This is the title of the web page
This is the title of the web page

Please assign a menu to the primary menu location under menu

State

ಸ್ವಕುಳಸಾಳಿ ಗರಿಮೆಯ ಶ್ರೀರಾಮಕೋಟಿ ವಸ್ತ್ರ


ಕೈಮಗ್ಗದ ನೇಕಾರ ಕಲಾಕಾರರಲ್ಲಿ ಆಂಧ್ರದ ಧರ್ಮಾವರಂ ನಿವಾಸಿಯಾದ ಜುಜಾರೆ ನಾಗರಾಜು ಅದ್ಭುತ ವಿನ್ಯಾಸಗಳಲ್ಲಿ ಸೀರೆ ನೇಯುವ ಕಾಯಕವನ್ನು ಮೈಗೂಡಿಸಿಕೊಂಡು ಪ್ರಖ್ಯಾತರಾಗಿದ್ದಾರೆ. ಸದಾ ಒಂದಿಲ್ಲೊಂದು ಹೊಸ ಪ್ರಯೋಗದಿಂದ, ನವನವೀನ ವಸ್ತ್ರವಿನ್ಯಾಸಗಳನ್ನು ಆವಿಷ್ಕರಿಸುತ್ತ ಸುದ್ದಿ ಮಾಡುವ ಇವರು ಈಗ ಮತ್ತೊಂದು ಅದ್ಭುತವನ್ನು ಸೃಷ್ಟಿಸಿದ್ದಾರೆ.

60 ಗಜ ಉದ್ದದ, 44 ಅಂಗುಲ ಅಗಲದ 16 ಕೆ.ಜಿ. ತೂಕವಿರುವ “ಶ್ರೀರಾಮಕೋಟಿ ವಸ್ತ್ರ”ವನ್ನು ತಯಾರಿಸಿದ್ದಾರೆ. ‘ಇದನ್ನು ಸೀರೆ ಎನ್ನಲಾದೀತೆ!’ ಎಂದು ವಿಸ್ಮಯಪಡುವ ಹಾಗೆ ಈ ವಸ್ತ್ರದ ಉದ್ದಕ್ಕೂ 32,200 ಬಾರಿ “ಜೈ ಶ್ರೀರಾಮ್” ಎಂಬ ಅಕ್ಷರಗಳನ್ನು 13 ಭಾಷೆಗಳಲ್ಲಿ ನೇಯ್ದಿದ್ದಾರೆ. ಮಾತ್ರವಲ್ಲ, ಸೀರೆಯ ಎರಡೂ ಬದಿಯ ಅಂಚುಗಳಲ್ಲಿ ಉದ್ದಕ್ಕೂ ವಾಲ್ಮೀಕಿ ರಾಮಾಯಣದ ಪ್ರಮುಖ ಘಟ್ಟಗಳ 168 ಬಗೆಯ ಚಿತ್ರಗಳನ್ನೂ ಸುಂದರವಾಗಿ, ಸೂಕ್ಷ್ಮವಾಗಿ ಬಿಡಿಸಿದ್ದಾರೆ. ಆಯಾ ಚಿತ್ರದ ಜೊತೆ ಅದರ ಶೀರ್ಷಿಕೆಯನ್ನೂ ಮೂಡಿಸಿದ್ದಾರೆ.

ಇದರ ತಯಾರಿಗಾಗಿ ರೇಷ್ಮೆಯ ಜೊತೆ ಇವರು ಬಳಸಿದ ಪದಾರ್ಥಗಳೆಂದರೆ, ಹತ್ತಿ ನೂಲು, ನವಿರು ನಾರು (ಲಿನಿನ್), ಬನಾನಾ ನೂಲು, ಪಾಲಿಯೆಸ್ಟರ್, ನಾಜೂಕು ನೂಲು (ವೆಲ್ ಸ್ಪನ್), ಚಿನ್ನದ ಜರಿ, ಬೆಳ್ಳಿಯ ಜರಿ ಹಾಗೂ ತಾಮ್ರದ ಜರಿ. ಇದಕ್ಕೆ ಮೆರುಗು ನೀಡುವಂತೆ ಬಳಸಿದ ಬಣ್ಣಗಳು ಹಸಿರು, ಬಿಳುಪು, ಆನಂದ ಬಣ್ಣ, ಕಡು ಕುಂಕುಮ ಬಣ್ಣ (ಮರೂನ್), ಗುಲಾಬಿ ಬಣ್ಣ (ಪಿಂಕ್), ಕಡುಗಂದು ಬಣ್ಣ (ಚಾಕೊಲೇಟ್), ಕಡು ನೀಲಿ (ರಾಯಲ್ ಬ್ಲೂ), ಆಲಿವ್ ಎಣ್ಣೆ ಹಸಿರು ಹಾಗೂ ರೇಡಿಯಮ್ ಹೊಳಪಿನ ಬಣ್ಣಗಳು.

ವಸ್ತ್ರದ ಉದ್ದಕ್ಕೂ “ಜೈ ಶ್ರೀರಾಮ್” ಪದಗಳನ್ನು ತೆಲುಗು, ದೇವನಾಗರಿ, ಕನ್ನಡ, ತಮಿಳು, ಮಳಯಾಳ, ಒರಿಯಾ, ಗುಜರಾತಿ, ಪಂಜಾಬಿ, ಬೆಂಗಾಲಿ, ಉರ್ದು, ಅಸ್ಸಾಮಿ, ಆಂಗ್ಲ ಮತ್ತು ಸಿಂಹಳ – ಹೀಗೆ ಹದಿಮೂರು ಭಾಷೆಯ ಲಿಪಿಗಳನ್ನು ಪುನರಾವರ್ತಿಸಿ ನೇಯ್ದಿದ್ದಾರೆ.

ಈ ವಸ್ತ್ರವನ್ನು ನೇಯಲು ನಾಲ್ಕು ತಿಂಗಳ ಪರಿಶ್ರಮದಲ್ಲಿ ನಾಗರಾಜುವಿಗೆ ನೆರವಾದವರು ಸುರೇಂದ್ರಬಾಬು ಹಾಗೂ ತೇಜ ಎನ್ನುವವರು. ಇವರು ಯಾರೂ ತಮ್ಮ ಸತತ ಪರಿಶ್ರಮಕ್ಕೆ ಇಂತಿಷ್ಟು ಕೂಲಿಯ ದರವೆಂದು ನಿಗದಿ ಪಡಿಸದೆಯೆ ತಮ್ಮ ಕಲೆಗಾರಿಕೆಯನ್ನು ಧಾರೆಯೆರಿದಿದ್ದಾರೆ. ಈ ವಸ್ತ್ರವನ್ನು ತಯಾರಿಸಲು ಇಲ್ಲಿಯವರೆವಿಗೂ ಅಂದಾಜಿಸಿದ ವೆಚ್ಚ ಒಂದೂವರೆ ಲಕ್ಷ ರೂಪಾಯಿ.

ಈ “ಶ್ರೀರಾಮಕೋಟಿ ಸುದೀರ್ಘ ವಸ್ತ್ರ”ವನ್ನು ಶ್ರೀರಾಮನವಮಿಯ ದಿನ ಆವಿಷ್ಕರಿಸಲು ಜುಜಾರೆ ನಾಗರಾಜು ಬಯಸಿದ್ದರಾದರೂ, ಸ್ಥಳೀಯ ಶಾಸಕರ ಕೈಯಿಂದ 13-4-2022ರ ಬುಧವಾರದಂದು ಧರ್ಮವರಂನ ನೂರಾರು ಜನರ ಸಮ್ಮುಖದಲ್ಲಿ ಆವಿಷ್ಕರಿಸಿದರು. ಒಂದು ವಾಹನದ ಹಿಂಬದಿಯಲ್ಲಿ ಉದ್ದನೆ ಉರುಳಿಗೆ ಸುತ್ತಿದ್ದ ವಸ್ತ್ರವನ್ನು ಹಿಡಿದು ನಿಂತಿದ್ದರೆ ವಾಹನ ಮುಂದಕ್ಕೆ ಸಾಗುತ್ತಿದ್ದಂತೆ ವಿಸ್ತರಿಸುತ್ತಿರುವ ವಸ್ತ್ರವನ್ನು ರಸ್ತೆಯ ಉದ್ದಕ್ಕೂ ನೂರಾರು ಜನ ಕೈಯಲ್ಲಿ ಹಿಡಿಯುತ್ತಿದ್ದರೆ, ನೆರೆದ ಜನ ವಸ್ತ್ರದ ಸೊಗಸನ್ನು ನೋಡುತ್ತಾ ಸಂಭ್ರಮಿಸಿದರು.

ವಸ್ತ್ರನಿರ್ಮಾಣದ ಚರಿತ್ರೆಯಲ್ಲಿ ದಾಖಲಾದ “ಸ್ವಕುಳಸಾಳಿ ಗರಿಮೆ”ಯ ಈ ಅದ್ಭುತ ವಸ್ತ್ರವನ್ನು ಅಯೋಧ್ಯೆಯ ಶ್ರೀರಾಮನಿಗೆ ಸಮರ್ಪಿಸುವುದಾಗಿ ಜುಜಾರೆ ನಾಗರಾಜು ಪ್ರಕಟಿಸಿದರು.


Gadi Kannadiga

Leave a Reply