This is the title of the web page
This is the title of the web page

Please assign a menu to the primary menu location under menu

State

ಸದೃಢ ದೇಹ ಹಾಗೂ ಮನಸ್ಥಿತಿ ರೂಪುಗೊಳ್ಳಲು ಕ್ರೀಡೆ ಸಹಕಾರಿ : ಕರಡಿ ಸಂಗಣ್ಣ


ಕೊಪ್ಪಳ, ನವೆಂಬರ್ ೧೫ : ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಅನುಕೂಲವಾಗುವುದರ ಜೊತೆಗೆ ಸದೃಢ ದೇಹ ಹಾಗೂ ಮನಸ್ಥಿತಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ “ಕಲಬುರಗಿ ವಿಭಾಗ ಮಟ್ಟದ ಕ್ರೀಡಾಕೂಟ (ಹ್ಯಾಂಡ್ ಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಥ್ರೋಬಾಲ್) ಹಾಗೂ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ-೨೦೨೨-೨೩” ಕಾರ್ಯಕ್ರಮವನ್ನು ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಕ್ರೀಡೆ ಮನುಷ್ಯನ ಜೀವನ ಒಂದು ಅವಿಭಾಜ್ಯ ಅಂಗವಾಗಿದ್ದು, ಅದು ಸದಾಕಾಲ ಜೊತೆಯಲ್ಲಿರುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು. ಕ್ರೀಡೆಯು ನಮ್ಮ ಜೀವನದ ಪ್ರತಿನಿತ್ಯದ ಕೆಲಸಗಳಲ್ಲಿ ಒಂದಾದಾಗ ಮಾತ್ರ ನಾವು ಸದೃಢರಾಗಲು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇತ್ತೀಚೆಗೆ ಜಾವಲಿನ್ ಥ್ರೋದಲ್ಲಿ ಇಡೀ ಜಗತ್ತಿಗೆ ನಮ್ಮ ದೇಶದ ಕ್ರೀಡಾಪಟು ನೀರಜ್ ಛೋಪ್ರಾ ಚಿರಪರಿಚಿತರಾಗಿದ್ದಾರೆ. ದ್ಯಾನಚಂದ ರಿಂದ ಪಿ.ವಿ ಸಿಂಧುವರೆಗೆ ಹಲವಾರು ಕ್ರೀಡಾಪಟುಗಳು ತಮ್ಮದೇ ಆದ ಛಾಪು ಮೂಡಿಸಿ, ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳು ಸೋಲು-ಗೆಲವು ಸಹಜ ಎಂಬುದನ್ನು ಅರಿಯಬೇಕು. ಇವತ್ತಿನ ಸೋಲು ಮುಂದಿನ ಗೆಲುವಿಗೆ ಸೋಪಾನ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಸವಾಲುಗಳನ್ನು ಎದುರಿಸುವಂತಹ ಶಕ್ತಿ ಕ್ರೀಡೆಯಲ್ಲಿದ್ದು, ಇದು ನಮಗೆ ಶಿಸ್ತು ಹಾಗೂ ಒಗ್ಗಟ್ಟನ್ನು ಕಲಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕ್ರೀಡಾಸಕ್ತಿಯನ್ನು ಬೆಳಸಿಕೊಳ್ಳಬೇಕು. ಕೊಪ್ಪಳದ ಸಚಿನ್ ಎಂಬ ವಿದ್ಯಾರ್ಥಿ ಹ್ಯಾಮರ್ ಥ್ರೋದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಹಾಗೂ ಚಿಕ್ಕಬೊಮ್ಮನಾಳ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡವು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅವರಿಗೂ ಶುಭವಾಗಲಿ. ಈ ಕ್ರೀಡಾಕೂಟಕ್ಕೆ ಆಗಮಿಸಿರುವ ಎಲ್ಲಾ ಕ್ರೀಡಾಪಟುಗಳಿಗೆ ಊಟೋಪಚಾರ, ವಸತಿ ಸೌಲಭ್ಯವನ್ನು ಅಚ್ಚುಕಟ್ಟಾಗಿ ಮಾಡಿ ಎಂದು ಹೇಳಿದರು.
ಕೊಪ್ಪಳ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಎಂ.ಎ ರಡ್ಡೇರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ದ ಅಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ, ಜಿ.ಪಂ. ಮಾಜಿ ಸದಸ್ಯ ರಾಮಣ್ಣ ಚೌಡ್ಕಿ, ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಧರ್ಮಕುಮಾರ ಕಂಬಳಿ, ತಾಲ್ಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ತಾಲ್ಲೂಕು ದೈಹಿಕ ಪರಿವೀಕ್ಷಕ ಎ.ಬಸವರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾ ಸ್ಪರ್ಧೆಗಳಿಗೆ ಶಾಸಕರಿಂದ ಚಾಲನೆ : ಕಲಬುರಗಿ ವಿಭಾಗ ಮಟ್ಟದ ಕ್ರೀಡಾಕೂಟದ ಅಂಗವಾಗಿ ಹ್ಯಾಂಡ್ ಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಥ್ರೋಬಾಲ್ ಸ್ಪರ್ಧೆಗಳಿಗೆ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್ ಅವರು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಚಾಲನೆ ನೀಡಿದರು. ನಂತರ ಶಾಸಕರು ಮಾತನಾಡಿ, ಮನುಷ್ಯನ ಸದೃಢ ಆರೋಗ್ಯಕ್ಕೆ ಕ್ರೀಡೆ ಅತ್ಯವಶ್ಯಕವಾಗಿದ್ದು, ಕ್ರೀಡೆಗಳಲ್ಲಿ ಹೆಚ್ಚಾಗಿ ಯುವಕರನ್ನು ಒಳಪಡಿಸಬೇಕು. ಅಲ್ಲದೇ ಮಕ್ಕಳಲ್ಲಿ ಪ್ರತಿಭೆಗಳು ಅಡಗಿರುತ್ತವೆ. ಅವುಗಳನ್ನು ಗುರುತಿಸುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಣ್ಣ-ಸಣ್ಣ ರಾಷ್ಟ್ರಗಳ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಕ್ರೀಡೆಗಳಲ್ಲಿ ನಮ್ಮ ದೇಶದ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವಂತಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತವೆ. ಅದರ ಸದುಪಯೋಗ ಪಡೆದುಕೊಂಡು ಕ್ರೀಡಾಪಟುಗಳ ಸಂಖ್ಯೆ ದ್ವಿಗುಣವಾಗಲಿ. ಆರೋಗ್ಯಕರವಾದಂತಹ ಸದೃಢ ದೇಹ ಮತ್ತು ಮನಸ್ಸನ್ನು ಹೊಂದಲು ಕ್ರೀಡೆ ಅವಶ್ಯಕವಾಗಿದ್ದು, ಎಲ್ಲಾ ಶಿಕ್ಷಕರು ಹಾಗೂ ಪಾಲಕರು, ಮಕ್ಕಳಿಗೆ ಕ್ರೀಡೆಯತ್ತ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಇದೇ ನವೆಂಬರ್ ೨೫ ರಂದು ಕೊಪ್ಪಳದಲ್ಲಿ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ ನಡೆಯಲಿದ್ದು, ಈ ಎಲ್ಲಾ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದರು.
ಪ್ರತಿಜ್ಞಾವಿಧಿ : ಕಲಬುರಗಿ ವಿಭಾಗ ಮಟ್ಟದ ಕ್ರೀಡಾಕೂಟದ ನಿಮಿತ್ತ ಹ್ಯಾಂಡ್ ಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಥ್ರೋಬಾಲ್ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಕ್ರೀಡಾಪಟುಗಳಿಗೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.


Gadi Kannadiga

Leave a Reply