ಬೆಳಗಾವಿ ; ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ರಕ್ಷಕ ಪೊಲೀಸ್ ದಳಪತಿಗಳಿಗೆ ಗೌರವಧನವನ್ನು ನೀಡುವಂತೆ ಕರ್ನಾಟಕ ರಾಜ್ಯ ಗ್ರಾಮ ರಕ್ಷಕ ಪೊಲೀಸ್ ದಳ ಪತಿಗಳ ಸಂಘದ ರಾಜ್ಯಾಧ್ಯಕ್ಷರಾದ ಸಿಎಸ್ ಪಾಟೀಲ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ .
ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ದಳಪತಿಗಳ ಸಂಘದ ನಿಯೋಗವು ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮನವಿ ಅರ್ಪಿಸಿತು .
ಗ್ರಾಮರಕ್ಷಕ ದಳ ಪತಿಗಳಿಗೆ ಗೌರವ ಧನವನ್ನು ನೀಡುವ ಕುರಿತು ಕಳೆದ ಹಲವು ದಶಕಗಳಿಂದ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಆದರೆ ಈವರೆಗೂ ತಮ್ಮ ಬೇಡಿಕೆ ಈಡೇರಿಲ್ಲ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ .
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರಿಗೂ ಮನವಿ ನೀಡಲಾಗಿತ್ತು ಅದಕ್ಕೂ ಮುನ್ನ ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿಯವರಿಗೂ ಮನವಿ ನೀಡಲಾಗಿತ್ತು ಸದಾನಂದ ಗೌಡರು ಮತ್ತು ಜಗದೀಶ್ ಶೆಟ್ಟರ್ ಅವರಿಗೂ ಮನವಿ ನೀಡಲಾಗಿತ್ತು .
ಆಗ ನಮ್ಮ ಬೇಡಿಕೆ ಈಡೇರಿಸುವ ಕುರಿತು ಉಭಯ ಮುಖ್ಯಮಂತ್ರಿಗಳಿಂದ ಆಶ್ವಾಸನೆ ದೊರಕಿತ್ತು ದುರ್ದೈವದಿಂದ ಕೊನೆಯ ಹಂತದಲ್ಲಿ ಸರ್ಕಾರಗಳು ಬದಲಾದ ಕಾರಣ ನಮ್ಮ ಬೇಡಿಕೆ ಈಡೇರದೆ ನೆನೆಗುದಿಗೆ ಬಿತ್ತು ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ .
ಈ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಮನವಿಯೊಂದನ್ನು ಸಲ್ಲಿಸಲಾಗಿತು.ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಗ್ರಾಮರಕ್ಷಕ ದಳ ಪತಿಗಳ ಪರವಾಗಿ ತೀರ್ಪನ್ನು ನೀಡಿ ಗ್ರಾಮರಕ್ಷಕ ದಳಪತಿಗಳಿಗೆ ಗೌರವಧನವನ್ನು ನಿಗದಿಪಡಿಸುವಂತೆ ಆದೇಶವನ್ನು ನೀಡಿತ್ತು .ನ್ಯಾಯಾಲಯದ ಆದೇಶದ ಪ್ರತಿಯನ್ನು ಸರ್ಕಾರಕ್ಕೆ ನೀಡಿದಾಗ ಸರ್ಕಾರ ಕೂಡ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿತ್ತು ಆದರೆ ಈವರೆಗೂ ಅದು ಜಾರಿಯಾಗಿಲ್ಲ ಎಂದು ಸಿ ಎಸ್ ಪಾಟೀಲ್ ಅವರು ಹೇಳಿದ್ದಾರೆ .
ಈ ಸಂಬಂಧ ಸರ್ವೋಚ್ಛ ನ್ಯಾಯಾಲಯ ಕೂಡ ಹನ್ನೊಂದು ಇಲಾಖೆಗಳ ಅಡಿಯಲ್ಲಿ ಬರುವ ದಿನಗೂಲಿಗಳಿಗೆ ಗೌರವ ಧನವನ್ನು ನಿಗದಿಪಡಿಸುವ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಆ ಹನ್ನೊಂದು ಇಲಾಖೆಗಳ ಪೈಕಿ ಗ್ರಾಮರಕ್ಷಕ ದಳಪತಿಗಳು ಕೂಡ ಒಳಗೊಳ್ಳುತ್ತಾರೆ ಎಂದು ಸಿಎಸ್ ಪಾಟೀಲ್ ಹೇಳಿದ್ದಾರೆ .
ಹಣ ವಸೂಲಿ ಮಾಡುವ ಕಿಡಿಗೇಡಿಗಳ ವಿರುದ್ಧ ಎಚ್ಚರಿಕೆ ;
ಸರ್ಕಾರದಿಂದ ಗೌರವ ಧನ ಕೊಡಿಸುವುದಾಗಿ ಕೆಲವು ಕಿಡಿಗೇಡಿಗಳು ಗ್ರಾಮರಕ್ಷಕ ದಳಪತಿಗಳಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ ಇಂಥವರಿಂದ ದೂರ ಇರುವಂತೆ ಗ್ರಾಮರಕ್ಷಕ ದಳಪತಿಗಳಿಗೆ ಸೂಚನೆ ನೀಡಿರುವ ಸಿ ಎಸ್ ಪಾಟೀಲ್ ಅವರು ಯಾರಾದರೂ ಬಂದು ದಳಪತಿಗಳ ಹತ್ತಿರ ದುಡ್ಡು ಕೇಳಿದರೇ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದ್ಧಾರೆ.ಹಾಗೂ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅವರು ಹೇಳಿದ್ದಾರೆ .
ಕರ್ನಾಟಕ ರಾಜ್ಯ ಗ್ರಾಮ ರಕ್ಷಕ ದಳ ಪತಿಗಳ ಸಂಘ ಒಂದೇ ಇದ್ದು ಅದೇ ಅಧಿಕೃತ ಸಂಘವಾಗಿದೆ ಎಂದವರು ಹೇಳಿದ್ದಾರೆ .