂಗ, ಆಡಳಿತಾತ್ಮಕಾಂಗ, ಪ್ರಸಾರಾಂಗ ಸರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ವಿಶ್ವವಿದ್ಯಾಲಯವು ಬೌದ್ಧಿಕವಾಗಿ ಬಹಳ ಎತ್ತರಕ್ಕೆ ಬೆಳೆಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಅವರು ನಮ್ಮ ವಿಶ್ವವಿದ್ಯಾಲಯದ ಚರಿತ್ರೆಯಲ್ಲಿ ಇದೊಂದು ದಾಖಲಾಗಬಹುದಾದ ಕಾರ್ಯ. ಇಷ್ಟೊಂದು ಪುಸ್ತಕ ಒಂದೇ ಬಾರಿ ಲೋಕಾರ್ಪಣೆಗೊಳ್ಳುವುದು ವಿಶ್ವವಿದ್ಯಾಲಯದ ಘನತೆ ಗೌರವವನ್ನು ಹೆಚ್ಚಿಸಿದೆ. ಪ್ರಸಾರಾಂಗದ ಪ್ರಚಾರೋಪನ್ಯಾಸದಲ್ಲಿ ಮೂಡಿ ಬಂದ ಹದಿಮೂರು ಪುಸ್ತಕಗಳು ಲೋಕಾರ್ಪಣೆಗೊಳ್ಳುವುದು ಅತ್ಯಂತ ಸಂತೋಷದ ಸಂಗತಿ. ಮುಂದೆ ಇನ್ನಷ್ಟು ಕಾರ್ಯ ಪ್ರಸಾರಾಂಗದಿಂದ ಆಗಲಿ. ಇಲ್ಲಿ ಬಿಡುಗಡೆ ಆದ ಪುಸ್ತಕಗಳು ನಾಡಿನ ಶ್ರೇಷ್ಠ ವಿದ್ವಾಂಸರ ಕೃತಿಗಳಾಗಿವೆ. ಇವುಗಳ ಜೊತೆಗೆ ರಾಣಿ ಚನ್ನಮ್ಮ ಅಧ್ಯಯನ ಪೀಠದವತಿಯಿಂದಲೂ ಐದು ಸಂಶೋಧನಾಧಾರಿತವಾದ ಪುಸ್ತಕಗಳು ಲೋಕಾರ್ಪಣೆಗೊಂಡಿರುವುದು ಅಧ್ಯಯನ ಪೀಠದ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತಿದೆ. ಈ ಎರಡು ಕಾರ್ಯಗಳೂ ಸ್ತುತ್ಯರ್ಹವಾದುದು. ಇಂತಹ ಬೌದ್ಧಿಕ ಕಾರ್ಯಚಟುವಟಿಕೆಗಳು ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ನಡೆಯಬೇಕು. ಈ ಕಾರ್ಯದಲ್ಲಿ ಹೊರಗಿನ ವಿದ್ವಾಂಸರು ಕೈಜೋಡಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಪುಸ್ತಕದ ಲೇಖಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕುಲಸಚಿವರಾದ ರಾಜಶ್ರೀ ಜೈನಾಪುರ, ಮೌಲ್ಯ ಮಾಪನ ಕುಲಸಚಿವರಾದ ಪ್ರೊ. ಶಿವಾನಂದ ಗೊರನಾಳೆ, ರಾಣಿ ಚನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ. ಎಸ್. ಎಂ. ಗಂಗಾಧರಯ್ಯ ಉಪಸ್ಥಿತರಿದ್ದರು. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎಸ್. ಬಿ. ಆಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ನಮ್ಮ ಪ್ರಸಾರಾಂಗದಿಂದ ಹದಿನೆಂಟು ಪುಸ್ತಕಗಳು ಏಕಕಾಲದಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಇದು ಪ್ರಸಾರಾಂಗಕ್ಕೆ ಉತ್ತಮ ಭೂಮಿಕೆಯನ್ನು ಒದಗಿಸಲಿದೆ ಎಂದರು. ಸಹಾಯಕ ನಿರ್ದೇಶಕರಾದ ಡಾ. ಪಿ. ನಾಗರಾಜ ಸ್ವಾಗತಿಸಿದರು. ಡಾ. ಗಜಾನನ ನಾಯ್ಕ ನಿರೂಪಿಸಿದರು. ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಹೇಶ ಗಾಜಪ್ಪನವರ್ ವಂದಿಸಿದರು. ವಿದ್ಯಾರ್ಥಿ ಭರತ್ ಗುರವ ಪ್ರಾರ್ಥಿಸಿದರು.


Leave a Reply