ಬೆಳಗಾವಿ ೨೧: ಇಂದಿನ ಯುವ ನ್ಯಾಯವಾದಿಗಳು ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯ ಕ್ಷೇತ್ರದಲ್ಲಿ ಇರುವ ಉಜ್ವಲ ಅವಕಾಶಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಳಗಾವಿಯ ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಮತ್ತು ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ತಿಳಿಸಿದರು.
ಶುಕ್ರವಾರ ನಗರದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ವ್ಯಾಪಾರ ಅಭಿವೃದ್ಧಿ ಉತ್ತೇಜನ ಕೇಂದ್ರಗಳ ವತಿಯಿಂದ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರಸಭಾಗೃಹದಲ್ಲಿ ನಡೆದ ಬೌದ್ಧಿಕ ಆಸ್ತಿ ಹಕ್ಕುಗಳು-ಸಾಧನಗಳು, ಸಂಶೋಧನೆ ಮತ್ತು ವ್ಯವಹಾರದಲ್ಲಿ ಅವುಗಳ ಮಹತ್ವ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು ಅತ್ಯಂತ ಮಹತ್ವ ಹೊಂದಿವೆ. ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಮತ್ತು ಮಹತ್ವ ವಿವರಿಸಿದ ಅವರು ಕೃತಿಸ್ವಾಮ್ಯ, ವ್ಯಾಪಾರ ಗುರುತು, ಭೌಗೋಳಿಕ ಸೂಚ್ಯಂಕಗಳ ಹಾಗೂ ಇವುಗಳ ರಕ್ಷಣೆಯ ಮಹತ್ವ ವಿವರಿಸಿ ಇಂದಿನ ಯುವ ನ್ಯಾಯವಾದಿಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.
ಇಂದು ಅಗತ್ಯವಾಗಿ ನಮ್ಮಲ್ಲಿರುವ ಜ್ಞಾನ ಹಾಗೂ ಆವಿಷ್ಕಾರಗಳ ರಕ್ಷಣೆಯ ಕುರಿತು ತಿಳಿದುಕೊಂಡು ಮುನ್ನಡೆಯಬೇಕು. ಹೊಸ ಆವಿಷ್ಕಾರಗಳು ಸಮಾಜ ಹಾಗೂ ಪರಿಸರದ ರಕ್ಷಣೆಯನ್ನುಂಟು ಮಾಡುವ ಆವಿಷ್ಕಾರಗಳು ಆಗಿರಬೇಕು. ಆದರೆ ಅವು ಸಮಾಜಕ್ಕೆ ಮಾರಕವಾಗಿರಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಿ. ಜಯಸಿಂಹ ಮಾತನಾಡಿ, ವಿದ್ಯಾರ್ಥಿಗಳು ಬೌದ್ಧಿಕ ಆಸ್ತಿ ಹಕ್ಕು ಕಾರ್ಯಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆನೀಡಿದರು. ಅಂತೆಯೆ ಭವಿಷ್ಯತ್ತಿನಲ್ಲಿ ಅದರ ಪ್ರಯೋಜಗಳ ಕುರಿತು ಮನವರಿಗೆ ಮಾಡಿಕೊಟ್ಟರು.
ಕಾರ್ಯಾಗಾರದಲ್ಲಿ ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಂಯೋಜಕಿ ಪ್ರಭಾವತಿ ರಾವ್, ಬೆಂಗಳೂರು ಅಲ್ಟಾಸಿಟ್ ಗ್ಲೋಬಲ್ ಮುಖ್ಯಸ್ಥೆ ಸೌಮ್ಯಶ್ರೀ ಮತ್ತು ಬೆಂಗಳೂರಿನ ಭೌಗೋಳಿಕ ಸೂಚ್ಯಂಕಗಳ ಪರಿಶೀಲನಾ ವಿಭಾಗದ ವಿಶೇಷ ತಜ್ಞೆ ನಂದಿನಿ ದೊಲೇಪತ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ತೇಜಸ್ವಿನಿ ವಾವರೆ ಪ್ರಾರ್ಥಿಸಿದರು. ಡಾ.ಜ್ಯೋತಿ ಜಿ.ಹಿರೇಮಠ ಸ್ವಾಗತ ಹಾಗೂ ಪರಿಚಯಿಸಿದರು. ತೇಜಸ್ವಿನಿ ಖಿಮಜಿ ನಿರೂಪಿಸಿದರು. ಡಾ.ಅಶ್ವಿನಿ ಹಿರೇಮಠ ವಂದಿಸಿದರು.
Gadi Kannadiga > Local News > ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ ನ್ಯಾಯವಾದಿಗಳು ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಡಾ.ಆನಂದ ದೇಶಪಾಂಡೆ ಸಲಹೆ
ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ ನ್ಯಾಯವಾದಿಗಳು ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಡಾ.ಆನಂದ ದೇಶಪಾಂಡೆ ಸಲಹೆ
Suresh21/07/2023
posted on
