ಕುಷ್ಟಗಿ:-ಈ ಮೊದಲು ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಪುಸ್ತಕಗಳ ಖರೀದಿಸಿ ಲೇಖಕರನ್ನು ಹಾಗೂ ಈ ಭಾಗದ ಸಾಹಿತ್ಯವನ್ನು ಪ್ರೋತ್ಸಾಹಿಸುವ ಸಂಸ್ಕೃತಿ ಇತ್ತು. ಆದರೆ ೨೦೧೮ ರಿಂದ ಈ ಕಾರ್ಯ ಸ್ಥಗಿತವಾಗಿದೆ. ಲೇಖಕರು, ಲೇಖಕರ ಸಂಘ, ಪ್ರಕಾಶಕರು ಹಲವಾರು ಬಾರಿ ಸಮಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕತೆಯ ಪ್ರೋತ್ಸಾಹ ಇರದ ಕಾರಣ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ. ಈ ಭಾಗದಲ್ಲಿ ಈ ಹಿಂದಿನಿಂದಲೂ ಸಾಹಿತ್ಯ, ಜನಪದ, ಕಾವ್ಯ, ನಾಟಕ, ಇತಿಹಾಸ ರಚನೆಯ ಹಾಗೂ ದಾಖಲಾತಿಯ ಕೊರಗು ಇದೆ. ಅಲ್ಲದೆ ಲೇಖಕರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಕಾರಣ ಅವರಿಂದ ಇದೀಗ ಹೊಸ ಸಾಹಿತ್ಯ ರಚನೆಯಾಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಲೇಖಕರಿಗೆ ಕಲ್ಯಾಣವಾಗಬೇಕಾದರೆ ನಿರುಪಯುಕ್ತವಾಗಿರುವ ಕಲ್ಯಾಣ ಕರ್ನಾಟಕ ಅನುದಾನದಲ್ಲಿ, ಸಾರ್ವಜನಿಕ ಗ್ರಂಥಾಲಯದಿಂದ ಮಾನ್ಯತೆ ಪಡೆದಿರುವ ೨೦೧೮ರಿಂದ ೨೦೨೨ರ ವರೆಗಿನ ಈ ಭಾಗದ ಲೇಖಕರ ಪುಸ್ತಕಗಳನ್ನು ಕನಿಷ್ಠ ಮಟ್ಟದಲ್ಲಾದರೂ ಖರೀದಿಸಲು ಈ ಮೂಲಕ ನಾನು ನಮ್ರವಾಗಿ ಒತ್ತಾಯಿಸುತ್ತೇನೆ. ಅಲ್ಲದೆ ಮುಂದೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಚರ್ಚಿಸಿ ಮಾನ್ಯ ರಾಜ್ಯ ಕ.ಸಾ.ಪ ಅಧ್ಯಕ್ಷರ ಮೂಲಕ ಸರ್ಕಾರಕ್ಕೆ ಪರಿಷತ್ತಿನಿಂದ ಮನವಿ ಸಲ್ಲಿಸಲಾಗುವುದು.
ಕಲ್ಯಾಣ ಕರ್ನಾಟಕ ಪ್ರತಿನಿಧಿಸುವ ಎಲ್ಲ ಜಿಲ್ಲೆಯ ಶಾಸಕರುಗಳಿಗೆ, ಕಸಾಪ ಜಿಲ್ಲಾ ಅಧ್ಯಕ್ಷರ ಮುಖಾಂತರ ಮನವಿ ಸಲ್ಲಿಸಲು ಕೋರಲಾಗಿದೆ. ಈ ವಿಷಯಕ್ಕಾಗಿ ಒತ್ತಾಯಿಸಿ ಲೇಖಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದು ಲೇಖಕರ ಹಕ್ಕು ಆಗಿದ್ದು ಮುಂದೊಂದು ದಿನ ಲೇಖಕರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಬೇಕಾಗದ ಅನಿವಾರ್ಯ ಬಂದರೂ ಬರಬಹುದು.ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪ್ರತಿನಿಧಿಯಾಗಿರುವ ನಬಿಸಾಬ ಕುಷ್ಟಗಿ ಯವರು ಅಧ್ಯಕ್ಷರು/ಆಡಳಿತಾಧಿಕಾರಿ ಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ ಕಲಬುರ್ಗಿ ಇವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಸಾಪ ತಾಲೂಕ ಅಧ್ಯಕ್ಷ ವೀರೇಶ್ ಬಂಗಾರಶೆಟ್ಟರ್ ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ