This is the title of the web page
This is the title of the web page

Please assign a menu to the primary menu location under menu

State

ನಗರ ಪ್ರದೇಶಗಳ ಮತಗಟ್ಟೆಗಳಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮಕ್ಕೆ ಕ್ರಿಯಾಯೋಜನೆ: ರಾಹುಲ್ ಪಾಂಡೆಯ


ಕೊಪ್ಪಳ ಏಪ್ರಿಲ್ 10:- ಸ್ವೀಪ್ ಕಾರ್ಯಚಟುವಟಿಕೆಗಳ ಕಾರ್ಯನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಮುಂದಿದೆ. ಇದು ನಮಗೆ ಸಂತಸದ ಸಂಗತಿಯಾಗಿದೆ. ಇದರ ಮುಂದುವರೆದ ಭಾಗವಾಗಿ ಜಿಲ್ಲೆಯ ವಿವಿಧ ನಗರ ಪ್ರದೇಶದ ಮತಗಟ್ಟೆಗಳಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾರ್ಯಕ್ರಮಗಳ ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಏಪ್ರಿಲ್ 10ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊಪ್ಪಳ ಜಿಲ್ಲೆಯಾದ್ಯಂತ ಇವಿಎಂ ಹಾಗೂ ವಿವಿಪ್ಯಾಟ್ ಜಾಗೃತಿ, ಮತದಾನ ಹಕ್ಕು ಚಲಾವಣೆ ಪ್ರತಿಜ್ಞಾವಿಧಿ, ಪಂಜಿನ ಮೆರವಣಿಗೆ ಹೀಗೆ ವಿವಿಧ ಬಗೆಯ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 11ರಂದು ಬೈಕ್ ರ‍್ಯಾಲಿ: ಮತದಾರರ ಜಾಗೃತಿಗಾಗಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಏ.11ರಂದು ಕೊಪ್ಪಳ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಲಾಗಿದೆ.

ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ನಡೆಯುವ ಬೈಕ್ ರ‍್ಯಾಲಿಗೆ ನಗರದ ಶ್ರೀ ಗವಿಸಿದ್ದೇಶ್ವರ ಮಠದ ಮೈದಾನದಿಂದ ಚಾಲನೆ ನೀಡಲಾಗುವುದು. ರ‍್ಯಾಲಿಯು ಬಸವೇಶ್ವರ ವೃತ್ತ (ಗಂಜ್ ಸರ್ಕಲ್), ಹಳೆಯ ಡಿಸಿ ಆಫೀಸ್, ಸಾಲಾರ್ ಜಂಗ್ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ, ಬಸ್‌ನಿಲ್ದಾಣ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸಂಚರಿಸಲಿದೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯಗಳ ಪರಿಶೀಲನೆ: ಏ.12ರಂದು 272 ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಲಾಗುವುದು.

ಏಪ್ರಿಲ್ 14ರಂದು ಗಂಗಾವತಿ ನಗರ ಸಭೆ ಹಾಗೂ ಕಾರಟಗಿ ಮತ್ತು ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಮತ್ತು ಏ.17ರಂದು ಕನಕಗಿರಿ, ತಾವರಗೇರಾ ಕುಕನೂರು ಮತ್ತು ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ, ಯುವ ಮತದಾರರಿಗೆ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳು, ಅಲೆಮಾರಿ ಜನಾಂಗ, ಎಸ್.ಸಿ/ಎಸ್.ಟಿ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಹಾಗೂ ವಿಕಲಚೇತನರಿಂದ ನೈತಿಕ ಮತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಮನೆ ಮನೆ ಭೇಟಿ ಮತದಾನ ಜಾಗೃತಿ: ಏ.24 ಮತ್ತು ಏ.25ರಂದು ಕಡಿಮೆ ಮತದಾನವಾದಂತಹ ಮತಗಟ್ಟೆಗಳಲ್ಲಿ ವಿಶೇಷ ಸ್ವೀಪ್ ಜಾಗೃತಿ ಕಾರ್ಯಾಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮೇ 01 ರಿಂದ ಮೇ 05ರವರೆಗೆ ನಗರ ಪ್ರದೆಶದ ಎಲ್ಲಾ ಮತಗಟ್ಟೆಗಳಲ್ಲಿ ಮನೆ ಮನೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮಗಳು, ಗ್ರಾಮ ಪಂಚಾಯತಿ ವ್ಯಾಪಿಗಳಲ್ಲಿ ಇ.ವಿ.ಎಂ ಹಾಗೂ ವಿ.ವಿ.ಪ್ಯಾಡ್ ಒಳಕೆಯ ಕುರಿತು ಮಾಹಿತಿ ಹಾಗೂ ಜಾಗೃತಿ ಕಾರ್ಯಾಕ್ರಮಗಳನ್ನು ಸಹ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೀದಿ ನಾಟಕಗಳಿಂದ ಜಾಗೃತಿ: ಸ್ಥಳಿಯ ಕಲಾ ತಂಡಗಳನ್ನು ಬಳಕೆ ಮಾಡಿಕೊಂಡು ಬೀದಿ ನಾಟಕಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗುವುದು. ನರೇಗಾ ಕೆಲಸದ ಸ್ಥಳಗಳಲ್ಲಿ ಮತ್ತು ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಮತದಾನ ಜಾಗೃತಿ ಮೂಡಿಸಲಾಗುತ್ತದೆ.

ವಿಷಯಾಧಾರಿತ ಮತದಾನ ಕೇಂದ್ರಗಳು: ವಿಧಾನಸಭಾ ಚುನಾಚಣೆ-2023ರ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 25 ಮಾದರಿ ಮತಗಟ್ಟೆಗಳು, 25 ಮಹಿಳಾ ಮತಗಟ್ಟೆಗಳು, 5 ಪಿ.ಡಬ್ಲೂö್ಯ.ಡಿ., 5 ಯುವ ಮತಗಟ್ಟೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 60 ವಿಷಯಾಧಾರಿತ ವಿಶೇಷ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿ ಮಂಜುನಾಥ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Leave a Reply