ಬಳ್ಳಾರಿ ಜ.೧೨, ಶ್ರೀನಿವಾಸ ರಾಮಾನುಜನ್ ಎಂಬ ಗಣಿತಜ್ಞ ಭಾರತ ಕಂಡ ಅನರ್ಘ್ಯ ರತ್ನ ಎಂದು ಅವರ ಸಾಧನೆಗಳ ಪಟ್ಟಿಗಳೊಂದಿಗೆ ಗಡಿಭಾಗದ ಕನ್ನಡಾಂಧ್ರದ ವಿಚಾರವಾದಿ ಹೆಚ್ ಆದಿನಾರಾಯಣರೆಡ್ಡಿ ಪ್ರತಿಪಾದಿಸಿದರು. ನಗರದ ಬಾಲಕಿಯರ ಸರ್ಕಾರಿ ಪ ಪೂ ಕಾಲೇಜಿನಲ್ಲಿ ಶ್ರೀನಿವಾಸ ರಾಮಾನುಜನ್ ಮ್ಯಾಥ್ಸ್ ಅಕಾಡೆಮಿ ಏರ್ಪಡಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಗಣಿತ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ರಾಮಾನುಜನ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಗಣಿತದಲ್ಲಿ ಆಸಕ್ತಿಯನ್ನು ಹೊಂದಿದ್ದರು ಅದಕ್ಕಾಗಿ ಮುಂದೆ ಅವರು ವಿಶ್ವದಲ್ಲೇ ಸಂಚಲನ ಸೃಷ್ಟಿಸುವಂತಹ ಸಂಶೋಧನೆಗಳನ್ನು ಗಣಿತ ಲೋಕಕ್ಕೆ ನೀಡಿದರು ಎಂದರು.
ಕಾರ್ಯಕ್ರಮದಲ್ಲಿ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಭೌತಶಾಸ್ತ್ರದ ಸಹ ಪ್ರಾಧ್ಯಾಪಕರಾದ ಡಾ|| ಮಂಜುನಾಥ ಇವರು ಮಾತನಾಡುತ್ತಾ ವಿದ್ಯಾರ್ಥಿ ಹಂತದಿಂದಲೇ ರಾಮನುಜನ್ ಗಣಿತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಯೋಚನೆ ಮಾಡುವವರು ಹೆಚ್ಚು ಗಣಿತ ಕಲಿಯ ಬಲ್ಲರು ಮತ್ತೂ ಹೆಚ್ಚು ಗಣಿತ ಕಲಿತರೆ ಹೆಚ್ಚು ಯೋಚನೆ ಮಾಡುವ ಸಾಮರ್ಥ್ಯ ಬರುತ್ತದೆ ಎಂದರು.
ಯೋಚನೆ ಮಾಡುವ ಸಾಮರ್ಥ್ಯ ಹೆಚ್ಚು ಮಾಡುವುದೇ ಶಿಕ್ಷಣದ ಗುರಿ, ಅದರೊಂದಿಗೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಶಕ್ತಿ ಬೆಳೆಸಿಕೊಳ್ಳುವಲ್ಲಿ ಗಣಿತ ಅಗಾಧವಾದ ಕೆಲಸ ಮಾಡಬಲ್ಲದುಎಂದರು.
ರಾಮಾನುಜನ್ ತಾವು ಬದುಕಿದ ೩೨ ವರ್ಷಗಳ ಅವಧಿಯಲ್ಲಿ ೩೦೦೦ ಪ್ರಮೇಯಗಳನ್ನು ಸಂಶೋಧಿಸಿದರು. ಕಾಗದ ಖರೀದಿಸಲು ದುಡ್ಡಿಲ್ಲದೆ ಹಲಗೆ-ಬಳಪ ಬಳಸಿ ಬರೆದು ಕೇವಲ ಪ್ರಮೇಯದ ಹೇಳಿಕೆಗಳನ್ನು ಬರೆದಿಟ್ಟನು. ಈತನು ದಾಖಲಿಸಿದ ಇಂತಹ ಟಿಪ್ಪಣಿಗಳು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದವು. ಅವರ ಅಂದಿನ ಸಂಶೋಧನೆಗಳು ಇಂದು ಆಧುನಿಕ ಭೌತಶಾಸ್ತ್ರದಲ್ಲಿ ಬಳೆಕೆಯಾಗುತ್ತಿರುವುದು ಭಾರತೀಯರಾದ ನಮಗೆ ಮತ್ತು ರಾಮಾನುಜನ್‌ರ ಬಗ್ಗೆ ಹೆಗ್ಗಳಿಕೆ ಹೆಚ್ಚುತ್ತದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಗಣಿತ ವಿಷಯ ಪರಿವೀಕ್ಷಕ ಎಂ.ಬಸವರಾಜ್ ಇವರು ಮಾತನಾಡಿ ವಿದ್ಯಾರ್ಥಿಗಳು ಈಗಿಂದಲೇ ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಭ್ಯಾಸ ಮಾಡುತ್ತಾ ಹೋದರೆ ಮುಂದೆ ಅದು ಸುಲಭವಾಗುತ್ತದೆ ಮಾತ್ರವಲ್ಲ ಹೊಸ ಸಂಶೋಧನೆಗಳು ನೀವೂ ಮಾಡಲು ಸಾಧ್ಯ ಎಂದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಸುಲೇಖ ಬಿ ಇವರು ಮಾತನಾಡಿ ಗಣಿತ ಎಲ್ಲಾ ಅಧ್ಯಯನ ವಿಷಯಗಳಿಗೆ ಅಗತ್ಯವಾಗಿ ಬೇಕಿದೆ.ಗಣಿತ ಎಲ್ಲ ಕ್ಷೇತ್ರಗಳ ವಿಚಾರಗಳು ವೈಜ್ಞಾನಿಕ ರೂಪ ಪಡೆಯಲು ಸಹಕಾರಿಯಾಗಿದೆ ಎಂದರು.ಉಪಪ್ರಾಚಾರ್ಯರಾದ ಜಾಯ್ ಡಬೋರ್ , ಗಣಿತ ಉಪನ್ಯಾಸಕ ಅಮರೇಶ್ ಸಜ್ಜನ್ ಉಪಸ್ತಿತರಿದ್ದರು. ಡಾ|| ಯು ಶ್ರೀನಿವಾಸ ಮೂರ್ತಿ ಪ್ರಾಸ್ತಾವಿಕ ಮಾತುಗಳಾಡಿದರು, ಸಹಶಿಕ್ಷಕರಾದ ದಯಾನಂದ್ ಸ್ವಾಗತಿಸಿದರು, ಲಕ್ಷ್ಮಿ ಪಾಟೀಲ್ ವಂದಿಸಿದರು ಉಪನ್ಯಾಸಕರಾದ ಚಾಂದ್ ಪಾಷಾ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಆಯ್ಕೆಯಾದ ೪೦ ವಿದ್ಯಾರ್ಥಿಗಳ ಜೊತೆಗೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.