ಆಗಸ್ಟ್ 18 ರಂದು ಡಾ. ಸ. ಜ. ನಾಗಲೋಟಿಮಠ ಪ್ರತಿಮೆ ಅನಾವರಣ

Murugesh Shivapuji
ಆಗಸ್ಟ್ 18 ರಂದು ಡಾ. ಸ. ಜ. ನಾಗಲೋಟಿಮಠ ಪ್ರತಿಮೆ ಅನಾವರಣ
WhatsApp Group Join Now

ಬೆಳಗಾವಿ; ಅಂತರಾಷ್ಟ್ರೀಯ ಖ್ಯಾತಿಯ ವೈದ್ಯವಿಜ್ಞಾನಿ, ಡಾ. ಬಿ. ಸಿ. ರಾಯ್ ಪ್ರಶಸ್ತಿ ವಿಭೂಷಿತ ಡಾ. ಸ. ಜ. ನಾಗಲೋಟಿಮಠ ಅವರ ಪ್ರತಿಮೆ ಅನಾವರಣವು ಬಸವ ಕಾಲೋನಿಯಲ್ಲಿ ಆಗಸ್ಟ್ 18ರಂದು ಜರುಗಲಿದೆ.
ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಶಾಸಕ ಆಸಿಫ್ ಸೇಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿಮೆ ಅನಾವರಣ ಸಮಾರಂಭದಲ್ಲಿ ಸಚಿವ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ ಸಂಸದ ಜಗದೀಶ ಶೆಟ್ಟರ ಶಾಸಕ ಅಭಯ ಪಾಟೀಲ ಸೇರಿದಂತೆ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

*ಡಾ. ಸ. ಜ. ನಾಗಲೋಟಿಮಠ* ಪರಿಚಯ :

ಡಾ. ಸ. ಜ. ನಾಗಲೋಟಿಮಠ ಅವರು ವೈದ್ಯರಾಗಿ, ಸಮಾಜ ಸೇವಕರಾಗಿ ಮತ್ತು ಬರಹಗಾರರಾಗಿ ಮಹತ್ವದ ಬದುಕು ನಡೆಸಿದ ಚೇತನ.
ಡಾ. ಎಸ್. ಜೆ. ನಾಗಲೋಟಿಮಠ ಅವರು 1940ರ ಜುಲೈ 20ರಂದು ಗದಗದಲ್ಲಿ ಜನಿಸಿದರು. ತಂದೆ ಜಂಬಯ್ಯ ವೀರಬಸಯ್ಯ ಅವರು ಮತ್ತು ತಾಯಿ ಹಂಪವ್ವ.
ನಾಗಲೋಟಿಮಠ ಅವರ ಆತ್ಮಕಥನವಾದ ‘ಬಿಚ್ಚಿದ ಜೋಳಿಗೆ’ಯಲ್ಲಿ ಹೇಗೆ ಬಡತನವು ಜಗತ್ತಿನ ಅತಿ ಶ್ರೇಷ್ಠ ವಿಶ್ವವಿದ್ಯಾಲಯ ಎಂಬ ಬಗ್ಗೆ ಹೇಳುತ್ತಾರೆ. ತಮ್ಮ ಬಾಲ್ಯ, ಯೌವನ ಮತ್ತು ಕಾಲೇಜು ದಿನಗಳ ಕುರಿತು ಹೇಳುವಾಗ “ತಂದೆಯ ಮರಣದ ಬದುಕು ತುಂಬಾ ದಯನೀಯವಾಗಿತ್ತು, ಅವಮರ್ಯಾದೆಗಳು ಮುತ್ತಿದ್ದವು. ವರ್ಷಕ್ಕೆ 2 ಜೊತೆ ಬಟ್ಟೆ ಮಾತ್ರ ಇದ್ದವು” ಎಂಬ ತಮ್ಮ ಬದುಕಿನ ಚಿತ್ರಣ ನೀಡುತ್ತಾರೆ. ಆದರೆ ಇವು ಅವರನ್ನು ಸಾಧನೆಯ ಗುರಿಯಿಂದ ಕದಲಿಸಲಿಲ್ಲ.

ನಾಗಲೋಟಿಮಠರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ನಡೆಯಿತು. ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಓದಿ ಮುಂದೆ ವೈದ್ಯಕೀಯ ಶಿಕ್ಷಣವನ್ನು ಆಯ್ದುಕೊಂಡರು. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿನ್ನದ ಪದಕದೊಡನೆ ವೈದ್ಯ ಪದವಿ ಗಳಿಸಿದರು. 1969ರಲ್ಲಿ ರೋಗ ನಿದಾನ ಶಾಸ್ತ್ರದಲ್ಲಿ ಡಿ.ಸಿ.ಪಿ. ಮತ್ತು 1970ರಲ್ಲಿ ಎಂ.ಡಿ. ಪದವಿಗಳನ್ನು ಗಳಿಸಿದರು.

ಅಸಹನೀಯ ಬದುಕಿನ ಮಧ್ಯೆ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿದ ನಾಗಲೋಟಿಮಠ ಅವರು ಬದುಕನ್ನು ಮಾನವೀಯ ನೆಲೆಗಳಲ್ಲಿ ಕಂಡುಕೊಂಡರು.

ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ರೋಗ ನಿದಾನ ಶಾಸ್ತ್ರದ ಉಪನ್ಯಾಸಕರಾಗಿ ಸೇರಿದ ನಾಗಾಲೋಟಿಮಠರು, ಹಲವಾರು ಕಡೆ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಹುದ್ದೆಗಳನ್ನು ನಿರ್ವಹಿಸಿದರು.

ನಾಗಲೋಟಿಮಠರು ಪ್ರಾಚಾರ್ಯರಾಗಿ ಹೊದೆಡೆಯಲ್ಲೆಲ್ಲಾ ಮ್ಯೂಸಿಯಂಗಳನ್ನು ಸ್ಥಾಪಿಸಿದರು. ಬೆಳಗಾವಿಯ ಜೆ.ಎನ್. ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸಿದ ಮ್ಯೂಸಿಯಂ ಏಷಿಯಾ ಖಂಡದಲ್ಲೆ ರೋಗ ನಿದಾನ ಶಾಸ್ತ್ರದ ಪ್ರಥಮ ಮ್ಯೂಸಿಯಂ. ವಿಜಾಪುರದ ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜಿನಲ್ಲಿ ಅತಿದೊಡ್ಡ ದೇಹದ ಹರಳುಗಳ ಮ್ಯೂಸಿಯಂ ಸ್ಥಾಪಿಸಿದರು.

ನಾಗಲೋಟಿಮಠರು ಸಂದರ್ಶಕ ಪ್ರಾಧ್ಯಾಪಕರಾಗಿ ಅಮೆರಿಕಾ, ಕೆನಡಾ, ಹಾಂಗ್ಕಾಂಗ್, ಚೀನಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಝರ್ಲ್ಯಾಂಡ್, ಆಸ್ಟ್ರಿಯಾ, ಲಕ್ಸೆಂಬರ್ಗ್, ಸ್ಪೇನ್ಗಳಿಗೆ ಭೇಟಿ ನೀಡಿದ್ದರು. ಅವರಿಗೆ ಹಲವಾರು ಸಂಘ ಸಂಸ್ಥೆಗಳ ಒಡನಾಟವಿತ್ತು. ಇಂಡಿಯನ್ ಕಾಲೇಜ್ ಆಫ್ ಪೆಥಾಲಜಿ ಸಂಸ್ಥೆಯ ಕಾರ್ಯದರ್ಶಿ, ಅಂತಾರಾಷ್ಟ್ರೀಯ ರೋಗ ನಿದಾನ ಶಾಸ್ತ್ರಗಳ ಸಂಘದ ಕಾರ್ಯದರ್ಶಿ ಆಗಿದ್ದರು.

ನಾಗಲೋಟಿಮಠರು ಹಲವಾರು ವೈದ್ಯ ನಿಯತಕಾಲಿಕಗಳ ಸಂಪಾದಕರಾಗಿದ್ದರು. ಇಂಗ್ಲಿಷ್ನಲ್ಲಿ 14 ಗ್ರಂಥಗಳನ್ನು ರಚಿಸಿದ್ದರು. ಕನ್ನಡದಲ್ಲಿ ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್ ಸರ್ಜರಿ, ಪರಿಸರ ಮಾಲಿನ್ಯ, ಸತ್ತ ಮೇಲೆ ಸಮಾಜ ಸೇವೆ, ಶ್ರೀಸಾಮಾನ್ಯ ಮತ್ತು ವೈದ್ಯ, ಸ್ವಾಸ್ಥ್ಯ ಸಂಗಾತಿ, ವೈದ್ಯಕೀಯ ವಿಶ್ವಕೋಶ, ಆತ್ಮಚರಿತ್ರೆಯಾದ ಬಿಚ್ಚಿದ ಜೋಳಿಗೆ ಸರಿದಂತೆ 42 ಕೃತಿಗಳನ್ನು ರಚಿಸಿದ್ದರು.

ನಾಗಲೋಟಿಮಠ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ, ಡಾ. ಬಿ.ಸಿ. ರಾಯ್ ಪ್ರಶಸ್ತಿ, ವಿ. ಎಸ್. ಮುಂಗಳಿಕ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಅಲೆಂಬಿಕ್ ಸಂಶೋಧನಾ ಪ್ರಶಸ್ತಿ ಮೊದಲಾದ ಅನೇಕ ಗೌರವಗಳು ಸಂದಿದ್ದವು.

ಡಾ. ಎಸ್. ಜೆ. ನಾಗಲೋಟಿಮಠ ಅವರು 2006ರ ಜುಲೈ 24ರಂದು ಈ ಲೋಕವನ್ನಗಲಿದರು.

WhatsApp Group Join Now
Telegram Group Join Now
Share This Article
error: Content is protected !!