ಮೂಡಲಗಿ: ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ, ಮಣ್ಣು ಪರೀಕ್ಷೆ ಈ ರೀತಿ ಹಲವಾರು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಇಡಿ ದೇಶದಾದ್ಯಂತ ಸುಮಾರು ಒಂದು ಲಕ್ಷ ಇಪ್ಪತೈದು ಸಾವಿರ (೧.೨೫) ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಸ್ವಾಗತಾರ್ಹ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ಕಿಸಾನ್ ಸಮೃದ್ಧಿ ಕೇಂದ್ರಗಳಲ್ಲಿ ರೈತರಿಗೆ ಈ ರೀತಿ ಒಂದೇ ಸೂರಿನಡಿ ಹಲವಾರು ಸೇವೆಗಳ ಸೌಲಭ್ಯ ದೊರೆಯಲಿದೆ. ಮತ್ತು ಈ ಸಮೃದ್ದಿ ಕೇಂದ್ರಗಳನ್ನು ದೇಶದ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯದೊಂದಿಗೆ ನೇರವಾಗಿ ಸಂಪರ್ಕ ಹೊಂದುವ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ರೈತರು ಸ್ಪರ್ಧೆ ಮಾಡುವ ದೃಷ್ಠಿಯಿಂದ ಅವರಿಗೆ ಬೇಕಾದ ಅಗತ್ಯ ತಾಂತ್ರಿಕ ಸಲಹೆಗಳು ಉಳಿದಂತ ಎಲ್ಲಾ ಸೌಲಭ್ಯಗಳನ್ನು ಈ ಕೇಂದ್ರದಡಿ ನೀಡಲು ಕ್ರಮ ವಹಿಸಿದ್ದಾರೆ. ಇನ್ನೂ ಮುಂದೆ ರಾಸಾಯನಿಕ ಗೊಬ್ಬರ ಮಾರಾಟಗಾರರು ಕೃಷಿ ಪದವಿದರರು ಮಾತ್ರ ಇರುತ್ತಾರೆ. ಈಗ ಇರುವಂತವರಿಗೆ ಅಗತ್ಯ ತರಬೇತಿಗಳನ್ನು ಕೊಡುವ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡಲಾಗುವುದು ಎಂದರು.
ಕಳೆದ ಹಲವಾರು ವರ್ಷಗಳಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ನಿರಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದೆ. ೧೪ನೇ ಕಂತಿನ ಹಣವನ್ನು ರಾಜಸ್ಥಾನದ ಸಿಕರ್‌ನಲ್ಲಿ ದೇಶದ ೮.೫೦ ಕೋಟಿ ರೈತರ ಖಾತೆಗೆಳಿಗೆ ೧೭,೫೦೦ ಕೋಟಿ ರೂಪಾಯಿ ಜಮೆ ಮಾಡಿದರು. ರಾಜ್ಯದ ೫೦.೪೫ ಲಕ್ಷ ಅಧಿಕ ರೈತರಿಗೆ ೧೦೦೯.೦೭ ಕೋಟಿ ರೂ. ಹಾಗೂ ಬೆಳಗಾವಿ ಜಿಲ್ಲೆಯ ೫,೨೯,೭೩೭ ರೈತರಿಗೆ ೧೦೫.೯೫ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಮೊದಲನೆಯ ಹಂತದಲ್ಲಿ ಬೇವು ಲೇಪಿತ ಯೂರಿಯಾ ತಯಾರು ಮಾಡಿದರು ಎರಡನೆಯ ಹಂತದಲ್ಲಿ ನ್ಯಾನೋ ಯೂರಿಯಾ ಕಂಡುಹಿಡಿದರು. ಮೂರನೆಯ ಹಂತದಲ್ಲಿ ಗಂಧಕ ಲೇಪಿತ ಯೂರಿಯಾವನ್ನು ಬಿಡುಗಡೆ ಮಾಡಿ ಈ ರೀತಿ ನಿರಂತರವಾಗಿ ಕೃಷಿ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿ, ಅವುಗಳನ್ನು ಜಾರಿಗೆ ತರುವಂತಹ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಮತ್ತು ಇದು ರೈತರ ಬಗ್ಗೆ ಇರುವ ವಿಶೇಷ ಕಾಳಜಿಯನ್ನು ತೋರಿಸುತ್ತಿದೆ ಎಂದು ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.
Gadi Kannadiga > Local News > ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ -ಸಂಸದ ಈರಣ್ಣ ಕಡಾಡಿ
ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ -ಸಂಸದ ಈರಣ್ಣ ಕಡಾಡಿ
Suresh28/07/2023
posted on