ಕುಷ್ಟಗಿ:ಸರಕಾರದಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಅನೇಕ ಸೌಲಭ್ಯಗಳು ಇದ್ದು ಕಾರ್ಮಿಕ ಇಲಾಖೆಯಲ್ಲಿ ನೊಂದಣಿಗೊಂಡ ಕಾರ್ಮಿಕರು ಕಾಲಕಾಲಕ್ಕೆ ಸರಿಯಾಗಿ ರಿನಿವಲ್ ಮಾಡಿಸಿಕೊಂಡು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಾಲೂಕ ಕಾರ್ಮಿಕ ಇಲಾಖೆಯ ನಿರೀಕ್ಷಕ ಶಿವಶಂಕರ ತಳವಾರ ಹೇಳಿದರು.
ಪಟ್ಟಣದ ಶಾಖಾಪುರ ರಸ್ತೆಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಪೆಂಟರ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಟ್ಟಡ ಕಾರ್ಮಿಕರಲ್ಲಿ ಅನೇಕ ಬಗೆಯ ಕಾರ್ಮಿಕರು ಬರುತ್ತಾರೆ. ಅದರಲ್ಲಿ ಕಾರ್ಪೆಂಟರ್ ಕೂಡಾ ಇದ್ದು ಸರಕಾರ ಇವರ ಉದ್ಯೋಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಲಕರಣೆಗಳ ಕಿಟ್ ನ್ನು ನೀಡಿದ್ದು ಸದರಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಗೊಂಡು ರಿನಿವಲ್ ಚಾಲ್ತಿ ಇರುವ ಬಡಿಗೆತನ ವೃತ್ತಿ ಮಾಡುವ ಕಾರ್ಪೆಂಟರಗಳಿಗೆ ಈ ಕಿಟ್ ಗಳನ್ನು ನೀಡಲಾಗುತ್ತಿದೆ. ಸರಕಾರದಿಂದ ೨೨೫ ಕಿಟ್ ಗಳು ಕುಷ್ಟಗಿ ತಾಲೂಕಿಗೆ ನೀಡಲಾಗಿದೆ. ಆದರೆ ಕಾರ್ಮಿಕರು ತಮ್ಮ ಕಾರ್ಡುಗಳನ್ನು ಸರಿಯಾದ ರೀತಿಯಲ್ಲಿ ರಿನಿವಲ್ ಮಾಡದಿರುವುದು ಮಾಹಿತಿ ಕೊರತೆ ಯದ್ದು ಕಾಣುತ್ತಿದೆ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ವೆಚ್ಚಗಳ ಪಾವತಿ, ಮನೆ ನಿರ್ಮಾಣಕ್ಕೆ ಸಹಾಯಧನ, ೬೦ ವರ್ಷ ವಯಸ್ಸಿನ ನಂತರ ೩೦೦೦ರೂ. ಮಾಸಾಶನ, ಹೆರಿಗೆ ಭತ್ಯೆ, ಕಾರ್ಮಿಕರು ಮರಣ ಹೊಂದಿದಾಗ ಅವಲಂಬಿತರಿಗೆ ಸಹಾಯಧನ, ಹೀಗೆ ಹತ್ತು ಹಲವು ಯೋಜನೆಗಳು ಇದ್ದು ಅವುಗಳನ್ನು ಪಡೆಯಬೇಕಾದರೆ ಕಾರ್ಡ ಚಾಲ್ತಿ ಇಟ್ಟುಕೊಳ್ಳುವುದು ಅತ್ಯಾವಶ್ಯಕ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಕಮ್ಮಾರ, ಯಲಬುರ್ಗಾ ತಾಲ್ಲೂಕಿನ ಅಧ್ಯಕ್ಷ ಹನಮೇಶ ಕೊಂಡಗುರಿ, ಕುಷ್ಟಗಿ ಕಾರ್ಮಿಕರ ಸಂಘದ ಅಧ್ಯಕ್ಷ ಮೈಲಾರಪ್ಪ ಮಂತ್ರಿ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರ, ನಗರ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ತಾಲೂಕಾಧ್ಯಕ್ಷ ಗುರಪ್ಪ ಬಡಿಗೇರ, ಶರಣಪ್ಪ ಬುಡಕುಂಟಿ, ಕಾಳೇಶ ಬಡಿಗೇರ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಮೌನೇಶ ನವಲಹಳ್ಳಿ ಸ್ವಾಗತ ಹಾಗೂ ನಿರೂಪಣೆಯನ್ನು ನೆರವೇರಿಸಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ