ಬೆಳಗಾವಿ: ಆಗಷ್ಟ-೨೨:ಸ್ತ್ರೀಯರು ಸ್ವಾತಂತ್ರ‍್ಯಕ್ಕೆ ಅರ್ಹರಲ್ಲ ಎನ್ನುವ ನಿಯಮ ಚಾಲ್ತಿಯಲ್ಲಿರುವ ಕಾಲದಲ್ಲಿ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂದು ಸಾಮಾಜಿಕ ಬದುಕಿನಂತೆ ಆಧ್ಯಾತ್ಮಿಕ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ ಕೊಟ್ಟು ಲಿಂಗ ಅಸಮಾನತೆಯನ್ನು ಹೊಡೆದು ಹಾಕಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಚಾರ್ಯರು ಡಾ. ಬಸವರಾಜ ಜಗಜಂಪಿ ಹೇಳಿದರು.
ಅವರು ಶಿವಬಸವ ನಗರದ ಕಾರಂಜಿ ಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಉಪನ್ಯಾಸದಲ್ಲಿ “ದಾಂಪತ್ಯ ಧರ್ಮ” ವಿಷಯ ಕುರಿತು ಮಾತನಾಡಿದರು.ಶರಣರು ‘ಒಳಗೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ’ ಎಂದರಲ್ಲದೇ ‘ಪರಸತಿಯನ್ನು ಮಹಾದೇವಿಯಂಬೆ’ ಎನ್ನುತ್ತಾ ಆದರ್ಶ ದಾಂಪತ್ಯ ಧರ್ಮವನ್ನು ಪ್ರತಿಪಾದಿಸಿದರು. ಸ್ತೀ ಕುಲಕ್ಕೆ ಗೌರವ ತೋರಿದ ಶರಣರ ಇಂತಹ ಆದರ್ಶ ಬದುಕನ್ನು ನಾವು ಧರ್ಮವೆಂದು ನಂಬಿ ನಡೆಯಬೇಕು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜಶಾಸ್ತ್ರಜ್ಞರಾದ ಪ್ರೊ .ಎಂ .ಆರ್ .ಉಳ್ಳೇಗಡ್ಡಿ ಅವರು ಪತಿ ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬದುಕಿದರೆ ಕುಟುಂಬ ನೆಮ್ಮದಿಯಾಗಿರುತ್ತದೆ, ಅದುವೇ ತವನಿಧಿಯಾಗುತ್ತದೆ ಎಂದು ಹೇಳಿದರು. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಶ್ರೀಗಳು ಹಾಗೂ ಕಾರಂಜಿ ಮಠದ ಶ್ರೀ.ಗುರುಸಿದ್ಧ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಾರಂಭದಲ್ಲಿ ಕಾರಂಜಿ ಮಠದ ಮಾತೃ ಮಂಡಳಿಯ ತಾಯಂದಿರಿಂದ ವಚನ ಪ್ರಾರ್ಥನೆ ನಡೆಸಲಾಯಿತು. ಉಪನ್ಯಾಸಕ ಎ .ಕೆ. ಪಾಟೀಲ ಸ್ವಾಗತಿಸಿದರು. ನ್ಯಾಯವಾದಿ ವಿ .ಕೆ. ಪಾಟೀಲ ಶರಣು ಸಮರ್ಪಿಸಿದರು. ಎ .ಕೆ. ಪಾಟೀಲ ನಿರೂಪಿಸಿದರು.
Gadi Kannadiga > Local News > ಆಧ್ಯಾತ್ಮಿಕ ಬದುಕಿನಲ್ಲಿ ಲಿಂಗ ಸಮಾನತೆ ಸಾರಿದವರು ಶರಣರು : ಡಾ. ಜಗಜಂಪಿ
ಆಧ್ಯಾತ್ಮಿಕ ಬದುಕಿನಲ್ಲಿ ಲಿಂಗ ಸಮಾನತೆ ಸಾರಿದವರು ಶರಣರು : ಡಾ. ಜಗಜಂಪಿ
Suresh22/08/2023
posted on
