ಬೆಳಗಾವಿ: ಡಿಸೆಂಬರ:೧೦: “ಶಿಕ್ಷಣ ಕೆಲವೇ ಜನರ ಸ್ವತ್ತಾಗಿದ್ದ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಸ್ವಾತಂತ್ರ‍್ಯ ಬರುವ ನೂರು ವರ್ಷಗಳ ಮೊದಲೇ ಮಹಿಳೆಯರು ಹಾಗೂ ಶೂದ್ರ ಸಮುದಾಯದವರ ಮಕ್ಕಳಿಗಾಗಿ ಮೊಟ್ಟ ಮೊದಲ ಶಾಲೆ ಆರಂಭಿಸಿದ ಕೀರ್ತಿ ಅಕ್ಷರದ ತಾಯಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ತಾತ್ಪರಿಣಾಮವಾಗಿ ಇಂದು ಗ್ರಾಮೀಣ ಭಾಗದ ಹೆಚ್ಚಿನ ಸಂಖ್ಯೆಯ ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಆ ನಿಟ್ಟಿನಲ್ಲಿ ಕೆ. ಕೆ. ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘಣೀಯ” ಎಂದು ಬೆಳಗಾವಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ ಅಭಿಪ್ರಾಯ ಪಟ್ಟರು.
ಕೆ. ಕೆ. ಕೊಪ್ಪದ ಶ್ರೀಮತಿ ಸೋಮವ್ವ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೨-೨೩ ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ. ಹಾಗೂ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ಇಂದಿನ ಯುವಕರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜಾತಿ, ಮತ, ಧರ್ಮ, ಭಾಷೆಗಳ ಹೆಸರಿನಲ್ಲಿ ಗೊಂದಲಕ್ಕೊಳಗಾಗದೆ ಸಾಮರಸ್ಯದಿಂದ ಬದುಕಬೇಕು. ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಗೆ ಸಿಲುಕದೆ ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಬೆಳೆಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ತನ್ಮೂಲಕ ಮಕ್ಕಳ ಭವಿಷ್ಯದ ಬಗ್ಗೆ ಸುಂದರ ಕನಸು ಕಟ್ಟಿಕೊಂಡಿರುವ ತಂದೆ, ತಾಯಿ, ಗುರುಗಳ ಮನಸ್ಸು ನೋಯಿಸದೆ ಸಾಧನೆಯ ಪಥದಲ್ಲಿ ಸಾಗಬೇಕು. ಶಿಕ್ಷಣದಿಂದ ಮಾತ್ರ ಬಡವರ ಮಕ್ಕಳು ಬೆಳೆಯಲು ಸಾಧ್ಯ. ಹೀಗಾಗಿ ಬಡವರ ಮಕ್ಕಳು ಬೆಳೆದರೆ ಭಾರತ ಬೆಳೆದಂತೆ” ಎಂದು ಹೇಳಿದರು.
ಗ್ರಾಮದ ಹಿರಿಯ ನಿವೃತ್ತ ಶಿಕ್ಷಕರಾದ ಬಡಿಗೇರ ಅವರು ಮಾತನಾಡಿ, ” ಊರಿಗೆ ಪ್ರೌಢ ಶಾಲೆ ಹಾಗೂ ಕಾಲೇಜು ಮಂಜೂರಾಗಲು ಕಾರಣಕರ್ತರದ ಗಣ್ಯರನ್ನು ನೆನೆದು ಸದರಿ ನ್ಯಾಕ್ ಬಿ ++ ಗ್ರೇಡ್ ಪಡೆಯಲು ಕಾರಣರಾದ ಕಾಲೇಜಿನ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಗ್ರಾಮ ಪಂಚಾಯತ ಸದಸ್ಯರಾದ ಸುರೇಶ ಕಂಬಿ ಅವರು ಮಾತನಾಡಿ, ” ದಿ. ಸುರೇಶ ಅಂಗಡಿ ಅವರು ಶಿಕ್ಷಣದ ಬಗ್ಗೆ ಹೊಂದಿದ್ದ ಆಸಕ್ತಿ ಮತ್ತು ಕಾಳಜಿ ನೆನೆದು ಭಾವುಕರಾದರು. ಜಮೀನು ದಾನ ಮಾಡುವ ಮೂಲಕ ತಮ್ಮ ತಾಯಿಯವರ ಹೆಸರಿನಲ್ಲಿ ಸರ್ಕಾರಿ ಶಾಲಾ ಕಾಲೇಜು ಸ್ಥಾಪಿಸಿ ಈ ಭಾಗದ ಸಹಸ್ರಾರು ಬಡ ಮಕ್ಕಳ ಶಿಕ್ಷಣಕ್ಕೆ ನೀರೆರೆದರು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಿನ್ಸಿಪಾಲರಾದ ಎಂ.ಎಸ್. ಮಾಳಗೆ ಅವರು,” ಗ್ರಾಮೀಣ ಭಾಗದಲ್ಲಿ ಪದವಿ ಹಂತದವರೆಗೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು ಬಡ ಜನರ ಮಕ್ಕಳಿಗೆ ಅನುಕೂಲವಾಗಿದೆ. ಸದರಿ ಕಾಲೇಜು ಬೆಳೆಯಲು ಪ್ರೋತ್ಸಾಹ ನೀಡಿದ ಸಂಸದರು, ಶಾಸಕರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಊರಿನ ಶಿಕ್ಷಣ ಪ್ರೇಮಿಗಳನ್ನು ನೆನೆಯುತ್ತ ಇನ್ನೂ ಹೆಚ್ಚಿನ ಹಂತಕ್ಕೆ ಕಾಲೇಜು ಬೆಳೆಯಲು ಶ್ರಮಿಸುವುದಾಗಿ” ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಕೆ. ಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ತಳವಾರ ಹಾಗೂ ಉಪಾಧ್ಯಕ್ಷೆ ಭಾರತಿ ಹಿರೇಮಠ ಮಾತನಾಡಿ ಕಾಲೇಜಿನ ಬೆಳವಣಿಗೆಯ ಪ್ರತಿ ಹಂತದಲ್ಲೂ ಸಹಕರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸುರೇಶ ಕುಡನಟ್ಟಿ, ರಾಜು ಕಂಬಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಸುರೇಶ ಅಳಗುಂಡಿ, ಕ್ರೀಡಾ ವಿಭಾಗದ ಸಂಚಾಲಕ ರವಿ ಪಾಟೀಲ, ರೆಡ್ ಕ್ರಾಸ್ ಯೋಜನಾಧಿಕಾರಿ ಅಜಿತ ಕದಂ, ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಸಂಧ್ಯಾ ಹಂದಿಗೋಳ, ಇ.ಎಲ್.ಸಿ. ಸಂಯೋಜನಾಧಿಕಾರಿ ಬಸವರಾಜು, ಪೋಷಕರ ಸಮಿತಿ ಸಂಯೋಜನಾಧಿಕಾರಿ ಪಿ.ಎಂ. ಕನೇರಿ, ವಿದ್ಯಾರ್ಥಿಗಳು, ಪಾಲಕರು ಊರಿನ ಗಣ್ಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಾದ ಭುವನೇಶ್ವರಿ ನಾಜರೆ ಹಾಗೂ ಸಂಗಡಿಗರು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮೌನೇಶ ಬಡಿಗೇರ ಸ್ವಾಗತಿಸಿ ಪರಿಚಯಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಿನೇಂದ್ರ ಬಣಜವಾಡ ನಿರ್ವಹಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮಂಜುಳಾ ಸವದತ್ತಿ ವಂದಿಸಿದರು.
Gadi Kannadiga > Local News > ಶಿಕ್ಷಣದಿಂದ ಮಾತ್ರ ಬಡವರ ಮಕ್ಕಳು ಬೆಳೆಯಲು ಸಾಧ್ಯ.: ಬಾಗೇವಾಡಿ