This is the title of the web page
This is the title of the web page

Please assign a menu to the primary menu location under menu

Local News

ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಸರ್ಕಾರದ ಸೌಲಭ್ಯಗಳು ಸಮರ್ಪಕ ಬಳಕೆ ಆಗಲಿ: ಈರಣ್ಣ ಕಡಾಡಿ


ಬೆಳಗಾವಿ,ಆ.೧೬: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ಜಾರಿಗೆ ತರುವ ಸಾಲಸೌಲಭ್ಯಗಳನ್ನು ಕಲ್ಪಿಸಲು ಬ್ಯಾಂಕುಗಳು ಸಹಕರಿಸಬೇಕು. ವಿನಾಕಾರಣ ನೆಪವೊಡ್ಡಿ ಸೌಲಭ್ಯ ನಿರಾಕರಿಸಬಾರದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಆ.೧೬) ನಡೆದ ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ೧೫ ಅಂಶಗಳ ಕಾರ್ಯಕ್ರಮಗಳಡಿ ಜಿಲ್ಲೆಗೆ ಒಟ್ಟಾರೆ ೪೦೮ ಕೋಟಿ ರೂಪಾಯಿ ಅನುದಾನ ಹಾಗೂ ಸಾಲ-ಸೌಲಭ್ಯಗಳನ್ನು ಸರಕಾರ ನೀಡುತ್ತಿದ್ದು, ಇದನ್ನು ಬಳಸಿಕೊಂಡು ಆರ್ಥಿಕ ಪ್ರಗತಿ ಯಾಕೆ ಸಾಧಿಸುತ್ತಿಲ್ಲ ಎಂದು ಕಡಾಡಿ ಪ್ರಶ್ನಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಿಂದ ೩೬೫ ಕೋಟಿ ಸಾಲ ಕಲ್ಪಿಸುವ ಗುರಿ ಇದ್ದು, ಅದರಂತೆ ೩೬೮ ಕೋಟಿ ಸಾಲ ಸೌಲಭ್ಯ ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಗುರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು, ತಾಂತ್ರಿಕ ದೋಷಗಳು ಎದುರಾಗದಂತೆ ಸಂಭಂದಿಸಿದ ವೆಬ್ ಸೈಟ್ ಮಾರ್ಪಡಿಸಬೇಕು. ಬಾಕಿ ಇರುವ ಅರ್ಜಿಗಳನ್ನು ೧೫ ದಿನಗಳ ಒಳಗಾಗಿ ಪೂರ್ಣಗಳಿಸಿಬೇಕು ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳ ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಂ) ನಿಧಿಯನ್ನು ಜಿಲ್ಲೆಯಲ್ಲಿ ಕೂಡ ಬಳಸಬೇಕು ಎಂದು ಅಧಿಕಾರಿಗಳಿಗೆ ಈರಣ್ಣ ಕಡಾಡಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಹೆಚ್ಚಿನ ಸಾಲ ಸೌಲಭ್ಯ ಒದಗಿಸಲು ಸೂಚನೆ:
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ೩೬೮ ಕೋಟಿ ರೂಪಾಯಿ ಸಾಲವನ್ನು ಡಿಸಿಸಿ ಬ್ಯಾಂಕಿನ ವತಿಯಿಂದ ಒದಗಿಸಲಾಗಿದ್ದು, ಇದನ್ನು ಬಳಸಿಕೊಂಡು ಸಮುದಾಯ ಆರ್ಥಿಕ ಪ್ರಗತಿ ಹೊಂದಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ೩೮ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿರುತ್ತದೆ. ಸೆಪ್ಟೆಂಬರ್ ೧ ರಂದು ಬ್ಯಾಂಕ್ ಗಳ ಸಭೆಯನ್ನು ಕರೆದು ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಆಟೋ-ಟ್ಯಾಕ್ಸಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಿ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಬಾಕಿ ಅರ್ಜಿಗಳ ವಿಲೇವಾರಿಗೆ ಕರೆ:
ಸಭೆಯಲ್ಲಿಯೇ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿದ ಜಿಲ್ಲಾಧಿಕಾರಿ ಅವರು, ಕಳೆದ ಮೂರು ವರ್ಷಗಳಿಂದ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ತಿಳಿಸಿದರು. ಅನುಮೋದನೆ ದೊರೆತ ತಕ್ಷಣವೇ ಸೌಲಭ್ಯಗಳನ್ನು ವಿವರಿಸುವಂತೆ ಅಧಿಕಾರಿಗಳಿಗೆ ಹೇಳಿದರು. ತೋಟಗಾರಿಕೆ, ರೇಷ್ಮೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಅಬ್ದುಲ್ ರಶೀದ್ ಮಿರ್ಜನ್ನವರ ಮಾತನಾಡಿ, ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನ, ಡಿ,ಎಡ್ ಹಾಗೂ ಬಿ,ಎಡ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಜೊತೆಗೆ ಎಂಪಿಎಲ್ ಹಾಗೂ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply