This is the title of the web page
This is the title of the web page

Please assign a menu to the primary menu location under menu

Local News

ಕವಿ ಡಾ. ಬಿ.ಎ. ಸನದಿಯವರು ಇಂದಿನ ಸಾಹಿತಿಗಳಿಗೆ ಮಾದರಿ ; ಮರಾಟೆ


ಬೆಳಗಾವಿ:ಆಗಷ್ಟ-೧೯: “ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾವ್ಯದ ಸೃಷ್ಟಿಯ ಮೂಲ ಸಾಮಾಜಿಕ ಪ್ರಜ್ಞೆಯಲ್ಲಿತ್ತು. ಬರ ಬರುತ್ತಾ ಅದು ತೀರ ವೈಯಕ್ತಿಕ ವಿಚಾರ, ಸಿದ್ಧಾಂತಗಳಿಗೆ ಸೀಮಿತವಾಗಿ ಸಮೂಹ ಪ್ರಜ್ಞೆ ಮರೆಯಾಗುತ್ತಿರುವುದು ವಿಷಾದಕರ. ಹಾಗಾಗದೆ ಕಾವ್ಯ ಸಮಾಜಮುಖಿ ಚಿಂತನೆ, ಸಮೂಹ ಪ್ರಜ್ಞೆ ಹಾಗೂ ಸಾಮರಸ್ಯ ಬಿತ್ತಿ ಬೆಳೆಯುವಂತಿರಬೇಕು. ಕಾವ್ಯ ತಪಸ್ಸಾಗಿ ಹೊರಹೊಮ್ಮಿ ಕವಿ ಇಂಥ ಚಿಂತನೆಗಳನ್ನು ಸೃಷ್ಟಿಸುವ ಮುಖೇನ ಪ್ರಸರಿಸಬೇಕು. ಅಂಥ ಕಾವ್ಯ ಸೃಷ್ಟಿಸಿದ ಮಾನವ್ಯ ಕವಿ ಡಾ. ಬಿ.ಎ. ಸನದಿಯವರು ಇಂದಿನ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ” ಎಂದು ಬೆಳಗಾವಿಯ ಹಿರಿಯ ಸಾಹಿತಿ ಡಾ. ರಾಮಕೃಷ್ಣ ಮರಾಟೆ ಅಭಿಪ್ರಾಯ ಪಟ್ಟರು.
ನಗರದ ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಟಾನ ದ ವತಿಯಿಂದ ಹಮ್ಮಿಕೊಳ್ಳಲಾದ ಐದಳ ಮಲ್ಲಿಗೆ-ಕಾವ್ಯ ಸುಗಂಧ ಬಿ. ಎ. ಸನದಿ ‘ಉಪನ್ಯಾಸ ಹಾಗೂ ಗೀತಗಾಯನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಜಾತಿ-ಮತ-ಪಂಥಗಳ ಹೆಸರಿನಲ್ಲಿ ಮನಸ್ಸುಗಳು ಒಡೆದು ಛಿದ್ರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮನುಷ್ಯ ಪ್ರೀತಿಯನ್ನು ಪರಸ್ಪರರಲ್ಲಿ ಹಂಚುವ ಜವಾಬ್ದಾರಿ ಸಾಹಿತಿಗಳಿಗಿದೆ” ಎಂದು ಹೇಳಿದರು.
ಸನದಿ ಸಾಹಿತ್ಯ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ. ಪಿ. ಜಿ. ಕೆಂಪಣ್ಣವರ ಮಾತನಾಡಿ, “ಕನ್ನಡ-ಮರಾಠಿ ಬಾಂಧವ್ಯದ ಶಮನೆವಾಡಿಯ ಪರಿಸರದಲ್ಲಿ ಸ್ನೇಹ ಪ್ರಕಾಶನ ಸ್ಥಾಪಿಸಿ, ಐದಳ ಮಲ್ಲಿಗೆಯೊಂದಿಗೆ ಕಾವ್ಯಲೋಕ ಪ್ರವೇಶಿಸಿದ ಕವಿ ಸನದಿಯವರು ವಿವಿಧ ಸಮುದಾಯದ ಐದು ಜನ ಗೆಳೆಯರ ಕವಿತೆ ಸೇರಿಸಿ ಐದಳ ಮಲ್ಲಿಗೆ ಕೃತಿ ಹೊರ ತಂದವರು. ತನ್ಮೂಲಕ ಸಮಸ್ಟಿ ಪ್ರಜ್ಞೆಯ ಸಾಮರಸ್ಯಕ್ಕೆ ಭಾಷ್ಯ ಬರೆದವರು” ಎಂದರು.
ಸನದಿ ಅವರ ಕಥಾ ಸಾಹಿತ್ಯದ ಕುರಿತು ಪ್ರೊ. ಬಿ. ಎಫ್. ಕಲ್ಲಣ್ಣವರ ಅವರು ಮಾತನಾಡಿ, “ಸನದಿಯವರು ಕಾವ್ಯ ಸೃಷ್ಟಿಯೊಂದಿಗೆ ಕಥಾ ಸಾಹಿತ್ಯದಲ್ಲಿಯೂ ಸಾಮರಸ್ಯ ಮೆರೆದವರು. ಅವರ ಕಥೆಗಳ ಆಶಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಶಾ ಯಮಕನಮರಡಿ ಹಾಗೂ ಹಮೀದಾಬೇಗಂ ದೇಸಾಯಿ ಸನದಿಯವರ ಗೀತೆಗಳನ್ನು ಹಾಡಿದರು.
ಎಂ. ವೈ. ಮೆಣಸಿನಕಾಯಿ, ಸುರೇಶ ಹಂಜಿ, ಆರ್.ಬಿ. ಬನಶಂಕರಿ, ಬಸವರಾಜ ಗಾರ್ಗಿ, ಶಂಕರ ಬಾಗೇವಾಡಿ, ಅಕ್ಬರ್ ಸನದಿ, ಎಸ್.ಎಸ್. ಪಾಟೀಲ, ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು, ಪ್ರಶಿಕ್ಷಣಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.
ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ನಿರ್ಮಲಾ ಬಟ್ಟಲ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎ. ಎ. ಸನದಿ ನಿರ್ವಹಿಸಿದರು. ಸಿ. ಎಂ. ಬೂದಿಹಾಳ ವಂದಿಸಿದರು.


Gadi Kannadiga

Leave a Reply