ಬೆಳಗಾವಿ ಸುವರ್ಣಸೌಧ ಡಿ.೨೭. : ಅಮೃತ್ ನಗರೋತ್ಥಾನ-೪ನೇ ಹಂತದಲ್ಲಿ ಹಾಸನ ನಗರಕ್ಕೆ ರೂ.೪೦ ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಅಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆ ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಮಾನದಂಡಗಳನುಸಾರ ಟೆಂಡರ್ ಕರೆಯಲಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.
ವಿಧಾನಪರಿಷತ್‌ನಲ್ಲಿ ಮಂಗಳವಾರ ಶಾಸಕ ಸೂರಜ್ ರೇವಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಕಾಮಗಾರಿ ಕೆಲಸಗಳಿಗೆ ಪೂರ್ಣಗೊಳಿಸುವ ಅವಧಿ, ವಾರ್ಷಿಕ ಆದಾಯ ಮತ್ತು ಲೈನ್ ಆಫ್ ಕ್ರೆಡಿಟ್ ಮೊತ್ತವನ್ನು ಆರ್ಥಿಕ ಇಲಾಖೆ ಆದೇಶದ ಅನುಸಾರವೇ ನಿಗದಿಪಡಿಸಲಾಗಿದೆ. ಆರ್ಥಿಕ ಇಲಾಖೆ ಆದೇಶ ಉಲ್ಲಂಘನೆಯಾಗಿರುವುದಿಲ್ಲ. ನಗರೋತ್ಥಾನ ಯೋಜನೆ ಅನುಷ್ಠಾನದ ನಿಯಮಾವಳಿಗಳಲ್ಲಿ ಬದಲಾವಣೆ ತರಲಾಗಿದೆ. ಜಿಲ್ಲಾ ಮಟ್ಟದ ಸಮಿತಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಿದೆ ಎಂದು ಹೇಳಿದರು.
ಶಾಸಕ ಸೂರಜ್ ರೇವಣ್ಣ ಮಾತನಾಡಿ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಒಟ್ಟುಗೂಡಿಸಿ ರೂ.೨೬.೧೯ ಕೋಟಿಗಳಿಗೆ ಟೆಂಡರ್ ಕರೆಯಲಾಗಿದೆ. ಮುಖ್ಯ ಇಂಜಿನಿಯರ್ ಆರ್ಥಿಕ ನಿಯಮಗಳನ್ನು ಉಲಂಘಿಸಿ ಟೆಂಡರ್‌ನ್ನು ಗುತ್ತಿಗೆದಾರರಿಗೆ ನೀಡಿದ್ದಾರೆ. ಆರ್ಥಿಕ ಇಲಾಖೆ ನಿಯಮಾನುಸಾರ ಕಾಮಗಾರಿಯ ಮೊತ್ತದ ಎರಡಷ್ಟು ವಾರ್ಷಿಕ ಆದಾಯನ್ನು ಗುತ್ತಿಗೆದಾರ ಕಂಪನಿ ಹೊಂದಿರಬೇಕು. ಇದರ ಅನುಸಾರ ಗುತ್ತಿಗೆದಾರ ಆದಾಯ ರೂ.೫೨.೩೮ ಕೋಟಿಯಾಗುತ್ತದೆ. ಆದರೆ ಮುಖ್ಯ ಇಂಜಿನಿಯರ್ ರೂ.೩೪ಕೋಟಿಗೆ ಇದನ್ನು ಇಳಿಸಿದ್ದಾರೆ. ಅಲ್ಲದೆ ಲೈನ್ ಆಫ್ ಕ್ರೆಡಿಟ್ ಮೊತ್ತವನ್ನೂ ರೂ.೭.೮೫ಕೋಟಿಯಿಂದ ರೂ.೬.೫೫ ಕೋಟಿ ಇಳಿಸಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಿಡಗುಂದಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರುದ್ದ ಕ್ರಮ: ೧೪ನೇ ಹಣಕಾಸು ಯೋಜನೆಯಡಿ ನಿಡಗುಂದಿ ಪಟ್ಟಣ ಪಂಚಾಯಿತಿ ವಾರ್ಡ ನಂ.೦೨ ರಲ್ಲಿ ಮಂಜೂರಾದ ರಸ್ತೆ ನಿರ್ಮಾಣದ ಕ್ರಿಯಾಯೋಜನೆಯಡಿ ನಿಯಮಬಾಹಿರವಾಗಿ ರಸೆ ನಿರ್ಮಾಣ ವಿಸ್ತರಣೆಯನ್ನು ಕೈಗೊಂಡ ಪಟ್ಟಣ ಪಂಚಾಯಿತಿ ಹಿಂದಿನ ಮುಖ್ಯಾಧಿಕಾರಿ ಡಿ.ಎನ್.ತಹಶೀಲ್ದಾರ್ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಎಂ.ಟಿ.ಬಿ.ನಾಗರಾಜ್ ಸ್ಪಷ್ಟಪಡಿಸಿದರು.
ಶಾಸಕ ಸುನೀಲ್‌ಗೌಡ ಪಾಟೀಲ್ ಪರವಾಗಿ ವಿಧಾನ ಪರಿಷತ್‌ನಲ್ಲಿ ಶಾಸಕ ಪ್ರಕಾಶ್ ರಾಥೋಡ್ ಅವರು ಕೆಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಉತ್ತರಿಸಿದರು.
ಮೂಲ ಹುದ್ದೆ ಪ್ರಥಮ ದರ್ಜೆ ಸಹಾಯಕರಾದ ಡಿ.ಎನ್.ತಹಶೀಲ್ದಾರ್ ಮುಖ್ಯಾಧಿಕಾರಿಯಾಗಿ ಪ್ರಭಾರಿ ಕರ್ತವ್ಯದಲ್ಲಿದ್ದ ವೇಳೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ವಿಸ್ತರಣೆಗೆ ಸಮಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆಯದೆ ಕಾಮಗಾರಿ ನಿರ್ವಹಿಸಿ ಬಿಲ್ ಪಾವತಿ ಮಾಡಿ ಕರ್ತವ್ಯ ಲೋಪ ಎಸಿಗಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಪೌರಾಡಳಿತ ನಿರ್ದೇಶನಾಲಯಕ್ಕೆ ವರದಿ ಮಾಡಿದ್ದಾರೆ. ಇದರ ಅನುಸಾರ ದೋಷಾರೋಪಣ ಪಟ್ಟಿ ಜಾರಿಗೊಳಿಸಿ ಪ್ರಕರಣದ ಸತ್ಯಾಸತ್ಯತೆ ಪರಾಮರ್ಶೆಗೆ ಇಲಾಖೆ ವಿಚಾರಣೆ ನಡೆಸಲು ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗಿದೆ. ವಿಚಾರಣೆ ಬಳಿಕ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
Suresh27/12/2022
posted on