ಕೊಪ್ಪಳ ಡಿಸೆಂಬರ್ ೨೦ : ರಾಜ್ಯದ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸುಗಮವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬುಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಜಾತ್ರೆಯ ಹಿನ್ನೆಲೆಯಲ್ಲಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಕಲ್ಪಿಸುವುದಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಬಾವ್ದಾರಿ ಹಂಚಿಕೆ ಮಾಡಿದ್ದಾರೆ.
ಜಾತ್ರೆ ನಡೆಯುವ ಆವರಣದಲ್ಲಿ ತೆಗ್ಗುದಿನ್ನಿ ಇರುವ ಪ್ರದೇಶವನ್ನು ಮರಂಹಾಕಿ ಮುಚ್ಚಲು, ಮಠದ ಆವರಣದಲ್ಲಿ ದೊಡ್ಡದಾದ ಲೈಟ್‌ನ ವ್ಯವಸ್ಥೆ, ಪಾರ್ಕಿಂಗ್‌ನಲ್ಲಿ ಲೈಟಿಂಗ್ ವ್ಯವಸ್ಥೆ, ಕಲುಷಿತ ನೀರು ನಿಲ್ಲದಂತೆ ಕ್ರಮವಹಿಸಲು, ಬ್ಲೀಚಿಂಗ್ ಪೌಡರ್ ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ಯಂತ್ರವನ್ನು ಬಳಸಲು ಮತ್ತು ಭಕ್ತಾದಿಗಳಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗಿದೆ.
ಜಾತ್ರೆಯ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ, ವಿದ್ಯುತ್ ತಂತಿಗಳಲ್ಲಿ ಯಾವುದೇ ರೀತಿಯ ಶಾರ್ಟ್ ಸರ್ಕ್ಯೂಟ್ ಆಗದಂತೆ ಮುನ್ನೆಚ್ಚರಿಕೆ ವಹಿಸಲು, ವಿದ್ಯುತ್ ಪರಿವರ್ತಕಗಳು ವಿಫಲವಾಗದಂತೆ ಹೆಚ್ಚುವರಿ ಪರಿವರ್ತಕಗಳನ್ನು ಸಂಗ್ರಹಿಸಲು ತಿಳಿಸಲು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಜಾತ್ರೆಯ ಅಂಗವಾಗಿ ನಗರದ ಹಾಗೂ ಸುತ್ತಲಿನ ಗ್ರಾಮಗಳ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ನಗರ ಹಾಗೂ ಸುತ್ತ್ತಲಿನ ಗ್ರಾಮಗಳ ಸಾರ್ವಜನಿಕರ ಹಿತದೃಷ್ಟಿಯಿಂದ ನಗರ ಹಾಗೂ ಗ್ರಾಮೀಣ ಸಾರಿಗೆ ಬಸ್‌ಗಳ ಸಮಯವನ್ನು ವಿಸ್ತರಿಸುವಂತೆ ಹಾಗೂ ಬಸ್‌ಗಳ ನಿಲುಗಡೆಗೆ ನಿಗದಿತ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ವಹಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮಹಾರಥೋತ್ಸವವು ಜರುಗುವ ಹಿನ್ನೆಲೆಯಲ್ಲಿ ರಥದ ಎಲ್ಲಾ ಚಕ್ರಗಳನ್ನು ಹಾಗೂ ರಥದ ಎಲ್ಲಾ ಭಾಗಗಳನ್ನು ಪರಿಶೀಲನೆ ಮಾಡಿ, ಮಹಾರಥೋತ್ಸವ ಜರುಗುವುದಕ್ಕೆ ಸೂಕ್ತ ಇರುವ ಅಥವಾ ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರದೊಂದಿಗೆ ವರದಿಯನ್ನು ಜಾತ್ರೆಯು ನಡೆಯುವ ಮೂರು ದಿನಗಳ ಮುಂಚೆಯೇ ಸಲ್ಲಿಸಲು ಹಾಗೂ ರಥೋತ್ಸವದ ದಿನದಂದು ಆಗಮಿಸುವ ಗಣ್ಯರ ವೇದಿಕೆಯನ್ನು ಸಹ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಜಾತ್ರೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಬರುವುದರಿಂದ ಮನೋರಂಜನೆಗಾಗಿ ವಿವಿಧ ರೀತಿಯ ಆಟೋಪಕರಣಗಳನ್ನು ಅಳವಡಿಸಿರುವುದರಿಂದ ಹಾಗೂ ಮಿಠಾಯಿ ಹಾಗೂ ಹಲವಾರು ಅಂಗಡಿಗಳನ್ನು ಹಾಕುವುದರಿಂದ ಯಾವುದೇ ರೀತಿಯ ಅಗ್ನಿ ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಫೈರ್‌ಇಂಜಿನ್ (ಅಗ್ನಿ ನಂದಕ) ವಾಹನವನ್ನು ಸುಸಜ್ಜಿತವಾಗಿ ಜಾತ್ರೆ ನಡೆಯುವ ಸ್ಥಳದಲ್ಲಿ ನಿಯುಕ್ತಿಗೊಳಿಸಲು ಅಗ್ನಶಾಮಕ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.
ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ನೀರಿನ ಟ್ಯಾಂಕರ್‌ನ ಮೂಲಕ ನೀರಿನ ವ್ಯವಸ್ಥೆ ಒದಗಿಸಲು ನಗರಸಭೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದಕ್ಕೆ ಅಗತ್ಯ ಸಹಕಾರ ನೀಡಲು ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಲಾಗಿದೆ.
ಜಾತ್ರೆಗೆ ಲಕ್ಷಾಂತರ ಭಕ್ತರು ಬರುವುದರಿಂದ ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ವ್ಯವಸ್ಥೆಯ ಬಗ್ಗೆ ವ್ಯಾಪಕವಾಗಿ ದಿನಪತ್ರಿಕೆಯಲ್ಲಿ ಪ್ರಚುರಪಡಿಸುವಂತೆಜಿಲ್ಲಾ ವಾರ್ತಾಧಿಕಾರಿಗಳಿಗೆ ತಿಳಿಸಲಾಗಿದೆ.
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ: ಜಾತ್ರೆಗೆ ಸಂಬಂಧಿಸಿದಂತೆ ಚರ್ಚಿಸಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೋಲಿಸ್ ಅಧೀಕ್ಷಕರು, ನಗರಸಭೆ ಪೌರಾಯುಕ್ತರು, ಕೊಪ್ಪಳ ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಗವಿಮಠ ಸಂಸ್ಥಾನದ ಕಾರ್ಯದರ್ಶಿಗಳು, ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಜೆಸ್ಕಾಂ, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೆಕೆಆರ್‌ಟಿಸಿ, ಅಗ್ನಿಶಾಮಕ, ನಗರಾಭಿವೃದ್ಧಿ ಕೋಶ, ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಈ ವೇಳೆ ಗವಿಮಠ ಸಂಸ್ಥಾನದ ಕಾರ್ಯದರ್ಶಿಗಳಿಂದ ಕಾರ್ಯಕ್ರಮದ ಬಗ್ಗೆ ಸಮಗ್ರ ವಿವರಣೆ ಪಡೆದುಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಎಲ್ಲಾ ಅಧಿಕಾರಿಗಳ ಇಲಾಖೆಗಳ ಸಹಕಾರದೊಂದಿಗೆ ಜಾತ್ರಾ ಮಹೋತ್ಸ ನಡೆಸಿಕೊಡಲು ವಿನಂತಿಸಿದ್ದಾರೆ. ಅದರಂತೆ ಎಲ್ಲಾ ರೀತಿಯ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಪ್ರತಿಕ್ರಿಯಿಸಿದ್ದಾರೆ.
Gadi Kannadiga > State > ಶ್ರೀ ಗವಿಸಿದ್ಧೇಶ್ವರ ಜಾತ್ರೆ:ಇಲಾಖಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ ಜಿಲ್ಲಾಧಿಕಾರಿಗಳು
ಶ್ರೀ ಗವಿಸಿದ್ಧೇಶ್ವರ ಜಾತ್ರೆ:ಇಲಾಖಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ ಜಿಲ್ಲಾಧಿಕಾರಿಗಳು
Suresh20/12/2022
posted on