ಬೆಳಗಾವಿ ೨೬ : ಕಳೆದ ಆರ್ಥಿಕ ವರ್ಷದಲ್ಲಿನ ವೇತನ ಪಾವತಿಯಾಗದೇ ಬಾಕಿ ಉಳಿದಿರುವ ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನವನ್ನು ಪಾವತಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ವೃಂದಗಳ ನೌಕರರ ಕೇಂದ್ರ ಸಂಘ ಬೆಂಗಳೂರು, ಬೆಳಗಾವಿ ಜಿಲ್ಲಾ ಶಾಖೆಯ ವತಿಯಿಂದ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೋಣಿ ಮತ್ತು ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕ ಸಂಜಯ ಹಲ್ಯಾಳ ರವರಿಗೆ ಮನವಿ ನೀಡಿ ವಿನಂತಿಸಲಾಯಿತು.
ಈ ಸಂದರ್ಬದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ವೃಂದಗಳ ನೌಕರರ ಕೇಂದ್ರ ಸಂಘ ಬೆಂಗಳೂರು, ಬೆಳಗಾವಿ ಜಿಲ್ಲಾ ಅಧ್ಯಕ್ಷ ಜಗಧೀಶ ಗಣಾಚಾರಿ ಆರ್ಥಿಕ ಇಲಾಖೆಯ ಆದೇಶದಂತೆ ಕಳೆದ ಆರ್ಥಿಕ ವರ್ಷದಲ್ಲಿನ ಯಾವುದೇ ಬಿಲ್ಲುಗಳನ್ನು ಬಟವಡೆ ಮಾಡದಂತೆ ಖಜಾನೆಗಳಿಗೆ ಸೂಚಿಸಿದ್ದರ ಹಿನ್ನಲೆಯಲ್ಲಿ ಖಜಾನೆಯಲ್ಲಿ ಪೆಬ್ರುವರಿ-೨೦೨೩ ರ ತಿಂಗಳ ವೇತನ ಬಿಲ್ಲುಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಪೆಬ್ರುವರಿ-೨೦೨೩ ವೇತನ ಬಿಲ್ಲುಗಳಿಗೆ ಅನುದಾನ ಬಿಡುಗಡೆ ಮಾಡಿ ವೇತನ ಪಾವತಿಯಾಗುವಲ್ಲಿ ಸೂಕ್ತ ಕ್ರಮ ಜರುಗಿಸಲು ವಿನಂತಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೋಣಿ ಶಿಘ್ರವಾಗಿ ಸಂಬಂದಿಸಿದ ಇಲಾಖೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಕಳೆದ ಆರ್ಥಿಕ ವರ್ಷದಲ್ಲಿನ ಬಾಕಿ ಉಳಿದಿರುವ ಪೆಬ್ರುವರಿ-೨೦೨೩ ವೇತನ ಬಿಲ್ಲುಗಳಿಗೆ ಅನುದಾನ ಪಡೆದುಕೊಂಡು ಪಾವತಿಸುವಲ್ಲಿ ಪ್ರಯತಿಸುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ವಿವಿಧ ವೃಂದಗಳ ಅಧ್ಯಕ್ಷರಾದ ಸಂತೋಷ ತಾವದಾರೆ, ಮಂಜು ಬಿಸನಳ್ಳಿ, ವಿನಾಯಕ ದೇಶನೂರ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳುಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ವೃಂದಗಳ ನೌಕರರ ಕೇಂದ್ರ ಸಂಘ ಬೆಂಗಳೂರು ಬೆಳಗಾವಿ ಜಿಲ್ಲಾ ಶಾಖೆಯ ಉಪಾಧ್ಯಕ್ಷ ರಮೇಶ ಮಡಿವಾಳರ, ಪ್ರಕಾಶ ಅಂದಾನಿ, ಕಿರಣ ಸಾವಂತನವರ, ಪ್ರಶಾಂತ ಪಾಟೀಲ, ಮಾರುತಿ ಸಂತಾಜಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
Gadi Kannadiga > Local News > ಆರೋಗ್ಯ ಇಲಾಖೆ ಬಾಕಿ ವೇತನ ಪಾವತಿಗೆ ಡಿ.ಹೆಚ್.ಓ ಗೆ ಮನವಿ
ಆರೋಗ್ಯ ಇಲಾಖೆ ಬಾಕಿ ವೇತನ ಪಾವತಿಗೆ ಡಿ.ಹೆಚ್.ಓ ಗೆ ಮನವಿ
Suresh26/06/2023
posted on
