This is the title of the web page
This is the title of the web page

Please assign a menu to the primary menu location under menu

State

ಮೇ 2 ರಂದು ಮೋದಿ ವಿಜಯನಗರ ಜಿಲ್ಲೆಗೆ ಭೇಟಿ-ಮುರಾರಿಗೌಡ 


ಬಳ್ಳಾರಿ,ಏ.24-ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 2 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಾರಿಗೌಡ ಹೇಳಿದರು.
ಇಲ್ಲಿನ ವಾಜಪೇಯಿ ಲೇಔಟ್ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತಪ್ರಚಾರ ಕೈಗೊಳ್ಳಲು ಬಿಜೆಪಿಯ ರಾಷ್ಟ್ರೀಯ ಅಗ್ರ ನಾಯಕರು ಮತ್ತು ರಾಜ್ಯದ ಧುರೀಣರು ಆಗಮಿಸಲಿದ್ದಾರೆ. ಪ್ರಧಾನಿ ಅವರು ಪ್ರತಿ 10 ವಿಧಾನಸಭಾ ಕ್ಷೇತ್ರಗಳನ್ನು ಒಗ್ಗೂಡಿಸಿ ಒಂದು ಕಡೆ ಸಭೆ ನಡೆಸಲಿದ್ದಾರೆ. ಅದರಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನೊಳಗೊಂಡಂತೆ ಹೊಸಪೇಟೆಯಲ್ಲಿ ಬಿಜೆಪಿಯಿಂದ ಆಯೋಜಿಸಿದ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ ಎಂದರು.
ನಾಳೆ ಬಳ್ಳಾರಿಗೆ ಕೃಷ್ಣಪಾಲ್ ಗುಜ್ಜಾರ್:
ಬಳ್ಳಾರಿ ನಗರ ಮತ್ತು ಗ್ರಾಮೀಣ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರಕ್ಕಾಗಿ ಸ್ಟಾರ್ ಪ್ರಚಾರಕರಾದ ಕೇಂದ್ರ ಇಂಧನ ಸಚಿವ ಕೃಷ್ಣಪಾಲ್ ಗುಜ್ಜಾರ್ ನಾಳೆ ನಗರಕ್ಕೆ ಆಗಮಿಸಲಿದ್ದಾರೆ. ನಾಡಿದ್ದು ಕೂಡ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಅಮಿತ್ ಷಾ, ನಿತಿನ್ ಗಡ್ಕರಿ ಅವರು ರಾಜ್ಯದಾದ್ಯಂತ ಸಂಚರಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಪ್ರಚಾರಕರಾಗಿ ಬಿಜೆಪಿ ಓಬಿಸಿ ರಾಷ್ಟ್ರೀಯ ಮಂಡಳಿಯ ಲಕ್ಷ್ಮಣ್, ಸಂಡೂರು ಕ್ಷೇತ್ರಕ್ಕೆ ಮೆಹಬೂಬ ನಗರದ ಮಾಜಿ ಸಂಸದರಾದ ಜಿತೇಂದ್ರರೆಡ್ಡಿ, ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ವೈ.ಎಂ.ಸತೀಶ್, ಕಂಪ್ಲಿಗೆ ಮಾಜಿ ಸಂಸದೆ ಜೆ.ಶಾಂತಾ ಪ್ರಚಾರ ಕಾರ್ಯದಲ್ಲಿ ಎರಡು ದಿನ ಪಾಲ್ಗೊಳ್ಳಲಿದ್ದಾರೆ. ಈವೇಳೆ ದಾರ್ಶನಿಕರ ಪುತ್ಥಳಿಗಳನ್ನು ಸ್ವಚ್ಛಗೊಳಿಸಿ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮವೂ ಏರ್ಪಡಿಸಲಾಗಿದೆ ಎಂದರು.
ಗುಜರಾತ್, ಯುಪಿ ಮಾದರಿ:
ಗುಜರಾತ್ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಈ ಬಾರಿ ಕರ್ನಾಟಕದಲ್ಲಿ 72 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. 12 ಜನ ಮಹಿಳೆಯರಿಗೆ ಮತ್ತು 9 ಜನ ವೈದ್ಯರನ್ನೊಳಗೊಂಡಂತೆ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳಾಗಿದ್ದವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಸಂಡೂರು ಕ್ಷೇತ್ರಕ್ಕೆ ಡಿ.ರಾಘವೇಂದ್ರ ಅವರ ಪತ್ನಿ ಶಿಲ್ಪ ಅವರಿಗೆ ಟಿಕೆಟ್ ನೀಡಲಾಗಿದ್ದು, ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಬಿಜೆಪಿ ಮಾಡಿದ ಅಭಿವೃದ್ಧಿಗಳನ್ನು ಮನೆ ಮನೆಗೆ ಭೇಟಿ ನೀಡಿ ತಲುಪಿಸುವ ಕಾರ್ಯ ನಡೆದಿದೆ. ಎಲ್ಲ ಸಮುದಾಯಗಳನ್ನು, ಎಲ್ಲ ವರ್ಗದ ಜನರು, ಮಠಾಧೀಶರು, ಮಠ ಮತ್ತು ಮಂದಿರಗಳಿಗೂ ತೆರಳಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಸಿಎಂ, ಮಾಜಿ ಸಿಎಂ ಕೂಡ ಸಂಚಾರ:
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅದೇನೇ ಹರಸಾಹಸ ಮಾಡಿದರೂ ಬಿಜೆಪಿಯನ್ನು ಗೆಲ್ಲಿಸಲು ಭಾರತೀಯ ಜತನಾ ಪಾರ್ಟಿ ಸನ್ನದ್ಧವಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದಿಯಾಗಿ ಅನೇಕರು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಸ್ಟಾರ್ ನಟರಾದ ತೆಲುಗಿನ ಪವನ್ ಕಲ್ಯಾಣ್, ಸುದೀಪ್, ದರ್ಶನ್ ಅವರು ಕೂಡ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದು ಖಚಿತವೆಂದು ಹೇಳಿದರು.
ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರರಾದ ಡಾ.ಬಿಕೆ ಸುಂದರ್, ಪ್ರಧಾನಕಾರ್ಯದರ್ಶಿ ಡಾ.ಕೆಎಸ್ ಅಶೋಕ್ ಕುಮಾರ್, ಮಾಧ್ಯಮ ಸಂಚಾಲಕರಾದ ರಾಜೀವ್ ತೊಗರಿ, ಸಹ ವಕ್ತಾರರಾದ ದರೋಜಿ ರಮೇಶ್, ಮುಖಂಡರಾದ ಅಡವಿಸ್ವಾಮಿ ಈ ಸುದ್ದಿಗೋಷ್ಠಿಯಲ್ಲಿದ್ದರು.
——

Leave a Reply