ಬೆಳಗಾವಿ:- ಎಐಡಿವೈಓ ಚಟುವಟಿಕೆಗಳ ಮೂಲಕ ಸಂಘಟನೆಗೆ ಹತ್ತಿರವಾದ ಯುವಜನರಲ್ಲಿ ವೈಚಾರಿಕ ಸ್ಪಷ್ಟತೆ, ಸೈದ್ಧಾಂತಿಕತೆ ತೀಕ್ಷ÷್ಣತೆಯನ್ನು ಬೆಳೆಸುವ ಸಲುವಾಗಿ ದಿನಾಂಕ ೨೫ ಹಾಗೂ ೨೬ ಫೆಬ್ರವರಿ ೨೦೨೩ರಂದು ರಾಜ್ಯಮಟ್ಟದ ಯುವಜನ ಶಿಬಿರವನ್ನು ಕೊಪ್ಪಳದ ಮಳೆ ಮಲ್ಲೇಶ್ವರ ಯಾತ್ರಾ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಯುವಜನರು ಭಾಗವಹಿಸುವ ಈ ಶಿಬಿರವನ್ನು ಭಾರತದ ಕ್ರಾಂತಿಕಾರಿ ಸ್ವಾತಂತ್ರö್ಯ ಹೋರಾಟಗಾರರು ಹಾಗೂ ಎಐಡಿವೈಓನ ಸಂಸ್ಥಾಪನೆಗೆ ಮಾರ್ಗದರ್ಶನ ನೀಡಿದ ಶಿವದಾಸ್ ಘೋಷ್‌ರ ಜನ್ಮ ಶತಾಬ್ದಿಯ ಅಂಗವಾಗಿ ನಡೆಸಲಾಗುತ್ತಿದೆ.
ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಯುವಜನರನ್ನು ಹೊಂದಿರುವ ದೇಶ ಭಾರತ. ಆದ್ದರಿಂದ ನಮ್ಮದು ತರುಣ ಭಾರತ! ಅಂದರೆ ದೇಶದಲ್ಲಿರುವ ಶೇಕಡ ೬೦ಕ್ಕೂ ಹೆಚ್ಚಿನ ನಿವಾಸಿಗಳ ಸರಾಸರಿ ವಯಸ್ಸು ೧೫ ವರ್ಷದಿಂದ ೪೫ರ ಆಸು ಪಾಸಿನಲ್ಲಿದೆ. ದೇಶದ ಪ್ರಗತಿಗೆ ದುಡಿಯುವ ವಯೋಮಾನದ ಯುವಜನರ ಸಂಖ್ಯೆ ನಮ್ಮಲ್ಲಿ ಹೇರಳವಾಗಿದೆ. ಆದರೆ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು, ಹೊಸತನವನ್ನು ಹುಡುಕುವ ಅವರ ಉತ್ಸಾಹವನ್ನು ಪ್ರೋತ್ಸಾಹಿಸಿ ದೇಶವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ನಮ್ಮ ಆಳ್ವಿಕರು ವಿಫಲವಾಗಿದ್ದಾರೆ. ಕಳೆದ ೪೫ ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಇಂದು ದೇಶವನ್ನು ಕಾಡುತ್ತಿದೆ. ಸರ್ಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ನೇಮಕಾತಿ ಮಾಡುತ್ತಿಲ್ಲ. ನಿರುದ್ಯೋಗ ಸಮಸ್ಯೆಯಿಂದಾಗಿ ಖಿನ್ನತೆಗೆ ಒಳಗಾಗಿ ಇಂದು ದೇಶದಲ್ಲಿ ಯುವಜನರು ಆತ್ಮಹತ್ಯೆಗೆ ಮೊರೆ ಹೋಗುವುದನ್ನು ಕಾಣುತ್ತಿದ್ದೇವೆ.
ಯುವಜನರನ್ನು ದಾರಿ ತಪ್ಪಿಸಲು ಅಶ್ಲೀಲತೆ-ಹಿಂಸೆಗಳನ್ನು ಎಲ್ಲೆಡೆ ಪ್ರಚುರಪಡಿಸಿ ಅವರನ್ನು ಅತ್ಯಾಚಾರ-ಕೊಲೆಗಳಂತಹ ಅಪರಾಧಗಳಲ್ಲಿ ಸಿಲುಕಿಸಲಾಗಿದೆ. ಪ್ರತಿ ಚುನಾವಣೆಗಳಲ್ಲೂ ಪಕ್ಷಗಳು ನೀಡುವ ಭರವಸೆಗಳಿಗೆ ಮರುಳಾಗಿ ಮತ ನೀಡಿ ಮೋಸ ಹೋಗುವುದು, ಆಳ್ವಿಕ ಸರ್ಕಾರಗಳ ಹುನ್ನಾರಗಳಿಗೆ ಬಲಿಯಾಗಿ ಮದ್ಯ ಮಾದಕ ವ್ಯಸನಗಳಿಗೆ ತುತ್ತಾಗುವವರು, ಪಬ್ಜಿ ಮೊದಲಾದ ಆನ್‌ಲೈನ್ ಜೂಜುಗಳಿಗೆ ಬಲಿಯಾಗುತ್ತಿರುವವರು, ತಮ್ಮ ಕ್ಷುಲ್ಲಕ ಹಿತಾಸಕ್ತಿಗಾಗಿ ಜನೈಕ್ಯತೆಯನ್ನು ಮುರಿಯುವ ವಿಭಜಕ ಕೃತ್ಯಗಳಲ್ಲಿ ಪಕ್ಷಗಳು ತೊಡಗಿಸಿಕೊಳ್ಳುತ್ತಿರುವುದೂ ಯುವಜನರನ್ನೆ ಆಗಿದೆ.
ಇಷ್ಟಾದರೂ ಸಮಾಜದ ಪ್ರಗತಿಯ ಬಂಡಿಯ ಚಕ್ಕಡಿಯನ್ನು ಉರುಳಿಸಬೇಕಾದವರು ಈ ಯುವಜನರೇ ಆಗಿದ್ದಾರೆ. ಅವರೇ ಭವಿಷ್ಯದ ಆಶಾಕಿರಣ. ಆದರ್ಶಗಳಿಗೆ ಆಕರ್ಷಿತರಾಗುವವರು, ಪರರಿಗಾಗಿ ತಮ್ಮ ಸ್ವಂತ ಹಿತವನ್ನು ಬಿಟ್ಟುಕೊಡುವವರು, ಶೋಷಿತ ಜನತೆಯ ವಿಮುಕ್ತಿಗಾಗಿ ಹೋರಾಡಬಲ್ಲವರು, ಸಂದರ್ಭ ಬಂದರೆ ಎಂಥದ್ದೇ ತ್ಯಾಗ ಬಲಿದಾನಗಳಿಗೆ ಅಂಜದವರು, ನಂಬಿದ ಧ್ಯೇಯಕ್ಕಾಗಿ ಪ್ರಾಣವನ್ನೇ ಕೊಡಬಲ್ಲವರು ಯುವಜನರು! ಅಂತಹ ಯುವಜನರಿಂದು ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಗೆ ಸಿಲುಕಿ, ಸೂತ್ರವರಿದ ಪಟದಂತೆ ದಿಕ್ಕಾಪಾಲಾಗಿ ಚದುರಿ ಹೋಗಿದ್ದಾರೆ. ಅವರನ್ನು ಉದಾತ್ತ ವೈಚಾರಿಕತೆ, ವೈಜ್ಞಾನಿಕ ಧರ್ಮನಿರಪೇಕ್ಷ ಮೌಲ್ಯಗಳತ್ತ ಆಕರ್ಷಿಸಿ, ಉನ್ನತ ನೀತಿ ನೈತಿಕತೆಯನ್ನು ಬೆಳೆಸಿದಲ್ಲಿ ಅವರೇ ಸಮಾಜದ ಪ್ರಗತಿಯನ್ನು ಸಾಧಿಸುವ ಸಾಧಕರಾಗುತ್ತಾರೆ.
ಈ ವಾಸ್ತವ ಸತ್ಯವನ್ನು ಮನಗಂಡಿರುವ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಂIಆಙಔ) ಕರ್ನಾಟಕದಲ್ಲಿ ಕಳೆದ ನಾಲ್ಕು ದಶಕಗಳಿಂದ ಯುವಜನರ ಮಧ್ಯೆ ಸಕ್ರಿಯವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ. ಅವರ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಗಳನ್ನು ಕಟ್ಟುತ್ತಾ, ಯುವಜನರ ಭರವಸೆಯ ಸಂಘಟನೆಯಾಗಿ ಹೊರಹೊಮ್ಮಿದೆ. ನಮ್ಮ ದೇಶದ ಸ್ವಾತಂತ್ರ‍್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್‌ಸಿಂಗ್, ನೇತಾಜಿ ಸುಭಾಷ್‌ಚಂದ್ರ ಬೋಸ್, ಅಶ್ವ ಕುಲ್ಲಾ ಖಾನ್, ಚಂದ್ರಶೇಖರ ಆಜಾದ್, ಮಾಸ್ಟರ್‌ದಾ ಸೂರ್ಯ ಸೇನ್, ಪ್ರೀತಿಲತಾ ವದ್ದೇದಾರ್, ಕಲ್ಪನಾ ದತ್ತಾರಂತಹ ಮಹಾನ್ ಚೇತನಗಳ ಜೀವನ ಆದರ್ಶಗಳನ್ನು ಯುವಜನರಿಗೆ ಪರಿಚಯಿಸುತ್ತಿದೆ. ಯುವಜನರಲ್ಲಿ ಐಕ್ಯತೆಯನ್ನು ಬೆಳೆಸುವ ಗ್ರಾಮೀಣ ಕ್ರೀಡಾಕೂಟಗಳು, ಸಾಮಾಜಿಕ ಕಾಳಜಿಯನ್ನು ಬೆಳೆಸುವ ರಕ್ತದಾನ ಶಿಬಿರಗಳು, ಶ್ರಮದಾನ ಶಿಬಿರಗಳು, ವೈದ್ಯಕೀಯ ಶಿಬಿರಗಳು, ಹೋರಾಟದ ಸ್ಫೂರ್ತಿಯನ್ನು ಮೂಡಿಸುವ ಸಮೂಹ ಚಳುವಳಿಗಳನ್ನು ಬೆಳೆಸುತ್ತಿದೆ. ಇಂತಹ ಹತ್ತು-ಹಲವು ಚಟುವಟಿಕೆಗಳಲ್ಲಿ ನೂರಾರು ಯುವಜನರು ರಾಜ್ಯದಾದ್ಯಂತ ತೊಡಗಿಸಿಕೊಂಡಿದ್ದಾರೆ. ಅವರಿಗೆ ಇನ್ನೂ ಉನ್ನತ ಮಟ್ಟದ ತಿಳುವಣಿಕೆ ನೀಡಿ ರಾಜ್ಯದ ಆದರ್ಶ ಯುವಜನ ಪಡೆಯನ್ನು ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.
ಈ ಯುವಜನ ಶಿಬಿರದಲ್ಲಿ ಎಐಡಿವೈಓ ಅಖಿಲ ಭಾರತ ನಾಯಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ‘ಕ್ರಾಂತಿಕಾರಿಗಳು ಕಂಡ ಸ್ವತಂತ್ರ ಭಾರತದ ಕನಸು’, ‘ಪ್ರಸಕ್ತ ಸಮಾಜದ ತಲ್ಲಣಗಳು ಹಾಗೂ ಯುವಜನರ ಮುಂದಿರುವ ಕರ್ತವ್ಯಗಳು’ ‘ನಿರುದ್ಯೋಗ ನಿವಾರಿಸಲಾಗದ ಸಮಸ್ಯೆಯೇ?’ ಹಾಗೂ ‘ವೈಚಾರಿಕತೆ ಮತ್ತು ಯುವಜನತೆ’ ಎಂಬ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.
ಆದ್ದರಿಂದ ಈ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ರಾಜ್ಯದ ಯುವ ಪ್ರತಿನಿಧಿಗಳಿಗೆ ಈ ಮೂಲಕ ಕರೆ ನೀಡುತ್ತೇವೆ. ಹಾಗೂ ಯುವಜನರಲ್ಲಿ ಉನ್ನತ ಚಾರಿತ್ರ‍್ಯವನ್ನು ಬೆಳೆಸುವ ಪ್ರಯತ್ನದ ಒಂದು ಮುಖ್ಯ ಭಾಗವಾದ ಇಂತಹ ಶಿಬಿರಕ್ಕೆ ಬೇಕಾದ ಅಗತ್ಯ ನೆರವನ್ನು ನೀಡಿ ಯಶಸ್ವಿಗೊಳಿಸಬೇಕೆಂದು ಸಮಸ್ತ ಜನರಲ್ಲಿ ಮನವಿ ಮಾಡುತ್ತೇವೆ.
Gadi Kannadiga > State > ಫೆ ೨೫ ಮತ್ತು ೨೬ರಂದು ಕೊಪ್ಪಳದಲ್ಲಿ ರಾಜ್ಯ ಮಟ್ಟದ ಯುವಜನ ಶಿಬಿರ
ಫೆ ೨೫ ಮತ್ತು ೨೬ರಂದು ಕೊಪ್ಪಳದಲ್ಲಿ ರಾಜ್ಯ ಮಟ್ಟದ ಯುವಜನ ಶಿಬಿರ
Suresh07/02/2023
posted on
