ಕೊಪ್ಪಳ ಡಿಸೆಂಬರ್ ೩೧ : ಅಂಚೆ ಅಧೀಕ್ಷಕರು ಗದಗ ವಿಭಾಗ, ಗದಗ ಇವರು ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಪ್ರಸ್ತಾಪಿಸಿದ್ದು, ಜನವರಿ ೧೦ ರಂದು ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
*ಅರ್ಹತಾ ನಿಯಮಗಳು*: ಅಭ್ಯರ್ಥಿಗಳು ಹತ್ತನೇ ತರಗತಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ ೧೮ ರಿಂದ ೫೦ ವರ್ಷದ ಒಳಗಿನವರು ಆಗಿರಬೇಕು. ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಸಲಹೆಗಾರರು ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದು ಕಂಡುಬಂದ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳು ರೂ. ೫೦೦೦ ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಅಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮಿಷನ್ ನೀಡಲಾಗುವುದು ಹಾಗೂ ಯಾವುದೇ ನಿಗದಿತ ವೇತನ ಇರುವುದಿಲ್ಲ. ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ/ ಸಂಸ್ಥೆ ಸಂಘಗಳ ಏಜೆಂಟ್ ಆಗಿರಬಾರದು.
ಅರ್ಹ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ, ಶೈಕ್ಷಣಿಕ ಪ್ರಮಾಣಪತ್ರದ ನಕಲುಗಳೊಂದಿಗೆ ೨೦೨೩ರ ಜನವರಿ ೧೦ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಗದಗ ಎಪಿಎಂಸಿ ಯಾರ್ಡ್ ಚೇಂಬರ್ ಆಫ್ ಕಾಮರ್ಸ್ ಎದುರುಗಡೆ ಇರುವ ಅಂಚೆ ಅಧಿಕ್ಷಕರ ಕಾರ್ಯಾಲಯದಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಗದಗ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳ ಮಾರಾಟ ಪ್ರತಿನಿಧಿಗಳ ನಿಯುಕ್ತಿಗಾಗಿ ಜನವರಿ ೧೦ ರಂದು ನೇರ ಸಂದರ್ಶನ
ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳ ಮಾರಾಟ ಪ್ರತಿನಿಧಿಗಳ ನಿಯುಕ್ತಿಗಾಗಿ ಜನವರಿ ೧೦ ರಂದು ನೇರ ಸಂದರ್ಶನ
Suresh31/12/2022
posted on