This is the title of the web page
This is the title of the web page

Please assign a menu to the primary menu location under menu

Local News

ಬಡತನ ಶಾಪವಲ್ಲ : ಸಂಸದ ಮಂಗಳಾ ಅಂಗಡಿ


ಬೆಳಗಾವಿ:ಆಗಷ್ಟ-೨೩: “ಬಡತನ ಶಾಪವಲ್ಲ; ಆತ್ಮಬಲವೊಂದಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಮುಕ್ತಾರ್ ಆರ್ಟ್ಸ್ ನ ಸಂಸ್ಥಾಪಕ ಮುಕ್ತಾರಹುಸೇನ್ ಪಠಾಣ ಸಾಕ್ಷಿಯಾಗುವ ಮುಖೇನ ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದಾರೆ” ಎಂದು ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಅಭಿಪ್ರಾಯ ಪಟ್ಟರು.
ವಿದ್ಯಾಗಿರಿಯ ನಗರದ ಬಾಕ್ಸೈಟ್ ರಸ್ತೆಯ ಪಕ್ಕದಲ್ಲಿರುವ ‘ಮುಕ್ತಾರ್ ಆರ್ಟ್ಸ್, ಸ್ಪೋರ್ಟ್ಸ್ ಹಾಗೂ ಗಿಫ್ಟ್ಸ್ ಶಾಪೀ’ ಉದ್ಘಾಟಿಸಿ ಮಾತನಾಡಿದ ಅವರು, “ಮೂವತ್ತೈದು ವರ್ಷಗಳ ಅವಿರತ ಪ್ರಯತ್ನದ ಫಲವಾಗಿ ಇಂದು ಸ್ವಂತ ಕಟ್ಟಡದಲ್ಲಿ ಉನ್ನತ ಮಟ್ಟದ ಮಳಿಗೆ ಆರಂಭವಾಗಲು ಅವರ ಕುಟುಂಬದ ಸಹಕಾರವೂ ಕಾರಣವಾಗಿದೆ. ಒಬ್ಬ ನಿರುದ್ಯೋಗಿ ಯುವಕ ನಿಷ್ಠೆಯಿಂದ ದುಡಿದರೆ ಯಶಸ್ಸು ಸಾಧಿಸಬಹುದು. ಇದೇ ನಮ್ಮ ಸರ್ಕಾರದ ಆತ್ಮ ನಿರ್ಭರ ಯೋಜನೆಯ ಆಶಯವಾಗಿದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಮಾತನಾಡಿ, “ರಾಜಕೀಯದಲ್ಲಿದ್ದುಕೊಂಡೇ ವೃತ್ತಿ ಜೀವನಕ್ಕೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಬಹುದಾಗಿದೆ ಎಂಬುದಕ್ಕೆ ಮುಕ್ತಾರ್ ಆರ್ಟ್ಸ್ ಉತ್ತಮ ಉದಾಹರಣೆಯಾಗಿದೆ. ಇಂಥ ಬ್ರಹತ್ತಾದ ಮಳಿಗೆ ನಮ್ಮ ಭಾಗದ ಕ್ರೀಡಾಪಟುಗಳಿಗೆ ಸಹಕಾರಿಯಾಗಲಿ” ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, “ಒಬ್ಬ ಮುಸ್ಲಿಂನಾಗಿದ್ದುಕೊಂಡು ಎಲ್ಲ ಧರ್ಮದವರೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಳ್ಳುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದು ಮುಕ್ತಾರ್ ಆರ್ಟ್ಸ್. ಕೋಮುವಾದ ತಾಂಡವವಾಡುತ್ತಿರುವ ಇಂದಿನ ಸಂದರ್ಭದಲ್ಲಿ ಸಾಮರಸ್ಯದ ಕೊಂಡಿಯಂತಿರುವ ಮುಕ್ತಾರ್ ಆರ್ಟ್ಸ್ ಅನುಕರಣೀಯವಾಗಿದೆ” ಎಂದು ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, “ಸರ್ವ ಜನಾಂಗದ ತೋಟದಂತಿರುವ ಬಸವಾದಿ ಶರಣರ ನಾಡಿನಲ್ಲಿ ಎಲ್ಲರೊಂದಿಗೆ ಬೆರೆತು ಬದುಕು ಕಟ್ಟಿಕೊಂಡು ಅನೇಕ ಯುವಕರಿಗೆ ಸ್ಫೂರ್ತಿಯಾದ ಮಳಿಗೆ ಹಿಮಾಲಯ ಶಿಖರದಂತೆ ಬೆಳೆಯಲಿ” ಎಂದು ಹಾರೈಸಿದರು.
ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, “ಬೆಳಗಾವಿ ಭಾಗದಲ್ಲಿ ಕೈಬರಹದ ಕಲೆಯಿಂದ ಡಿಜಿಟಲ್ ಫ್ಲೆಕ್ಸ್ ಕಲೆಯವರೆಗೆ ಮುಕ್ತಾರ್ ಆರ್ಟ್ಸ್ ಹೆಸರುವಾಸಿಯಾಗಿದೆ. ಹಳ್ಳಿಯಿಂದ ಬಂದ ಯುವಕನೊಬ್ಬ ರಾಜ್ಯಮಟ್ಟದವರೆಗೆ ಬೆಳೆದು ನಿಲ್ಲುವುದರೊಂದಿಗೆ ಅನೇಕ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಉದ್ಯೋಗ ಕ್ರಾಂತಿ ಮಾಡಿದ್ದು ಪಠಾಣ ಅವರ ಸತತ ಪರಿಶ್ರಮ ಹಾಗೂ ತಾಳ್ಮೆಯ ಫಲ ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಬಿ. ಜೆ. ಪಿ. ಹಿಂದುಳಿದ ವರ್ಗದ ಮೋರ್ಚಾ ಕಾರ್ಯದರ್ಶಿ ಕಿರಣ ಜಾಧವ ಹಾಗೂ ಕಣಬರಗಿ ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಶನ್ ಅಧ್ಯಕ್ಷ ಸುರೇಶ ಯಾದವ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಳಿಗೆಯ ಸಂಸ್ಥಾಪಕ ಮುಕ್ತಾರಹುಸೇನ್ ಪಠಾಣ ಮಾತನಾಡಿ,
೧೯೮೭ ರಲ್ಲಿ ರಾಮದುರ್ಗದಿಂದ ಬೆಳಗಾವಿಗೆ ಬಂದು ಸೈಕಲ್ ಮೇಲೆ ತಿರುಗಾಡಿ ಮುಕ್ತಾರ್ ಆರ್ಟ್ಸ್ ಕಟ್ಟಿದ ಕಷ್ಟದ ದಾರಿಯನ್ನು ವಿವರಿಸುತ್ತ ತಮಗೆ ಗುರುವಾಗಿ,ಅನ್ನದಾತ ರಾಗಿ, ತಂದೆ ಸ್ವರೂಪಿಯಾಗಿ ನಿಂತು ಬೆಳೆಸಿದ ಮಾಜಿ ಕೇಂದ್ರ ಸಚಿವ ಸುರೇಶ ಅಂಗಡಿಯವರನ್ನು ನೆನೆದು ಭಾವುಕರಾದರು. ಅವರ ಕುಟುಂಬದ ಋಣ ತೀರಿಸಲಸಾಧ್ಯ ಎಂದು ಹೇಳಿದ ಅವರು ತಮ್ಮ ಬದುಕಿಗೆ ಬೆನ್ನೆಲೆಬಾಗಿ ನಿಂತು ಪೂಜ್ಯರನ್ನು ಹಾಗೂ ಗೆಳೆಯರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಎಂ. ಬಿ. ಝಿರ್ಲಿ, ರಮೇಶ ದೇಶಪಾಂಡೆ, ಪ್ರಭು ಯತ್ನಟ್ಟಿ, ಮಾಜಿ ಶಾಸಕ ಫಿರೋಜ್ ಸೇಠ, ರಾಜು ಸೇಠ, ಪೀರಜಾದೆ, ಮಾಜಿ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ಡಾ. ಎ. ಬಿ. ಪುಂಡಲಿಕ,
ಯ. ರು. ಪಾಟೀಲ, ನಾನಾಗೌಡ ಬಿರಾದಾರ,ಅಶೋಕ ಧರಿಗೌಡರ, ಏಕನಾಥ ಅಗಸಿಮನಿ, ಗುರುದೇವ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು. ಶಂಕರ ಬಾಗೇವಾಡಿ ಕಾರ್ಯಕ್ರಮ ನಿರ್ವಹಿಸಿದರು.


Gadi Kannadiga

Leave a Reply