ಹೊಸಪೇಟೆ(ವಿಜಯನಗರ),ಅ.೧೮: ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ವಿಜಯನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಲಾತಂಡಗಳ ಆಯ್ಕೆ ಮಾಡಲಾಗಿದೆ ಎಂದು ಹಿರಿಯ ಸಹಾಯಕ ನಿರ್ದೇಶಕ ಧನಂಜಯ ತಿಳಿಸಿದ್ದಾರೆ.
ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆನ್ನುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ಜೊತೆಗೆ ಬೀದಿನಾಟಕ, ಪ್ರಚಾರಗೀತೆಗಳ ಮೂಲಕವೂ ಇಲಾಖೆ ಪ್ರಚಾರ ಕೈಗೊಳ್ಳಲಿದೆ. ಈ ಉದ್ದೇಶದಿಂದ ವಿಜಯನಗರ ಜಿಲ್ಲೆಯಲ್ಲಿನ ವಿವಿಧ ಸಂಘ, ಸಂಸ್ಥೆಗಳ ಮೂಲಕ ಅರ್ಜಿ ಆಹ್ವಾನಿಸಿ ಕಲಾತಂಡಗಳ ಆಯ್ಕೆಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ.
ಒಟ್ಟು ೩ ಬೀದಿನಾಟಕ ಮತ್ತು ೩ ಜಾನಪದ ಸಂಗೀತ ತಂಡಗಳನ್ನು ಆಯ್ಕೆ ಮಾಡಬೇಕಾಗಿದ್ದು ಒಟ್ಟು ೫ ಬೀದಿನಾಟಕ ತಂಡಗಳು ಹಾಗೂ ೨ ಜಾನಪದ ಸಂಗೀತ ತಂಡಗಳು ಅರ್ಜಿ ಸಲ್ಲಿಸಿದ್ದು ಆಯ್ಕೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಸಮಿತಿ ಮೂಲಕ ಅಕ್ಟೋಬರ್ ೧೮ ರಂದು ಪತ್ರಿಕಾಭವನದಲ್ಲಿ ಆಯ್ಕೆ ಪ್ರದರ್ಶನವನ್ನು ಏರ್ಪಡಸಲಾಗಿತ್ತು.
ಈ ವೇಳೆ ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ ಮುದುಗಲ್, ಆರೋಗ್ಯ ಇಲಾಖೆ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಮನಿ, ಹಂಪಿ ಕನ್ನಡ ವಿ.ವಿ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ಗೋವಿಂದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕಲಾತಂಡಗಳು ಭಾಗವಹಿಸಿದ್ದವು.