ಬಾಗಲಕೋಟೆ12: ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಪ್ರಮುಖವಾದದ್ದು. ಯುವಜನೋತ್ಸವ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ಸೃಜನಾತ್ಮಕತೆ ಮತ್ತು ಕೌಶಲ್ಯಗಳನ್ನು ಬೆಳೆಸುವ ಕೆಲಸ ಮಾಡಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ.ತುಳಸಿಮಾಲಾ ಹೇಳಿದರು.
ನಗರದ ಬಿವ್ಹಿವ್ಹಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 17ನೆಯ ಶಕ್ತಿ ಸಂಭ್ರಮ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಶಕ್ತಿಯೇ ಅಭಿವೃದ್ಧಿಯ ಹರಿಕಾರರಾಗಿದ್ದು ಅವರಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಗಳನ್ನು ಬೆಳೆಸುವ ಕೆಲಸವಾಗಬೇಕಿದೆ ಎಂದರು.
ಶಿಕ್ಷಣ ಎಂದರೆ ಕೇವಲ ಉಪನ್ಯಾಸ ನೀಡುವುದಷ್ಟೆ ಅಲ್ಲ, ಅವರಲ್ಲಿರುವ ಸಾಮರ್ಥ್ಯವನ್ನು ಅರ್ಥೈಸುವ ಪ್ರಯತ್ನ ಮಾಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳ ಸರ್ವಾಂಗಿನ ಅಭಿವೃದ್ಧಿ ಅವಶ್ಯಕವಾಗಿದ್ದು ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಿದೆ. ವಿದ್ಯಾರ್ಥಿಗಳಲ್ಲಿರುವ ಕೀಳಿರಿಮೆಯನ್ನು ತೊಡೆದು ಹಾಕಿ ಅವರಲ್ಲಿ ನಾಯಕತ್ವಗುಣವನ್ನು ಬೆಳೆಸುವಲ್ಲಿ ಪ್ರಮುಖ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಶ್ರೀನಿವಾಸ ಬಳ್ಳಿ ಅವರು ಮಾತನಾಡಿ ಯುವ ಎನ್ನುವ ಪದವೇ ಶಕ್ತಿ ಸಂಕೇತವಾಗಿದೆ. ಭಾರತದಲ್ಲಿ ಅನಾದಿಕಾಲದಿಂದಲೂ ಮಹಿಳೆಯರನ್ನು ಶಕ್ತಿಯ ಪ್ರತಿರೂಪವಾಗಿ ಗೌರವಿಸಲಾಗುತ್ತಿದ್ದು ಯುವತಿಯರ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳಾ ವಿವಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಒಂದು ದೇಶದ ಬಗ್ಗೆ ತಿಳಿದುಕೊಳ್ಳಬೇಕಾದರೆ ಅಲ್ಲಿರುವ ಯುವಜನತೆಯನ್ನು ಅದ್ಯಯನಮಾಡಬೇಕು ಯುವಕರ ನಡತೆ ದೇಶದ ಭವಿಷ್ಯವನ್ನು ನಿರ್ದರಿಸುತ್ತದೆ ಎಂದರು. ಯುವ ಜನತೆಯ ಸಾಹಸಗಳಿಂದಲೇ ಇತಿಹಾಸದ ನಿರ್ಮಾಣವಾಗಿದ್ದು ಅವುಗಳನ್ನು ಮಾರ್ಗದರ್ಶಿಯಾಗಿ ಬಳಸಿಕೊಂಡು ಮಾದರಿ ವ್ಯಕ್ತಿಗಳಾಗಿ ರೂಪಗೊಳ್ಳಬೇಕು. ನಮ್ಮಲ್ಲಿರುವ ಯುವ ಶಕ್ತಿಯ ಪ್ರಬಲ ಬಳಕೆಯಿಂದ ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಬದಲಾಯಿಸಿದ್ದೇವೆ. ಭಾರತ ಜನಸಂಖ್ಯೆಯ ಅರ್ಧದಷ್ಟು ಯುವ ಶಕ್ತಿಯನ್ನು ಹೊಂದಿದ್ದು 150 ರಾಷ್ಟ್ರಗಳು ಭಾರತದ ನೇತೃತ್ವಕ್ಕೆ ತಲೆ ಭಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ನಮ್ಮಲ್ಲಿರುವ ಯುವ ಶಕ್ತಿಯೇ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ ಶಾಸಕರು, ಬಿ.ವಿ.ವಿ ಸಂಘದ ಕಾರ್ಯಧ್ಯಕ್ಷರಾದ ವೀರಣ್ಣ ಚರಂತಿಮಠ ಅವರು ಮಾತನಾಡಿ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳು ಯಾವ ಪುರುಷರಿಗೆ ಕಡಿಮೆ ಇಲ್ಲ. ವಿವಿಗಳು ಯುವ ಜನೋತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಯುವ ಶಕ್ತಿಯಲ್ಲಿರುವ ಕೌಶಲ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು ಎಲ್ಲ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.
ಬಾಗಲಕೋಟೆ ಅಕ್ಕಮಹಾದೇವಿ ಮಹಿಳಾ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಯುವಜನೋತ್ಸವ ಜಾತ್ರೆಗೆ ಶೃಂಗಾರ ಗೊಂಡಿದ್ದು ಡಿ.12 ರಿಂದ ಡಿ.14ರವರೆಗೆ ಮೂರು ದಿನಗಳ ಕಾಲ ವಿವಿಧ ಮನರಂಜನಾ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು ರಾಜ್ಯ 32 ಮಹಾವಿದ್ಯಾಲಯಗಳ 1500ರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು ಸ್ಕಿಟ್, ನಾಟಕ, ಡೊಳ್ಳು ಕುಣಿತ, ಜಾನಪದ ನೃತ್ಯ, ಹಿಂದುಸ್ತಾನಿ ಮತ್ತು ಕರ್ನಾಟಕಿ ಶಾಸ್ತ್ರೀಯ ಸಂಗೀತ ಸೇರಿದಂತೆ 26 ವಿವಿಧ ಮನರಂಜನಾ ಸ್ಪರ್ಧೆಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಕಾರ್ಯಧ್ಯಕ್ಷರಾದ ಗುರುಬಸವ ಸೂಳಿಭಾವಿ, ಪ್ರಾಚಾರ್ಯರಾದ ಎಸ್.ಜೆ.ಒಡೆಯರ, ಪ್ರೊ. ವ್ಹಿ.ಬಿ. ಕೋರಿಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಮ್.ಸಂಗಮ ಹಾಗೂ ಪಿ.ಎಸ್.ಪಾತ್ರೊಟ ನಿರೂಪಿಸಿದರು, ಸಂಜನಾ ಹಾಗೂ ತಂಡದವರು ಪ್ರಾರ್ಥಿಸಿದರು, ಎಸ್.ಎಮ್.ಮುರಗೋಡ ವಂದಿಸಿದರು.