ಕುಷ್ಟಗಿ:- ತಾಲೂಕಿನ ಹಿರಿಯ ಪತ್ರಕರ್ತ ಕೃಷಿಪ್ರಿಯ ಸಂಪಾದಕ ಶರಣಪ್ಪ ಕುಂಬಾರ ಬುಧವಾರ ದಿನಾಂಕ:- ಜುಲೈ-5 ರಂದು ತಡರಾತ್ರಿ ಕಡಿಮೆ ರಕ್ತದೊತ್ತಡ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ.
ಕೃಷಿ ಚಟುವಟಿಕೆ,ರೈತನ ಜೀವನಾಧಾರಿತ ಸುದ್ದಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂಗ್ರಹಿಸಿ ಪ್ರಕಟಿಸುತ್ತಿದ್ದ ಮಾಧ್ಯಮ ಪ್ರತಿನಿಧಿಯಾಗಿದ್ದರು.
ಕುಷ್ಟಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಿರಿಯ ಮತ್ತು ಕಿರಿಯ ವಯೋಮಾನದ ಬರಹಗಾರರ ಜೊತೆ ನಿಕಟ ಸಂಪರ್ಕ ಹೊಂದಿದ್ದರು.
ಸಮಾಜ ಕಳಕಳಿಯ, ನೊಂದವರ ಪರ ಸುದ್ದಿಗಳ ಬಿತ್ತರಿಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ತೆರಿಸುವ ಕಾರ್ಯದಲ್ಲಿ ಸಿದ್ದಹಸ್ತರಾಗಿದ್ದರು.
ಸುದ್ದಿಗಳನ್ನು ಸಂಗ್ರಹಿಸುವ ಭರದಲ್ಲಿ, ಒತ್ತಡಯುತ ಮಾಧ್ಯಮದ ಕ್ಷೇತ್ರದಲ್ಲಿ ತಾಲೂಕಿನ ಅತ್ಯಂತ ದ್ವಿಚಕ್ರ ವಾಹನದಲ್ಲಿ ಸಂಚರಿಸಿ, ಆರೋಗ್ಯದ ಕಡೆ ಹೆಚ್ಚು ಗಮನ ಹರಿಸದೆ ಇಂದು ಇಹಲೋಕ ತ್ಯಜಿಸಿದ್ದಾರೆ.
ಅಗಲಿದ ‘ಮಾಧ್ಯಮ ಮಿತ್ರ’ನಿಗೆ ಕರ್ನಾಟಕ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಹಾಗೂ ಕುಷ್ಟಗಿ ತಾಲೂಕ ಘಟಕ ಸೇರಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಷ್ಟಗಿ ತಾಲೂಕು ಘಟಕದ ವತಿಯಿಂದ ಸಂತಾಪ ಸಭೆ ಮೂಲಕ ಅಗಲಿದ ಚೇತನರ ಆತ್ಮಕ್ಕೆ ಶಾಂತಿ ಕೋರಿದರು.
ಸಂತಾಪ ಸೂಚಕ ಸಭೆಯಲ್ಲಿ ಮಾಧ್ಯಮ ಕ್ಷೇತ್ರದ ಒಡನಾಡಿಗಳು ಮತ್ತು ಪತ್ರಕರ್ತರು ,ಅವರು ಇತರ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದ ನಡೆ, ನಗುವಿನೊಂದಿಗಿನ ಆತ್ಮೀಯ ಕ್ಷಣಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶರಣಪ್ಪ ಕುಂಬಾರ ಕುಟುಂಬಕ್ಕೆ ಆರ್ಥಿಕ ಮತ್ತು ನೈತಿಕ ಬೆಂಬಲ ತುಂಬುವ ಜೊತೆಗೆ ಪುತ್ರನ ವಿದ್ಯಾಭ್ಯಾಸ ಮತ್ತು ಕನಸಿನ ನಿವಾಸದ ಪೂರ್ಣಗೊಳಿಸುವ ವಿಶ್ವಾಸದ ನಿರ್ಣಯ ಕೈಗೊಳ್ಳಲಾಯಿತು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ