ರಾಮನಗರ : ಜನರ ಆರೋಗ್ಯದ ದೃಷ್ಟಿಯಿಂದ, ಜನರಿಗೆ ತೊಂದರೆ ಅಗಬಾರದೆಂಬ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೇವೆ. ಕೊರೊನಾ ವೈರಸ್ ಕಡಿಮೆಯಾದ ಬಳಿಕ ಇಲ್ಲಿಂದಲೇ ಮತ್ತೆ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಇಂದು ಮೇಕೆದಾಟು ಪಾದಯಾತ್ರೆ ಕುರಿತಂತೆ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 5 ನೇ ದಿನಕ್ಕೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾವೆಲ್ಲ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ. ಸಂಗಮದಿಂದ ರಾಮನಗರದವರೆಗೂ ಯಶಸ್ವಿಯಾಗಿ ಪಾದಯಾತ್ರೆ ಮಾಡಿದ್ದೇವೆ. ಇವತ್ತು ರಾಮನಗರದಿಂದ ಪಾದಯಾತ್ರೆ ಇತ್ತು. ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದೆ. ನಿನ್ನೆ 15 ಸಾವಿರ ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಮಗೂ ನಮ್ಮದೇ ಆದ ಜವಾಬ್ದಾರಿ ಇದೆ ಎಂದರು.