ಗದಗಫೆ ೨೧: ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಪ್ರತಿಯೊಬ್ಬ ಮತದಾರನ ಮತದಾನದ ದಿನದಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನ ಸಾಮಾನ್ಯರನ್ನು ಮತ ಚಲಾಯಿಸಲು ಪ್ರೇರೆಪಿಸಿ ಪ್ರತಿಶತ ನೂರರಷ್ಟು ಮತದಾನವಾಗುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿ.ಇ.ಓ. ಡಾ.ಸುಶೀಲಾ ಬಿ ಸೂಚಿಸಿದರು.
ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಮಂಗಳವಾರ ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಸೆಕ್ಟೆರ ಅಧಿಕಾರಿಗಳು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ಬಿ.ಎಲ್.ಓ ಮೇಲ್ವಿಚಾರಕರು ಹಾಗೂ ಬಿ.ಎಲ್.ಓಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಶೇಕಡಾವಾರು ಮತದಾನದ ಅಂಕಿ ಅಂಶಗಳನ್ನು ಪರಾಮರ್ಶಿಸಿ ಅತೀ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಹಾಗೂ ಅತೀ ಹೆಚ್ಚು ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ಮತದಾನ ಕಡಿಮೆ ಆಗಿರುವದಕ್ಕೆ ನಿಖರ ಕಾರಣಗಳೊಂದಿಗೆ ಬಿ.ಎಲ್.ಓ ಗಳು ವರದಿ ನೀಡಬೇಕು. ಹಾಗೂ ಮತದಾನ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು.
ರಾಜ್ಯದ ಒಟ್ಟಾರೆ ಶೇಕಡಾವಾರು ಮತದಾನಕ್ಕಿಂತ ಜಿಲ್ಲೆಯ ಕ್ಷೇತ್ರವಾರು ಮತದಾನ ಅಧಿಕವಾಗಬೇಕು. ಮತದಾನದ ಮಹತ್ವ ಜನಸಾಮಾನ್ಯರಿಗೆ ತಿಳಿಸಿಕೊಡುವ ಮೂಲಕ ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ ಸಧೃಡ ಪ್ರಜಾಪ್ರಭುತ್ವ ನಿರ್ಮಿಸಲು ಮತದಾರರನ್ನು ಪ್ರೇರೆಪಿಸುವಂತಹ ಕಾರ್ಯವನ್ನು ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ಅಂದಾಜು ಹತ್ತು ಸಾವಿರಕ್ಕೂ ಅಧಿಕ ವಿಕಲಚೇತನರಿದ್ದಾರೆ ಇವರ ನೊಂದಣಿಗೆ ವಿ.ಆರ್.ಡಬ್ಲೂ. ಎಂ.ಆರ್.ಡಬ್ಲೂ ಸಹಾಯ ಪಡೆದು ಬಿ.ಎಲ್.ಓ.ಗಳು ನೊಂದಣಿ ಮಾಡಿಸಬೇಕು. ಅದರಂತೆ ೧೮ ವರ್ಷ ವಯೋಮಾನ ಪೂರೈಸಿದ ೨೧ ಸಾವಿರಕ್ಕೂ ಅಧಿಕ ಯುವಜನರಿದ್ದು ೧೬,೪೪೩ ಯುವ ಮತದಾರರ ನೋಂದಣಿಯಾಗಿದೆ ಉಳಿದ ಯುವಕರನ್ನು ನೋಂದಾಯಿಸಲು ಬಿ.ಎಲ್.ಓ.ಗಳು ಕಾರ್ಯಪ್ರವೃತ್ತರಾಗಬೇಕು. ಚುನಾವಣಾ ಆಯೋಗವು ಅರ್ಹತಾ ದಿನಾಂಕವನ್ನು ವರ್ಷದಲ್ಲಿ ನಾಲ್ಕು ಬಾರಿ ನಿಗದಿಪಡಿಸಿದ್ದು ಇದರ ಸದುಪಯೋಗವನ್ನು ಯುವ ಮತದಾರರಿಗೆ ತಲುಪಿಸಬೇಕು ಎಂದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ವಾಗೀಶ್ ಪಂಡಿತಾರಾಧ್ಯ ಮಾತನಾಡಿ ಪ್ರತಿಯೊಬ್ಬರು ಮತದಾನದ ಮಹತ್ವ, ಪ್ರಕ್ರಿಯೆ ಹಾಗೂ ಮತದಾನದ ಜಾಗೃತಿ ಮೂಡಿಸುವಂತಹ ಘೋಷವಾಕ್ಯಗಳನ್ನು, ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮತದಾರರಿಗೆ ತಮ್ಮ ಹಕ್ಕುಗಳನ್ನು ತಪ್ಪದೇ ಚಲಾಯಿಸಲು ಮುಂದಾಗುವಂತೆ ತಿಳಿಸಿದ ಅವರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ತಿಳಿಸಿದರು.
ತಹಶೀಲ್ದಾರ ಮಲ್ಲಿಕಾರ್ಜುನ ಮಾತನಾಡಿ ಮತದಾನದ ಶೇಕಡಾವಾರು ಅಂಕಿ ಅಂಶಗಳನ್ನು ಗಮನಿಸಿದಾಗ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದ ಮತದಾರರು ಮತದಾನ ಮಾಡುವಲ್ಲಿ ನಿರಾಸಕ್ತಿ ವಹಿಸಿದ್ದಾರೆ. ಇದಕ್ಕೇ ಸೂಕ್ತ ಕಾರಣಗಳನ್ನು ಬಿ.ಎಲ್.ಓ ಗಳು ಕಂಡು ಹಿಡಿದು ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ, ನಗರಸಭೆ ಪೌರಾಯುಕ್ತ ಗಂಗಪ್ಪ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿಗಳು, ಸೆಕ್ಟೆರ ಅಧಿಕಾರಿಗಳು, ಬಿ.ಎಲ್.ಓ.ಗಳು ಹಾಜರಿದ್ದರು.
Gadi Kannadiga > State > ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಮತದಾನದ ಪಾತ್ರ ಪ್ರಮುಖ:ಡಾ.ಸುಶೀಲಾ ಬಿ,