This is the title of the web page
This is the title of the web page

Please assign a menu to the primary menu location under menu

Local News

ಕನ್ನಡ ಸಾಹಿತ್ಯ ವೈಶಿಷ್ಟ್ಯ ವಿಶಿಷ್ಟವಾದದ್ದು : ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ


ಬೆಳಗಾವಿ: ಡಿಸೆಂಬರ್ ೧೭: ಬೆಳಗಾವಿ ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಡಾ. ಡಿ. ಎಸ್. ಕರ್ಕಿಯವರ ೧೧೫ನೇ ಜನ್ಮದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಗದಗ-ಡಂಬಳದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಕನ್ನಡ ಸಾಹಿತ್ಯ ವೈಶಿಷ್ಟ್ಯ ಮತ್ತು ವಿಶಿಷ್ಟವಾದದ್ದು. ಸುಮಾರು ೨ ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿದೆ.
ಆದಿಕವಿ ಪಂಪ ನಿಂದ ಹಿಡಿದು, ಬಸವಾದಿ ಶರಣರು, ಆಧುನಿಕ ಕವಿಗಳು ಕನ್ನಡದ ಕಾವ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ. ಇದರಲ್ಲಿ ಡಾ. ಡಿ. ಎಸ್. ಕರ್ಕಿ ಅವರು ಅಗ್ರಗಣ್ಯರು. ಕೇವಲ ಯಾರೊ ಇಬ್ಬರನ್ನು ರಾಷ್ಟ್ರಕವಿ ಮಾಡಿದರೆ ಅವರು ಮಾತ್ರ ನಮ್ಮ ಭಾಷೆ ಶ್ರೀಮಂತಗೊಳಿಸಿಲ್ಲ. ನಮ್ಮ ಭಾಗದ ಎಸ್. ಡಿ. ಇಂಚಲ, ಈಶ್ವರ ಸಣಕಲ, ವಿ. ಕೃ. ಗೋಕಾಕ್ ಸೇರಿ ಅನೇಕ ಶ್ರೇಷ್ಠ ಕವಿಗಳು ಶ್ರೀಮಂತಗೊಳಿಸಿದ್ದಾರೆ. ಕುವೆಂಪು ಅವರಿಗೆ ಸರಿಸಮಾನವಾದ ಕವಿಗಳು ನಮ್ಮ ಉತ್ತರಕರ್ನಾಟಕದಲ್ಲಿ ಅನೇಕರಿದ್ದರು ಎಂದು ಸ್ಮರಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ವಿಜಯಲಕ್ಷ್ಮೀ ಪುಟ್ಟಿ ಮಾತನಾಡಿ ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ನದಿಯಂತೆ. ಕನ್ನಡ ಸಾಹಿತ್ಯಕ್ಕೆ ತನ್ನದೇಯಾದ ಪರಂಪರೆಯಿದೆ. ಡಿ. ಎಸ್. ಕರ್ಕಿಯವರು ನವೋದಯ ಸಾಹಿತ್ಯದ ಪರಂಪರೆಯಲ್ಲಿ ಅಗ್ರಗಣ್ಯರು. ಬಹಳಷ್ಟು ಹೃದಯ ವೈಶಾಲ್ಯತೆ ಹೊಂದಿದ್ದರು. ಓರ್ವ ಯಶಸ್ವಿ, ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಾಗಿದ್ದರು ಎಂದು ಸ್ಮರಿಸಿಕೊಂಡರು.
ಡಾ. ಗುರುದೇವಿ ಹುಲೆಪ್ಪನವರಮಠ ಅವರ ‘ಮುದ್ದಿಸುತ್ತಾಳೆ ಕೈಗಳ’, ಡಾ. ಶಶಿಕಾಂತ ಪಟ್ಟಣ ಅವರ ‘ಗಾಂಧಿಗೊಂದು ಪತ್ರ’ ಹಾಗೂ ಭುವನಾ ಹಿರೇಮಠ ಅವರ ‘ಮತ್ತೆ ಮತ್ತೆ ಮತ್ಸ್ಯಕ್ಕಿಳಿಯುತ್ತೇನೆ’ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಶಿಕಾಂತ ಪಟ್ಟಣ ಡಾ. ಡಿ.ಎಸ್. ಕರ್ಕಿಯವರು ನವೋದಯ ಪಾವಿತ್ರ‍್ಯತೆ ಕಾಪಾಡಿಕೊಂಡ ಬಂದ ನಾಡಿನ ಅಗ್ರಗಣ್ಯ ಕವಿಗಳು. ಸತ್ಯವನ್ನು ಕೊಲ್ಲಲು ಆಗಲ್ಲ, ಸತ್ಯ ಹೇಳುವವರನ್ನು ಕೊಲ್ಲುತ್ತಾರೆ. ಹೀಗಾಗಿ ಪ್ರಶಸ್ತಿಗಾಗಿ ಸಾಹಿತ್ಯ ಬರೆಯಬಾರದು. ಜನಪರ ಕಾಳಜಿ ಇರುವುದೇ ನಿಜವಾದ ಸಾಹಿತ್ಯ. ನಾಡಿನ ಕುವೆಂಪು ಸೇರಿ ಎಲ್ಲ ಕವಿಗಳಿಗೆ ದೊಡ್ಡ ಗುರು ಬಸವಣ್ಣ ಎಂದು ಸ್ಮರಿಸಿಕೊಂಡರು.
ಪ್ರತಿಷ್ಠಾನ ಅಧ್ಯಕ್ಷ ಡಾ. ರಮೇಶ ಕರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಾಹಿತಿ ದೀಪಿಕಾ ಚಾಟೆ, ಗಿರೀಶ ಕರ್ಕಿ, ಪ್ರೊ. ವಿಜಯಕುಮಾರ ಕರ್ಕಿ, ಅಣ್ಣಪ್ಪ ಕರ್ಕಿ, ಸತೀಶ ಕರ್ಕಿ, ಶಶಿಧರ ಭೈರನಟ್ಟಿ ಸೇರಿ ಇನ್ನಿತರರಿದ್ದರು. ಗೌರಿ ಕರ್ಕಿ ನಿರೂಪಿಸಿದರು. ಆನಂದ ಕರ್ಕಿ ಶರಣು ಸಮರ್ಪಿಸಿದರು.


Gadi Kannadiga

Leave a Reply