ಕೊಪ್ಪಳ(ಶಹಪುರ),ಅ.೧೦-ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಹಾಗೂ ಹಿಟ್ನಾಳ ಟೋಲ್ ನಲ್ಲಿ ಗ್ರಾಮಸ್ಥರ ವಾಹನಗಳ ಸಂಚಾರಕ್ಕೆ ಪದೇ ಪದೇ ತೊಂದರೆ ನೀಡುತ್ತಿದ್ದು ಇದರ ವಿರುದ್ಧ ಅಕ್ಟೋಬರ್ ೧೨ ರಂದು ಪ್ರತಿಭಟನೆ ನಡೆಸಲು ಶಹಪುರ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಶಹಪುರ ಗ್ರಾಮದ ಯುವ ಧುರೀಣರಾದ ಗಿರೀಶ್ ಹಿರೇಮಠ ಮತ್ತು ಸುರೇಶ್ ಪಾಟೀಲ್ ಇವರ ನೇತೃತ್ವದಲ್ಲಿ ಗ್ರಾಮಸ್ಥರು ಉಭಯ ಟೋಲ್ಗಳ ವ್ಯವಸ್ಥಪಕರಾದ ಶುಕ್ಲ ಹಾಗೂ ನಾಗಭೂಷಣ್ ಇವರನ್ನು ಭೇಟಿಯಾಗಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-೫೦ನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಗ್ರಾಮದ ಜನರಿಗೆ ತುರ್ತು ಕೆಲಸಗಳಿಗಾಗಿ ಅಡಚಣೆ ಉಂಟಾಗುತ್ತಿದೆ. ಸರ್ವೀಸ್ ರಸ್ತೆ ಇಲ್ಲದೇ ಇರುವುದರಿಂದ ಹಲವಾರು ಜನರು ವಾಹನಗಳಿಗೆ ಸಿಲುಕಿ ದುರ್ಮರಣಕ್ಕೀಡಾಗಿದ್ದಾರೆ. ಜನ-ಜಾನುವಾರುಗಳ ಸಾವಿನ ಘಟನೆಗಳು ಪದೇ ಪದೇ ಸಂಭವಿಸುತ್ತಲೇ ಇವೆ. ರಾಷ್ಟ್ರೀಯ ಹೆದ್ದಾರಿ ದಾಟಿಕೊಂಡು ಶಾಲೆ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಭಯ ಪಡುತ್ತಿದ್ದಾರೆ. ಎಗ್ಗಿಲ್ಲದೇ ಸಾಗಿ ಬರುವ ವಾಹನಗಳ ಭರಾಟೆ ಮಿತಿ ಮೀರಿದ್ದು ಯಾವುದೇ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಶಹಪುರ ಗ್ರಾಮದ ಬಳಿಯ ಹೈವೇ ರಸ್ತೆಗೆ ಬ್ರೇಕರ್, ವಿದ್ಯುದ್ದೀಪ, ಹೈಮಾಸ್ಟ್ ಲೈಟ್, ಸಂಚಾರಿ ದಿಕ್ಸೂಚಿಗಳನ್ನು ವೈಜ್ಞಾನಿಕವಾಗಿ ಅಳವಡಿಸಬೇಕು. ಈ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಡೆಗಣಿಸುತ್ತ ಬಂದಿದೆ. ಅಪಘಾತಗಳು ಸಂಭವಿಸಿದಾಗ ಮಾತ್ರ ಭರವಸೆ ನೀಡುವ ಅಧಿಕಾರಿಗಳು ಬಳಿಕ ತಾವು ನೀಡಿದ ವಾಗ್ದಾನವನ್ನು ಕಡೆಗಣಿಸುತ್ತಿದ್ದಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಲೇ ಇವೆ. ಸರ್ವೀಸ್ ರಸ್ತೆ ಇಲ್ಲದೇ ಆತಂಕದಿಂದಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕಾಗಿದೆ. ಇದಲ್ಲದೆ ಟೋಲ್ ಮೂಲಕ ಸಾಗುವ ಗ್ರಾಮಸ್ಥರ ವಾಹನಗಳ ಸಂಚಾರಕ್ಕೂ ಟೋಲ್ ಸಿಬ್ಬಂದಿ ಅಡಚಣೆ ಉಂಟು ಮಾಡುತ್ತಿದ್ಧಾರೆ. ಈ ಕಾರಣಕ್ಕಾಗಿ ಅಕ್ಟೋಬರ್ ೧೨ ರಂದು ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರನ್ನೊಳಗೊಂಡಂತೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಿಂಗಪ್ಪ ನಾಗಲಾಪುರ, ವೀರಣ್ಣ ಕೋಮಲಾಪುರ, ನಾಗರಾಜ ದೊಡ್ಡಮನಿ, ಮಂಜುನಾಥ ಕಂಬಳಿ, ಎಲ್ಲಪ್ಪ ಚೌಡ್ಕಿ, ನಾಗರಾಜ ಹಳ್ಳಿಗುಡಿ, ಕಂಪ್ಲೆಪ್ಪ ಇನ್ನಿತರರು ಇದ್ದರು.
Gadi Kannadiga > State > ಅP ೧೨ ರಂದು ಶಹಪುರ ಗ್ರಾಮಸ್ಥರಿಂದ ಟೋಲ್ ಗೇಟ್ ಮುಂದೆ ಪ್ರತಿಭಟನೆ