This is the title of the web page
This is the title of the web page

Please assign a menu to the primary menu location under menu

NationalState

ಭರತಭೂಮಿಯ ವೀರತ್ವಶಿಖರಾಗ್ರೇಸರನೀ ಶರಭರುದ್ರ ಶ್ರೀವೀರಭದ್ರ


ಭಾರತೀಯ ಸಾಂಸ್ಕೃತಿಕ ಚರಿತ್ರೆಯಲ್ಲಿ ವೀರಭದ್ರನಿಗೆ ವಿಶಿಷ್ಟ ಸ್ಥಾನವಿದೆ. ಹಿಂದೂ ಧರ್ಮದಲ್ಲಿ ವೇದ ಹಾಗೂ ಪುರಾಣ ಕಥೆಗಳಲ್ಲಿ ತಿಳಿಸಿರುವಂತೆ ವೀರಭದ್ರನ ಅವತಾರ ಒಂದು ನಿರ್ದಿಷ್ಟ ಗುರಿಯ ಈಡೇರಿಕೆಗಾಗಿ ಆಗಿದೆ. ಕೈಲಾಸವಾಸಿ ಪರಮೇಶ್ವರನ ಅವತಾರವೆಂದೇ ಹೇಳಲ್ಪಡುವ ಈ ವೀರಭದ್ರಸ್ವಾಮಿಯು ಸಹಸ್ರ ಸಹಸ್ರ ವರ್ಷಗಳಿಂದ ಶಿವಾರಾಧಕ ಭಾರತೀಯರ, ಅದರಲ್ಲೂ ದಕ್ಷಿಣ ಭಾರತದ ಭಕ್ತರ ಆರಾಧ್ಯ ದೈವವಾಗಿ ಪೂಜಿತಗೊಳ್ಳುತ್ತ ಬಂದಿದ್ದಾನೆ. ಶಿವ ಸಂಸ್ಕೃತಿಯ ಹರಿಕಾರನಾಗಿ, ವೀರಶೈವರ ಗೋತ್ರಪುರುಷನಾಗಿ, ಸದ್ಭಕ್ತರ ದೈವಿತನಾಗಿ, ಶೈವ – ವೀರಶೈವ ಸಾಂಸ್ಕೃತಿಕ ಇತಿಹಾಸದ ತುಂಬೆಲ್ಲ ಪ್ರಕಾಶಿಸುತ್ತಲೇ ಬಂದಿದ್ದಾರೆ. ಇನ್ನು ವೀರಭದ್ರನಿಗೆ ಸಂಬಂಧಿಸಿದಂತೆ ಹತ್ತು ಹಲವು ಬಗೆಯ ಸಂಪ್ರದಾಯಗಳು, ಆಚರಣೆಗಳು, ಸಾಗಿ ಬಂದಿದ್ದು ಹಲವು ಪ್ರದೇಶ, ಹಲವು ಸಮುದಾಯ, ಹಲವು ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಮೌಖಿಕ ಮತ್ತು ಗ್ರಾಂಥಿಕ ಸಾಹಿತ್ಯ ಸೃಷ್ಟಿಯಾಗಿದೆ. ಭಾರತದ ಅಸಂಖ್ಯಾತ ಚಿತ್ರ, ಶಿಲ್ಪ, ದೇವಾಲಯಗಳು ವೀರಭದ್ರನ ಯಶೋಗಾಥೆಯನ್ನು ತೋರಿಸುತ್ತಲಿವೆ. ಕೋಟ್ಯಂತರ ಭಕ್ತರು ಜಾತಿಭೇದವಿಲ್ಲದೇ ವೀರಭದ್ರನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಅಂತೆಯೇ ಭರತಭೂಮಿಯಾದ್ಯಂತ ವೀರಭದ್ರನ ಕ್ಷೇತ್ರಗಳು ಪಸರಿಸಿವೆ. ವೀರಭದ್ರನನ್ನು ವೀರಶೈವರ ಮೂವತ್ತಾರು ತತ್ವ ಪ್ರತಿಪಾದಕ ಮತ್ತು ಆರಾಧಕನೆಂದು ಭದ್ರ ಕವಚದಲ್ಲಿ ಹೇಳಲಾಗಿದೆ. ಇನ್ನೂ ವಿಶೇಷವೆಂದರೆ ವೀರಭದ್ರನ ಸಂಸ್ಕೃತಿಯು ಸ್ಥಾವರವಾಗದೆ ಜಂಗಮವಾಗಿರುವುದನ್ನು ನಾವೆಲ್ಲರೂ ಗಮನಿಸಲೇಬೇಕಾದ ಸಂಗತಿಯಾಗಿದೆ. ವೀರಭದ್ರ ಸ್ಥಾವರ ಗುಡಿಗಳಲ್ಲಿ ಪೂಜ್ಯನಾದಂತೆಯೇ ಜಂಗಮರ ಮೂಲಕ, ಭಕ್ತರ ಮೂಲಕ ಜೀವದ ಜಡತ್ವವನ್ನು ಹೊಡೆದೆಬ್ಬಿಸಿ ವೀರಾವೇಶದಿಂದ ಜಾಗೃತಗೊಳಿಸುವ ಕಾರ್ಯ ಮಾಡುವ ವೀರಗಾಸೆ, ಪುರವಂತರ ರೂಪದಲ್ಲಿ ಇಂದಿಗೂ ಜೀವಂತವಾಗಿದ್ದಾನೆ.
ವೀರತನಕ್ಕೆ ಸಾಂಸ್ಕೃತಿಕ ಪರಂಪರೆಯ ಹೆಸರೇ ವೀರಭದ್ರ. ಈಗಾಗಲೇ ಹೇಳಿರುವಂತೆ ತಲೆಮಾರುಗಳಲ್ಲಿ ಅವನನ್ನು ನೆನೆಯದ ಜನವಿಲ್ಲ; ಆರಾಧಿಸದ ಭಕ್ತರಿಲ್ಲ ; ಕಾವ್ಯ, ಪುರಾಣ, ಸಾಹಿತ್ಯ ಬರೆಯದ ಕವಿಗಳಿಲ್ಲ; ವಡುಬು ಉಗ್ಗಡಿಸದ ವೀರಗಾಸಿಗಳಿಲ್ಲ; ಪುರವಂತರಿಲ್ಲ. ಜನಪದದಲ್ಲಿಯಂತೂ, ಅನ್ಯಾಯದ ವಿರುದ್ಧ, ಅಹಂಕಾರದ ವಿರುದ್ಧ ಸೆಣೆಸಿ, ಸಾಧಿಸಿದಾತ ಎಂದೇ ಪ್ರಚಲಿತವಾಗಿದೆ. ಶಿಲ್ಪದಲ್ಲಿ ಅವನ ವಿವಿಧ ಬಗೆಯ ಶೈಲಿಗಳಿವೆ. ಸಿಂಧೂ ಸಂಸ್ಕೃತಿಯ ಕಾಲದಿಂದ, ವೇದಗಳ ಕಾಲದಿಂದ ಈವರೆಗೆ ಅವನನ್ನು ಸಾಹಿತ್ಯದಲ್ಲಿ ಶಾಸನದಲ್ಲಿ ವರ್ಣಿಸಿದವೆಷ್ಟೋ ಕಾವ್ಯ – ಸಾಹಿತ್ಯ – ಕೃತಿಗಳಿವೆ. ಇವೆಲ್ಲ ಜನಬದುಕಿನಲ್ಲಿ ಅವನು ಹಾಸುಹೊಕ್ಕಾಗಿದ್ದನ್ನು ತಿಳಿಸುವುದಲ್ಲದೇ, ಅಂತಹ ವೀರವ್ಯಕ್ತಿತ್ವದ ಐತಿಹಾಸಿಕತೆಯನ್ನು ನಿದರ್ಶಿಸುತ್ತವೆ. ಇಂತಹ ಬಹುಮುಖಿ ಸ್ವರೂಪದ ವೀರಭದ್ರನ ಅವಲೋಕನವೆಂದರೆ ಸಿಂಧುವಿನೊಳಗಿನ ಕಿರುಬಿಂದುವಾಗುತ್ತದೆ. ಕರ್ನಾಟಕದಲ್ಲಿಯಂತೂ ಅವನೊಬ್ಬ ಜೀವಂತ ಆಸಕ್ತಿಯ ವೀರಪುರುಷನಾಗಿ ತೇಜೋನ್ವಿತನಾಗಿ ಕಂಗೊಳಿಸಿಬಿಟ್ಟಿದ್ದಾನೆ.
ವೀರಭದ್ರನ ಚರಿತೆ, ಚಾರಿತ್ರ್ಯವನ್ನು ಬುಡಕಟ್ಟಿನ ಮೂಲದಿಂದಲೂ ಗುರುತಿಸಬಹುದಾದರೂ, ಅವನ ಕುರಿತಂತೆ ಸೈನ್ಧವ ಸಂಸ್ಕೃತಿಯ ಕಾಲದಿಂದ, ವೇದ – ಉಪನಿಷತ್ತು, ಆಗಮ ಸಂಹಿತೆ, ಪುರಾಣ, ತಂತ್ರ, ಇತಿಹಾಸ, ಸಾಹಿತ್ಯ, ಶಾಸನ, ಜಾನಪದ ಸಾಹಿತ್ಯ, ಸ್ತೋತ್ರ, ನಾಮಾವಳಿ, ಪ್ರೌಢಕಾವ್ಯ, ಚಿತ್ರಕಲೆ, ಗುಡಿವಾಸ್ತು, ಜನಸಂಸ್ಕೃತಿಗಳ ಮೇಲೆ ಬೀರಿದಂತಹ ಪ್ರಭಾವಗಳು ಅವನ ವ್ಯಕ್ತಿತ್ವದ ಔನ್ನತ್ಯದ ಮಹಾಪ್ರತಿಮೆಯನ್ನು ಬ್ರಹ್ಮಾಂಡ ಭಾವದಲ್ಲಿ ವ್ಯಕ್ತಪಡಿಸಿದಂತೆ ತೋರುತ್ತದೆ. ಅಂತೆಯೇ ವೀರಶೈವರ ವಿಶಾಲಧೀರ ಪುರುಷನಾಗಿ ನೆಲೆನಿಂತಿದ್ದಾನೆ. ಅವನ ಸಹಗಾಮಿ ಭದ್ರಕಾಳಿ ಅವನಷ್ಟೇ ಎತ್ತರಕ್ಕೆ ವ್ಯಕ್ತಿತ್ವವನ್ನು ಬೆಳೆಸಿಕೊಂಡವಳು. ದಕ್ಷಯಜ್ಞನಾಶ ಮತ್ತು ಆನಂತರದ ಸಂದರ್ಭದಲ್ಲಿ ಹೆಣ್ಣಿನ ಗಾಂಭೀರ್ಯವನ್ನು ಸ್ತ್ರೀ ಶಕ್ತಿಯ ಸ್ವರೂಪವನ್ನು ಮಾರ್ದನಿಸಿಕೊಂಡು ನಿಂತವಳು. ವೀರಭದ್ರ ಮತ್ತು ಭದ್ರಕಾಳಿಯ ಸಾಂದರ್ಭಿಕ ಇರುವಿಕೆಯೇ   ದಕ್ಷನಿಂದ ಹಿಡಿದು ವಿಷ್ಣುವಿನವರೆಗೂ ಸರ್ವ ದೇವಾನುದೇವತೆಗಳನ್ನೂ ವಿನೀತರನ್ನಾಗಿಸಿತು. ದುರಹಂಕಾರದೆದುರು, ಕೀರ್ತಿಲೋಭದೆದುರು, ಜೀವಹತ್ಯೆಯೆದುರು, ದರ್ಪದೆದುರು, ಸಮ ಸಮ ಶೌರ್ಯವನ್ನು ಮೆರೆದು ಮಣಿಸಿದಕಥೆ ಹಾಗೂ ವಿನೀತತೆಯ ಮೌಲ್ಯವನ್ನು ಜೀವಂತವಿರಿಸಿದ ಕಥೆ ಇಲ್ಲಿದೆ.
    ಸಂಸ್ಕೃತ ಸಾಹಿತ್ಯದಲ್ಲಿ ಉಕ್ತನಾಗಿರುವ ವೀರಭದ್ರನು, ಹೆಸರಿಗನುಗುಣವಾಗಿಯೇ ವೀರರಸಪೋಷಿತ ಶಬ್ದಗಳಲ್ಲಿಯೇ ವರ್ಣಿತನಾಗಿದ್ದಾನೆ. ವಾಯುಪುರಾಣ – ‘ವೀರಭದ್ರೋ ಮಹಾಶೂರೋ, ರೌದ್ರೋ ರುದ್ರಾವತಾರಕ’ ಎಂದಿದೆ. ಶಿವರಹಸ್ಯ –
 “ಅಖರ್ವಗರ್ವೋಧ್ಬತ ದಕ್ಷಶಿಕ್ಷಾಕರೋಗ್ರ ರುದ್ರೋಧ್ಭವ ವೀರಭದ್ರಃ” ಎಂದಿದೆ. ಋಗ್ವೇದದಲ್ಲಿ ಬರುವ ಅವನ ವರ್ಣನೆ – ‘ಸ ವೀರೋ ದಕ್ಷ ಸಾದನೋ ವಿಯಸ್ತಂಭ ರೋದಸೀ’ – ಎಂದರೆ – ದಕ್ಷ ಮರ್ದನ ವೀರಭದ್ರ ಭೂಮ್ಯಾಕಾಶಗಳನ್ನು ಸ್ತಂಭಿಸಿದ ಎನ್ನುವಲ್ಲಿ ‘ಪಾತಾಳದಿಂದತ್ತ ನಿಮ್ಮ ಶ್ರೀ ಚರಣ, ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀ ಮುಕುಟ’ ಎಂಬ ಬಸವಣ್ಣನ ವಚನದ ಮಾತುಗಳ ಪ್ರಾಚೀನ ಧ್ವನಿಯಾಗಿ ಕಾಣುತ್ತದೆ. ಭೂಮಿ ಆಕಾಶಗಳನ್ನು ಮೀರಿ ನಿಂತವನಾಗಿದ್ದ ಅವನು ಯಜುರ್ವೇದದ ಪ್ರಕಾರ ದಕ್ಷಯಜ್ಞದ ಪಾತ್ರಧಾರಿಗಳನ್ನೆಲ್ಲ ದಮನಿಸಿದ ಆರಾಧ್ಯ ಶೂರದೇವ. ಋಷಿಬಂಧುವಾದ ಶರಭಾವತಾರಿಯ ಕೃಪೆಬೇಕೆಂದು ಋಗ್ವೇದ ಒತ್ತಿ ಹೇಳಿದೆ.
 “ಚರ್ಮಾಂಬರೋ ಮಹಾವೀರೋ ವೀರಭದ್ರೋ ಬಭೂವ ಹ, ಸ ಏಕೋ ರುದ್ರೋ ಧ್ಯೇಯಃ ಸರ್ವೇಷಾಮ್ ಸರ್ವ ಸಿದ್ಧಯೇ”
೫೨ನೆಯ ಉಪನಿಷತ್ತೆನಿಸಿದ ಶರಭೋಪನಿಷತ್ತು, ಪೈಪ್ಪಲಾದ ಮುನಿ ತ್ರಿಮೂರ್ತಿಗಳಲ್ಲಿ ಮಿಗಿಲಾದ ಸ್ವರೂಪ ಯಾವುದು ಎಂದು ಬ್ರಹ್ಮನನ್ನು ಪ್ರಶ್ನಿಸಿದ ಸಂಗತಿ ಹೇಳಿದೆ. ಅದಕ್ಕೆ ಉತ್ತರವಾಗಿ ‘ಲೋಕಹಂತಾರನಾಗಿದ್ದ ನರಸಿಂಹನನ್ನು ಶರಭನು ಕೊಂದು ಆತನ ತೊಗಲನ್ನೇ ಉಡುಗೆ ಮಾಡಿಕೊಂಡ’. ಆತನೇ ಮಹಾವೀರನಾದ ವೀರಭದ್ರ ಶ್ರೀ ‘ಶರಭರುದ್ರ’  ಎಂದು ಅವನಿಗೆ ನಮನಗೈದಿರುವ ವಿಷಯವಿದೆ. ಈ ಉಪನಿಷತ್ತಿನ ಷಟ್ಸ್ಥಲ ಕೌಮುದಿಯಲ್ಲಿ ಬರುವ ವರ್ಣನೆಯಿದು.
 “ಯೋ ವಾಮಪಾದಾರ್ಚಿತ ವಿಷ್ಣುನೇತ್ರಸ್ತಸ್ಮೈದದೌ, ಚಕ್ರಮತೀವ ಹೃಷ್ಟಹ ತಸ್ಮೈ ರುದ್ರಾಯ ನಮೋ ಅಸ್ತು”
 ಎಂದರೆ – ಈ ವೀರಭದ್ರನಿಗೆ ಜಗತ್ತನ್ನೇ ಭಸ್ಮಮಾಡಬಲ್ಲಂತಹ ಹಣೆಗಣ್ಣಿದೆ. ಈ ಶರಭ ಮಹಾಬಲನಿಗೆ, ದಕ್ಷಯಜ್ಞನಾಶದ ನಂತರ ಉಗ್ರತೆಯನ್ನು ಶಮನಮಾಡಲು ವಿಷ್ಣುವು ಅರ್ಚಿಸತಿಳಿಸಿದ. ಆಗ ಅವನ ಚರಣಗಳಿಗೆ ಮಾಡಿದ ೯೯೯ ಕಮಲಪುಷ್ಪಗಳ ಅರ್ಚನೆಯ ನಂತರ, ಸಂಖ್ಯೆ ಸಾವಿರಕ್ಕೆ ಒಂದು ಕೊರತೆಯಾಯಿತು. ಆಗ ವಿಷ್ಣು ತನ್ನ ನೇತ್ರಕಮಲವನ್ನು ವೀರಭದ್ರನ ಎಡಪಾದಕ್ಕಿಟ್ಟು ಅರ್ಚನೆ ಮಾಡಿದ. ಇದರಿಂದ ಸುಪ್ರೀತನಾದ ವೀರಭದ್ರ, ವಿಷ್ಣುವಿಗೆ ವಿಶಿಷ್ಟ ಚಕ್ರಾಯುಧವನ್ನು ಅನುಗ್ರಹಿಸಿದ. ಅಂತಹ ಶರಭರುದ್ರನಿಗೆ ನಮಸ್ಕಾರಗಳು.
ಇನ್ನು ವೀರಭದ್ರಸ್ವಾಮಿಯು ಮನಃಕುಂಡಲಿನಿಯೋಗದಲ್ಲಿ ಪ್ರವೀಣನಾಗಿದ್ದ. ಆತನ ಮನಸ್ಸು ಸಹಸ್ರಾರದಿಂದ ಮೇಲೇರಿ ಶಿಖಾಚಕ್ರಕ್ಕೇರಿದುದ್ದರ ಫಲಶ್ರುತಿಯಿದು. ತಾಂತ್ರಿಕ ನಿಷ್ಠೆಯ ವರ್ಣನೆಯು ಶರಭೋಪನಿಷತ್ತಿನ ‘ಅಚಿಂತ್ಯ ಶಕ್ತಿರ್ ಭಗವಾನ್ ಗಿರೀಶಃ, ಸ್ವಾವಿದ್ಯಯಾ ಕಲ್ಪಿತ ಮಾನ ಭೂಮಿಃ’ ಎಂಬ ಸಾಲುಗಳಲ್ಲಿದ್ದು, ನಿತ್ಯಾನಂದ, ನಿರ್ವಿಕಲ್ಪ, ನಿರ್ವಚನೀಯನಾದ ಕಾರಣ ಷಡ್ಗುಣೈಶ್ವರ್ಯ ಸಂಪನ್ನ ಆಗಿದ್ದ. ಗಿರೀಶಃ, ಎಂದರೆ ಪಿಂಡಾಂಡದ ಗಿರಿಶಿಖಾಶಿಖರಕ್ಕೇ ಈಶನಾಗಿದ್ದ. ಅರ್ಥಾತ್ ಅಹಂಕಾರವನ್ನು ಗೆದ್ದ ಶಿವಸ್ವರೂಪನಾಗಿದ್ದ. ಇನ್ನು ವೀರಭದ್ರ ವ್ಯಕ್ತಿತ್ವವು ಶಿಷ್ಟಮಾನಸದಲ್ಲಿ ದರ್ಶನಗೊಂಡ ಬಗೆ ಗಂಭೀರ ಸಾಹಿತ್ಯಕ ವೀರರಸೋಜ್ವಲ ಧಾರೆಯನ್ನು ಹರಿಸುತ್ತದೆ. ‘ಶ್ರೀ ಕಾಶ್ಯಪಶಿಲ್ಪಶಾಸ್ತ್ರಂ’ ಕೃತಿಯಲ್ಲಿ ವೀರಭದ್ರನ ವರ್ಣನೆ ಸೌಮ್ಯಗಂಭೀರವಾಗಿ ಮೂಡಿಬಂದಿದೆ.
 “ಚತುರ್ಭುಜಸ್ತ್ರೀನೇತ್ರಶ್ಚ ಜಟಾಮಕುಟಮಂಡಿತಃ
  ಸರ್ವಾಭರಣ  ಸಂಯುಕ್ತಃ ಶ್ವೇತವರ್ಣೋ ವೃಷಧ್ವಜಃ
  ಶೂಲಾಯುಧಶ್ಚಾಪ್ಯಭಯಂ ದಕ್ಷಿಣೇತು ಕರಧ್ವಯೇ
  ಗದಾ ಚ ವರದಂ ಚಾಪಿ ವಾಮಪಾರ್ಶ್ವಕರದ್ವಯೇ
  ಶ್ವೇತಪದ್ಮಾಸನಾಸೀನಃ ವಟವೃಕ್ಷ ಸಮಾಶ್ರಿತಃ
  ವೀರಭದ್ರಮಿತಿ ಖ್ಯಾತಂ ಬ್ರಾಹ್ಮೀ ರೂಪಂ ತತಃ ಶೃಣು”
-ನಾಲ್ಕು ಭುಜವುಳ್ಳವ, ಮೂರು ಕಣ್ಣುಳ್ಳವ, ಜಟಾಮಕುಟ, ಸರ್ವಾಭರಣ ಸಂಯುಕ್ತ, ಶ್ವೇತವರ್ಣ, ಶೂಲಧಾರಿ, ಅಭಯಹಸ್ತ, ವರದಹಸ್ತ, ಗದಾಧಾರಿ, ಬಿಳಿ ಕಮಲದ ಮೇಲೆ, ಆಲದ ಮರದ ಕೆಳಗೆ ಆಸೀನ ಎಂದೆಲ್ಲ ವರ್ಣಿತನಾಗಿ, ಶಾಂತ ರೂಪಿಯಾಗಿ ಕಾಣುತ್ತಾನೆ ಎಂದಿದೆ.
ಮುಂದುವರಿದಂತೆ ಶಾಸನಗಳೂ ಸಹ ವೀರಭದ್ರ ವ್ಯಕ್ತಿತ್ವ, ವೀರಭದ್ರಾಚರಣೆಗಳನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ. ವೇದಆಗಮಗಳಲ್ಲೇ ಅವನುಕ್ತನಾಗಿರುವುದು ಅವನ ಪ್ರಾಚೀನತೆಯನ್ನು ಪ್ರತಿಬಿಂಬಿಸುತ್ತದೆ. ಕ್ರಿ.ಶ. ೪ನೇ ಶತಮಾನದಿಂದಲೇ ಬಾಣರಲ್ಲಿ, ನಂತರ ಬಾದಾಮಿ ಚಾಲುಕ್ಯರಲ್ಲಿ, ಚೋಳರಲ್ಲಿ, ಕದಂಬರಲ್ಲಿ, ಹೊಯ್ಸಳರಲ್ಲಿ, ವಿಜಯನಗರ, ಮೈಸೂರು ಅರಸರ ಶಾಸನಗಳಲ್ಲೆಲ್ಲ ಉಕ್ತನಾಗಿದ್ದಾನೆ. ಇನ್ನು ಮಲಯಾಚಲ ಪ್ರದೇಶದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಸ್ಥಾಪಿಸಿದ ಶ್ರೀ ಮದ್ರಂಭಾಪುರೀ ವೀರಸಿಂಹಾಸನ ಪೀಠ ತನ್ನ ಗೋತ್ರಪುರುಷನ ಪ್ರಭಾವದಿಂದ ಲೋಕಕೆಲ್ಲ ಮಂಗಳವನ್ನುಂಟು ಮಾಡುತಲಿದೆ. ಅಂತೆಯೇ  ‘ಭರತಭೂಮಿಯ ವೀರತ್ವಶಿಖರಾಗ್ರೇಸರನಾದ “ಶ್ರೀ ವೀರಭದ್ರನ ಜಯಂತಿ”ಯನ್ನು ಕಳೆದ ಐದು ವರ್ಷಗಳ ಹಿಂದೆ ಪ್ರಾರಂಭ ಮಾಡಿದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಪ್ರದೀಪ ಕಂಕಣವಾಡಿ ರವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಭಾದ್ರಪದ ಮಾಸದ ಮೊದಲನೇ ಮಂಗಳವಾರ ಆಚರಿಸಲಾಗುತ್ತದೆ. ಸರ್ವರೂ ಈ ಮಂಗಲ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಿರಿ‌. ಶುಭಫಲಪ್ರದಾಯಕವಾಗಿರಲಿ.

Leave a Reply