ಬೆಳಗಾವಿ ೨:- ನಗೆಮಾತುಗಾರ, ಫೇಸಬುಕ್ ಅಥವಾ ವಾಟ್ಸಪ್‌ಗಳಲ್ಲಿ ಬಂದ ಹಳಸು ಜೋಕುಗಳಿಗೆ ಜೋತು ಬೀಳದೆ ನಿಮ್ಮ ಜೀವನದಲ್ಲಿ ನಡೆದ ರಸಪ್ರಸಂಗ, ಬೇರೆ ಬೇರೆ ಸಂದರ್ಭದಲ್ಲಿ ಕಣ್ಣಾರೆ ಕಂಡ ಹಾಗೂ ಕೇಳಿದ ನಗೆಪ್ರಸಂಗ ಅಲ್ಲದೇ ಬೇರೆ ಬೇರೆ ಹಿರಿಯ ಲೇಖಕರ ಹಾಸ್ಯಸಾಹಿತ್ಯವನ್ನೋದಿ ನಿಮ್ಮ ಮಾತುಗಳಲ್ಲಿ ಬಳಸಿಕೊಳ್ಳುವುದರಿಂದ ನೀವು ಒಳ್ಳೆಯ ಹಾಸ್ಯ ಭಾಷಣಕಾರರಾಗಲು ಸಾಧ್ಯ ಎಂದು ಹಾಸ್ಯಕೂಟ ಸಂಚಾಲಕ, ನಗೆಬರಹಗಾರ ಗುಂಡೇನಟ್ಟಿ ಮಧುಕರ ಇಂದಿಲ್ಲಿ ಹೇಳಿದರು.
ಬೆಳಗಾವಿ ಹಾಸ್ಯಕೂಟ ತಂಡದವರಿಂದ ಜ. ೨೯ ರವಿವಾರದಂದು ಸಾಯಂಕಾಲ ೪ ಗಂಟೆಗೆ ಉಡುಪಿಯ ಸುಹಾಸಂ ಸಂಘಟನೆಯವರು ಕಿದಿಯೂರು ಹೋಟೆಲ್ ಅನಂತಶಯನ ಸಭಾಂಗಣದಲ್ಲಿ ‘ಹಾಸ್ಯಸಂಜೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಗುಂಡೇನಟ್ಟಿ ಮಧುಕರ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಹಾಸ್ಯ ಕಾರ್ಯಕ್ರಮದಲ್ಲಿ ಭಾಷಣಕಾರನೆಷ್ಟು ಮುಖ್ಯವೋ ಕೇಳುಗನು ಅಷ್ಟೇ ಮುಖ್ಯನಾಗಿರುತ್ತಾನೆ. ಹಾಸ್ಯರಸವನ್ನು ಅನುಭವಿಸಿ ಮನದುಂಬಿ ನಗುವಂತಹ ಕೇಳುಗನಿದ್ದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಸಾಹಿತ್ಯ ಮತ್ತು ಸಂಘಟನೆ ಕ್ರಿಯಾಶೀಲರಾದ ಹಾಗೂ ಉದಯೋನ್ಮುಖ ಲೇಖಕರಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಹಿರಿಯ ಜೀವ ಕು.ಗೋ. ಅವರದ್ದು ಸಾರ್ಥಕ ಬದುಕು. ಪುಸ್ತಕ ಪ್ರೀತಿ ಹೊಂದಿರುವ ಕು.ಗೋ. ಅವರು ಓದುಗ ಹಾಗೂ ಬರೆಹಗಾರರ ನಡುವಿನ ಕೊಂಡಿಯಾಗಿದ್ದಾರೆ. ಸುಹಾಸಂ ಸಂಘಟನೆಯಿಂದ ಅವರು ಹಾಸ್ಯಸಾಹಿತ್ಯ, ಹಾಸ್ಯ ಭಾಷಣ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಹಾಸ್ಯಭಾಷಣಕಾರನಾಗಿ ಆಗಮಿಸಿದ್ದ ಪ್ರೊ. ಜಿ. ಕೆ. ಕುಲಕರ್ಣಿಯವರು ಹಾಸ್ಯವೆನ್ನುವುದು ಆಕಾಶದಿಂದ ತಾನಾಗಿಯೇ ಉದುರುವುದಲ್ಲ. ಅದು ಒಂದು ಕಲೆಯಾಗಿದ್ದು ಅದರ ಹಿಂದೆ ತುಂಬ ಶ್ರಮವಿದೆ. ಹಾಸ್ಯ ಹೇಳುವವನಿಗೂ ಕೇಳುವವನಿಗೂ ಖುಷಿಯನ್ನುಂಟು ಮಾಡುತ್ತದೆ. ನೋವನ್ನು ಮರೆಯಿಸುತ್ತದೆ ಎಂದು ಹೇಳಿ ತಮ್ಮ ವೃತ್ತಿ ಜೀವನದಲ್ಲಿ ನಡೆದ ಗುರುಶಿಷ್ಯರ ನಡುವಿನ ನಗೆ ಪ್ರಸಂಗಗಳನ್ನು ಹಂಚಿಕೊಂಡು ಪ್ರೇಕ್ಷಕರನ್ನು ನಗೆಡಡಲಲ್ಲಿ ತೇಲಿಸಿದರು.
ಅರವಿಂದ ಹುನಗುಂದ ಮಾತನಾಡಿ ಗುರುಶಿಷ್ಯರ ನಡುವಿನ ನಗೆಪ್ರಸಂಗಗಳನ್ನು ಹೇಳಿದರು ಹಾಗೂ ಎನ್.ಜೆ. ಮಂಜುನಾಥ ನಗೆತುಣುಕುಗಳೊಂದಿಗೆ ಅಣಕು ಹಾಡುಗಳನ್ನು ಹಾಡಿ ರಂಜಿಸಿದರು.
ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷರಾದ ಶಾಂತರಾಜ ಐತಾಳ ವಹಿಸಿದ್ದರು. ಶ್ರೀನಿವಾಸ ಉಪಾಧ್ಯಯ ನಿರೂಪಿಸಿದರು. ಶ್ರೀಮತಿ ಸಂಧ್ಯಾ ಶೆಣೈ ವಂದಿಸಿದರು.
Gadi Kannadiga > Local News > ಸಾಹಿತ್ಯದ ಓದು, ಹಾಸ್ಯಭಾಷಣದ ಮೌಲ್ಯವನ್ನು ಹೆಚ್ಚಿಸುತ್ತದೆ : ಗುಂಡೇನಟ್ಟಿ ಮಧುಕರ