ಬೆಂಗಳೂರು : ಅನುಭಾವ ಮೀಡಿಯಾ ಹೌಸ್ ಅಸೋಸಿಯೇಷನ್ ಅಡಿಯಲ್ಲಿ ಪ್ರೊ. ಸಿದ್ದು ಯಾಪಲಪರವಿ ಸ್ಥಾಪಿಸಿದ ವಚನ ಟಿವಿ ದುಬೈಯಲ್ಲಿ ನ.೨೯ ರಂದು ಕೊಡ ಮಾಡುವ ತನ್ನ ಮೊದಲ ವರ್ಷದ ರಾಷ್ಟ್ರೀಯ ಪುರಸ್ಕಾರಗಳನ್ನು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶೇಷ ಸಾಧಕರನ್ನು ಆಯ್ಕೆ ಮಾಡಿದೆ.
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ (ಬಸವ ಧರ್ಮ ಪೀಠದ ಶ್ರೀ ಮಹಾಜಗದ್ಗುರು ಲಿಂಗಾನಂದ ಶ್ರೀ ವಚನ ಟಿವಿ ರಾಷ್ಟ್ರೀಯ ಪುರಸ್ಕಾರ), ಕಲಬುರ್ಗಿ ಶರಣಬಸವೇಶ್ವರ ಸಂಸ್ಥಾನದ ಡಾ. ದಾಕ್ಷಾಯಣಿ ಶರಣಬಸವಪ್ಪ ಅಪ್ಪಾ ಅವರಿಗೆ
(ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗಶ್ರೀ ವಚನ ಟಿವಿ ರಾಷ್ಟ್ರೀಯ ಪುರಸ್ಕಾರ), ಖ್ಯಾತ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರಿಗೆ (ತರಳಬಾಳು ಜಗದ್ಗುರು ಶಿವಕುಮಾರಶ್ರೀ ವಚನ ಟಿ.ವಿ ರಾಷ್ಟ್ರೀಯ ಪುರಸ್ಕಾರ)
ಬಸವ ಧರ್ಮ ಪೀಠದ ಜಗದ್ಗುರು ಡಾ. ಮಾತೆ ಗಂಗಾದೇವಿ ಅವರಿಗೆ (ಇಲಕಲ್ಲಿನ ಡಾ. ಮಹಾಂತಶ್ರೀ ವಚನ ಟಿವಿ ರಾಷ್ಟ್ರೀಯ ಪುರಸ್ಕಾರ), ಶರಣ ಚಿಂತಕ ಹಾರೋಗೇರಿಯ ಐ.ಆರ್. ಮಠಪತಿ ಅವರಿಗೆ (ಭಾಲ್ಕಿ ಡಾ. ಚನ್ನಬಸವ ಪಟ್ಟದ್ದೇವರ ವಚನ ಟಿ.ವಿ. ರಾಷ್ಟ್ರೀಯ ಪುರಸ್ಕಾರ), ಖ್ಯಾತ ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜಕುಮಾರ ಅವರಿಗೆ (ಕಲಬುರ್ಗಿಯ ಡಾ. ಶರಣಬಸವಪ್ಪ ಅಪ್ಪಾ ವಚನ ಟಿವಿ ರಾಷ್ಟ್ರೀಯ ಪುರಸ್ಕಾರ), ಪ್ರೊ. ವಿಜಯಲಕ್ಷ್ಮಿ ಹಾಗೂ ಪತ್ರಕರ್ತ ಗುರುನಾಥ ಗಡ್ಡೆ ಅವರಿಗೆ (ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ವಚನ ಟಿವಿ ರಾಷ್ಟ್ರೀಯ ಪುರಸ್ಕಾರ) ದಂಪತಿಗಳಿಗೆ ನೀಡಲಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹಾಗೂ ಇಲಕಲ್ಲಿನ ಶ್ರೀ ಗುರುಮಹಾಂತ ಸ್ವಾಮಿಗಳು ಆಯ್ಕೆ ಮಾಡಿದ್ದಾರೆ. ಈ ಕುರಿತು ಸಂಚಾಲಕರಾದ ಅಲ್ಲಮಪ್ರಭು ನಾವದಗೇರೆ ಹಾಗೂ ಎಸ್.ಎಂ. ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



