This is the title of the web page
This is the title of the web page

Please assign a menu to the primary menu location under menu

Local News

ಶಿವಶರಣ ಹಡಪದ ಅಪ್ಪಣ್ಣ ಜಯಂತಿ-೨೦೨೨ ಶರಣರ ಅನುಭವ ಮಂಟಪ ಸಮಾಜದ ಏಳಿಗೆಯ ಮೊದಲ ಪಾರ್ಲಿಮೆಂಟ್ : ಸಾಹಿತಿ ಡಾ.ಮೈತ್ರೇಯಿಣಿ


ಬೆಳಗಾವಿ,ಜು.೧೩ : ೧೨ನೇ ಶತಮಾನದಲ್ಲಿ ಜಾತಿ, ಧರ್ಮ, ಭೇದ ಭಾವವನ್ನು, ತೊಲಗಿಸಲು ಶರಣರು ಒಂದು ವೇದಿಕೆಯನ್ನು ಮಾಡಿಕೊಂಡು ಸಮಾಜದ ಏಳಿಗೆಗೆ ಶ್ರಮಿಸುತ್ತಾ, ಜನರನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದ್ದರು. ಅದುವೇ ಅನುಭವ ಮಂಟಪ. ಈ ಅನುಭವ ಮಂಟಪವೇ ಸಮಾಜದ ಏಳಿಗೆಯ ಮೊದಲ ಪಾರ್ಲಿಮೆಂಟ್ ಆಗಿದೆ ಎಂದು ಸಾಹಿತಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ(ಜುಲೈ.೧೩) ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಬಸವಣ್ಣನವರ ಇತಿಹಾಸ ಓದಬೇಕಾದರೆ ಅದರಲ್ಲಿ ಮುಖ್ಯವಾಗಿ ಬರುವುದು ಅವರ ಆಪ್ತರಾದ ಹಡಪದ ಅಪ್ಪಣ್ಣನವರು. ಬಸವಣ್ಣನವರ ಪ್ರೀತಿ ವಾತ್ಸಲ್ಯದೊಂದಿಗೆ ಅನುಭವ ಮಂಟಪದ ಕಾರ್ಯಕಲಾಪಗಳ ನಿರ್ವಹಣೆಯನ್ನು ಅಪ್ಪಣ್ಣನವರು ಸಮಯ ಪಜ್ಞೆ ಮತ್ತು ಅವರ ಜ್ಞಾನದಿಂದ ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು ಎಂದು ಹೇಳಿದರು.ಶರಣರ ಸಮುದಾಯ ಜಾತಿ, ಧರ್ಮಕ್ಕೆ ಬೆಲೆ ಕೊಡದೇ ಜ್ಞಾನಕ್ಕೆ ಬೆಲೆ ನೀಡುವ ಸಮುದಾಯವಾಗಿತ್ತು. ಹಡಪದ ಅಪ್ಪಣ್ಣನವರ ಅವರ ಜ್ಞಾನಕ್ಕೆ, ಅವರ ಆಲೋಚನೆಗಳಿಗೆ ಬೆಲೆ ನೀಡಿ ಅವರಿಗೆ ವ್ಯಕ್ತಿ ಗೌರವ ನೀಡಿದ್ದು ಬಸವಣ್ಣವರು. ಬಸವಣ್ಣನವರು ಜಾತಿ ವ್ಯವಸ್ಥೆಯನ್ನು ತೊಲಗಿಸುವ ಹೋರಾಟದಲ್ಲಿ ಅಪ್ಪಣ್ಣ ಅವರನ್ನು ತಮ್ಮ ಆಪ್ತಸಹಾಯಕರಾಗಿ ನೇಮಿಸಿಕೊಂಡಿದ್ದರು ಎಂದು ತಿಳಿಸಿದರು.
ಬೆಕ್ಕು ಅಡ್ಡ ಹೋದರೆ ಹಾಗೂ ಹಡಪದರ ಮುಖ ನೋಡುವುದು ಅಪಶಕುನ ಎಂಬ ಮೂಡನಂಬಿಕೆ ಇತ್ತು. ಬಸವಣ್ಣನವರು ಅಪ್ಪಣ್ಣನವರನ್ನು ಆಪ್ತಸಹಾಯಕರಾಗಿ ಇಟ್ಟುಕೊಂಡ ನಂತರ ಅವರ ಭೇಟಿಗೆ ಯಾರೇ ಬಂದರೂ ಮೊದಲು ಅಪ್ಪಣ್ಣನವರ ಅನುಮತಿ ಪಡೆಯಬೇಕಿತ್ತು. ಇದರಿಂದ ಅಪಶಕುನವೆಂಬ ಮೂಡನಂಕೆಯನ್ನು ನಿವಾರಿಸಿದರು.
ಅಪ್ಪಣ್ಣನವರ ವಚನಗಳು ಹೆಚ್ಚಾಗಿ ಬೆಡಗಿನ ವಚನಗಳಾಗಿವೆ. ಧರ್ಮದ ಆತ್ಮ, ಪಟಸ್ಥಲ ಸಿದ್ದಾಂತ, ವಿವೇಚನೆಯ ವಚನಗಳಿವೆ. ಇವರ ವಚನಗಳು ಸಹಜ, ಸರಳ ತತ್ವವನ್ನು ನಿರೂಪಣೆ ಮಾಡುತ್ತವೆ ಎಂದರು. ವಿಜ್ಞಾನಕ್ಕೆ ಗೊತ್ತಿಲ್ಲದ ಎಷ್ಟೋ ವಿಷಯವನ್ನು ಶರಣರು ಹೇಳಿದ್ದಾರೆ. ನಮ್ಮ ದೇಹವನ್ನು ದೇವಾಲಯವಾಗಿಸುವ ಶಕ್ತಿ ಶರಣರಲ್ಲಿದೆ. ಶರಣರು ಸಮಸಮಾಜದ ನಿರ್ಮಾಪಕರು.
೧೨ ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಸಹಾಯಕರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಅಪ್ಪಣ್ಣನಂತ ಆಪ್ತ ಸಹಾಯಕರು ಪ್ರಸ್ತುತ ನಮ್ಮ ಪ್ರಜಾಪ್ರಭುತ್ವ ಆಡಳಿತಗಾರಿಗೆ ಬೇಕು, ಅಂದಾಗ ಮಾತ್ರ ದೇಶದ ಏಳಿಗೆ ಸಾಧ್ಯ ಎಂದರು.
ಯುವ ಪೀಳಿಗೆ ಶರಣರ ಸಿದ್ದಾಂತ ಅಳವಡಿಸಿಕೊಳ್ಳಬೇಕು:
ನಾವು ನಮ್ಮ ಮುಂದಿನ ಪೀಳಿಗೆಗೆ, ಮಕ್ಕಳಿಗೆ ಶರಣರ ಒಳ್ಳೆಯ ಆಲೋಚನೆಗಳನ್ನು, ಸಿದ್ದಾಂತಗಳನ್ನು ಮನೆಯಲ್ಲಿಯೇ ಹೇಳಿಕೊಡಬೇಕು. ಶಾಲೆಯಲ್ಲಿ ಹೇಳುವುದು ಮಾತ್ರ ನಿಜವಲ್ಲ, ಧರ್ಮ ಜಾತಿ ಇಂತಹ ಕಾರ್ಯಕ್ರಮದಿಂದ ವ್ಯಕ್ತಿಯನ್ನು ಜ್ಞಾನದಿಂದ ಗುರ್ತಿಸುವ ಕಾರ್ಯ ನಡೆಯಬೇಕು, ಮಕ್ಕಳಲ್ಲಿ ಆತ್ಮವಿಶ್ವಾಸವನ್ನು, ಶರಣ ಚಿಂತನೆಗಳನ್ನು ತುಂಬಬೇಕು ಎಂದು ಸಾಹಿತಿಗಳಾದ ಡಾ.ಮೈತ್ರೇಯಿಣಿ ಅವರು ಹೇಳಿದರು.
ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆ :
ಇದಕ್ಕೂ ಮುಂಚೆ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾ ಮಂದಿರದವರಗೆ ಕುಂಭ ಮೇಳದೊಂದಿಗೆ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಬೆಳಗಾವಿ ಉತ್ತರದ ಶಾಸಕ ಅನೀಲ ಬೆನಕೆ ಮೆರವಣಿಗೆಗೆ ಚಾಲನೆ ನೀಡಿದರು.
ಗುರುರಾಜ ಕುಲಕರ್ಣಿ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಅಖಿಲ ಕರ್ನಾಟಕ ಹಡಪದ ಸಮಾಜ ಸೇವಾ ಸಂಘದ ಜಿಲ್ಲಾ ಅದ್ಯಕ್ಷರಾದ ಸುರೇಶ ಹಡಪದ, ರಾಜ್ಯ ಅಧ್ಯಕ್ಷರು ಸಂತೋಷ ಹಡಪದ ಹಾಗೂ ಜಿಲ್ಲಾ ಮತ್ತು ತಾಲೂಕಾ ಘಟಕದ ಸದಸ್ಯರು ಉಪಸ್ಥಿತರಿದ್ದರು. ಸುನೀತಾ ಪಾಟೀಲ ನಿರೂಪಿಸಿ, ವಂದಿಸಿದರು.


Gadi Kannadiga

Leave a Reply