ಮೂಡಲಗಿ: ರಾಜ್ಯಗಳು ಹಿಂದಿ ಭಾಷೆಯನ್ನು ಪರಸ್ಪರ ಸಂಪರ್ಕ ಭಾಷೆಯನ್ನಾಗಿ ಬಳಸಬೇಕು ಎಂದು ಹೇಳಿರುವುದನ್ನು ವಿರೋಧಿಸಿ, ಸಿದ್ದರಾಮಯ್ಯ ನೀಡಿರುವ ಹೇಳಿಕೆಯು ಆತುರಗಾರನಿಗೆ ಬುದ್ದಿ ಮಟ್ಟ ಎಂಬಂತೆ ಭಾಸವಾಗಿದೆ. ಅವರ ಹೇಳಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸುತ್ತೇನೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸತ್ತಿನ ರಾಜಭಾಷಾ ಸಮಿತಿ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶನಿವಾರರಂದು ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ನವದೆಹಲಿಯಲ್ಲಿ ನಡೆದ ೩೭ನೆಯ ಸಂಸತ್ತಿನ ರಾಜಭಾಷಾ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯನಾಗಿ ನಾನೂ ಉಪಸ್ಥಿತನಿದ್ದೆ. ನಮ್ಮ ಚರ್ಚೆ ಹಾಗೂ ನಿಲುವುಗಳು ಕನ್ನಡವನ್ನಾಗಲಿ ಅಥವಾ ಇತರ ಯಾವುದೇ ಪ್ರಾದೇಶಿಕ ಭಾಷೆಗಳನ್ನಾಗಲಿ ವಿರೋಧಿಸುವದಾಗಿಲ್ಲ ಬದಲಾಗಿ ಇಂಗ್ಲೀಷಗೆ ಪರ್ಯಾಯವಾಗಿ ಹಿಂದಿಯನ್ನು ಬಳಸಬೇಕು ಎಂಬ ಆಲೋಚನೆಯಷ್ಟೇ ಆಗಿತ್ತು ಎಂದರು.
ಮಾತೃ ಭಾಷೆಯ ಬಗ್ಗೆ ಹಾಗೂ ಪ್ರಾದೇಶಿಕ ಭಾಷೆಗಳ ಬಗ್ಗೆ ನಮ್ಮ ಸರ್ಕಾರ ತೋರಿರುವಷ್ಟು ಕಾಳಜಿ ಪ್ರೀತಿ ಇನ್ನೊಬ್ಬರಿಂದ ಸಿಕ್ಕಿಲ್ಲ ಎಂಬುದು ಸಿದ್ದರಾಮಯ್ಯರವರ ಗಮನಕ್ಕಿರಲಿ. ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಆಂಗ್ಲ ಭಾಷೆಗೆ ಪರ್ಯಾಯವಾಗಿ ಹಿಂದಿಯನ್ನು ಬಳಸಬಹುದು ಎಂದು ಅಮಿತ್ ಷಾ ಹೇಳಿದ್ದಾರೆಯೇ ಹೊರತು ಪ್ರಾದೇಶಿಕ ಭಾಷೆಗಳನ್ನು ಬದಿಗಿಟ್ಟು ಹಿಂದಿಯನ್ನು ಮಾತ್ರ ಬಳಸಬೇಕು ಎಂದಲ್ಲ. ಇಂಗ್ಲೀಷ್ ಭಾಷೆಗೆ ಪರ್ಯಾಯವಾಗಿ ಭಾರತೀಯ ಭಾಷೆಯಾದ ಹಿಂದಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಭಾಷೆಯನ್ನಾಗಿ ಬಳಸಿದರೆ ತಪ್ಪೇನು? ಅಥವಾ ಇಂಗ್ಲೀಷ್ ಬಿಟ್ಟು ಕೊಡಲು ಸಿದ್ದರಾಮಯ್ಯರವರೇ ತಮಗೆ ಅಸಡ್ಡೆಯೇ? ಎಷ್ಟೇ ಆದರೂ ಆಂಗ್ಲರು ಕಟ್ಟಿದ ರಾಜಕೀಯ ಪಕ್ಷ ಕಾಂಗ್ರೆಸ್ಸಿನವರಲ್ಲವೇ ಎಂದು ಆಕ್ರೋಶ ಹೊರಹಾಕಿದರು.
ತಮ್ಮ ರಾಷ್ಟ್ರೀಯ ನಾಯಕರಾದ ಜವಾಹರ ಲಾಲ್ ನೆಹರುರವರು ೧೯೪೯ ರಿಂದಲೇ ಹಿಂದಿ ದಿವಸ ಆಚರಣೆ ಮಾಡಿಸುತ್ತ ಬಂದಿದ್ದಾರೆ, ೨೦೧೦ ರಲ್ಲಿ ನಿಮ್ಮ ಪಕ್ಷದವರೇ ಆದ ಪಿ. ಚಿದಂಬರಂ ಅವರು ಹಿಂದಿಯನ್ನು ‘ಇಡೀ ದೇಶದ ಭಾಷೆಯಾಗಿ’ ಜಾರಿಗೆ ತರಲು ಅಂದಿನ ಉಪ ರಾಷ್ಟ್ರಪತಿಗಳನ್ನು ವಿನಂತಿಸಿದ್ದು ತಮಗೆ ತಿಳಿದಿಲ್ಲವೇ ಕೊನೆ ಪಕ್ಷ ನಿಮ್ಮ ಪಕ್ಷದ ಹಿರಿಯರನ್ನಾದರೂ ಗೌರವಿಸಿ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ವಿರುದ್ಧ ಟೀಕೆ ಮಾಡಲು ಯಾವುದೇ ವಿಷಯಗಳಿಲ್ಲದ ಸಂದರ್ಭದಲ್ಲಿ ಜನರಲ್ಲಿ ಈ ರೀತಿಯ ತಪ್ಪು ಅಭಿಪ್ರಾಯಗಳನ್ನು ಮೂಡಿಸುವುದು ತಮ್ಮ ಘನತೆಗೆ ಸೂಕ್ತವಲ್ಲ ಎಂದು ಸಂಸದ ಈರಣ್ಣ ಕಡಾಡಿ ಕಿಡಿಕಾರಿದರು.
Gadi Kannadiga > Local News > ಸಿದ್ದರಾಮಯ್ಯ ಹೇಳಿಕೆ ಆತುರಗಾರನಿಗೆ ಬುದ್ದಿ ಮಟ್ಟ ಎಂಬಂತೆ ಭಾಸವಾಗಿದೆ: ಕಡಾಡಿ
More important news
ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ
19/05/2022