ರೋಣ: ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೊಸ್ಕರ ನಡೆಯುವ ಸರಕಾರದ ಅಡಿಪಾಯವೇ ಮತದಾನ. ಸಂವಿಧಾನ ಬದ್ದವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಗಳು ಚಲಾಯಿಸುವಲ್ಲಿ ಯಾವುದೇ ಅಸಡ್ಡೆತನ ಮಾಡಬೇಡಿ. ಪ್ರತಿಯೊಬ್ಬರ ಮತವು ಅಮೂಲ್ಯವಾಗಿದ್ದು, ಶೇ 100% ಪ್ರತಿಶತ ಮತದಾನ ಗದಗ ಜಿಲ್ಲೆಯ ವಾಗ್ದಾನವಾಗಿದೆ ಎಂದು ರೋಣ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್. ನರೇಗಾ ಕೂಲಿಕಾರರಿಗೆ ತಿಳಿಸಿದರು.
ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಅಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ, ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಮತದಾರನೇ ನಿಜವಾದ ಪ್ರಭು ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಬೇಕೆಂದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮಗೆ ಸಂವಿಧಾನಾತ್ಮಕವಾಗಿ ದೊರೆತಿರುವ ಹಕ್ಕು. ಮೇ 10 ರಂದು ಕರ್ನಾಟಕ ವಿಧಾನ ಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೇ ವಿವೇಚನೆಯಿಂದ ಮತ ಚಲಾಯಿಸಿ ಎಂದರು. ಆ ಮುಖಾಂತರ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಇದೆ ಸಂದರ್ಭದಲ್ಲಿ ನರೇಗಾ ಯೋಜನೆಯ ಬಗ್ಗೆ ಮಾತನಾಡಿದ ಅವರು ಬರದ ಬವಣೆಯಲ್ಲಿ ಬೆಂದ ಬಡ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಅದನ್ನು ಬಳಸಿಕೊಂಡ ಆರ್ಥಿಕವಾಗಿ ಸದೃಢ ವಾಗಿ ಅಂದಾಗ ಮಾತ್ರ ಗುಳೇ ಹೋಗುವುದು ತಪ್ಪುತ್ತದೆ. ಪ್ರತಿ ದಿನ ನೀವು ಮಾಡುವ ಕೆಲಸಕ್ಕೆ 316 ರೂಪಾಯಿ ಸರ್ಕಾರ ಕೊಡುತ್ತದೆ. ಅದಕ್ಕೆ ತಕ್ಕ ಹಾಗೆ ಕೆಲಸ ಮಾಡಿದಾಗ ಮಾತ್ರ ಈ ಯೋಜನೆಯು ಯಶಸ್ವಿ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಯೋಗಿ ರಿತ್ತಿ , ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತದಾನ ಜಾಗೃತಿ ಜಾಥಾದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರಣ ಎಲ್ಲರೂ ಕಡ್ಡಾಯವಾಗಿ ನಿರ್ಭೀತಿಯಿಂದ ಮತ ಚಲಾಯಿಸಿ ಎಂದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ತಾಂತ್ರಿಕ ಸಹಾಯಕರಾದ ಅಜಯ ಅಬ್ಬಿಗೇರಿ, ಮುದಿಗೌಡ್ರ, BFT ಶೀವು ಯಲಿಗಾರ ,ಬಿಲ್ ಕಲೆಕ್ಟರ್ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು.