This is the title of the web page
This is the title of the web page

Please assign a menu to the primary menu location under menu

State

ತೆರೆಮರೆಯ ಹೋರಾಟಗಾರರ ಕಥೆಗಳು ಬೆಳಕಿಗೆ ಬರಬೇಕು – ಕಿರಣ ಗಣಾಚಾರಿ


 

ಖಾನಾಪೂರ: ಬ್ರಿಟಿಷರ ದಾಸ್ಯತ್ವದಿಂದ ಮುಕ್ತರಾಗಬೇಕೆಂದು ಹೋರಾಟ ಮಾಡಿದವರಲ್ಲಿ ನಮ್ಮ ಸುತ್ತಮುತ್ತಲಿನ ಅದೆಷ್ಟೋ ಮಹನೀಯರ ಪಾತ್ರವೂ ದೊಡ್ಡದಿದೆ. ಅಂತಹ ತೆರೆಮರೆಯಲ್ಲುಳಿದು ತ್ಯಾಗ ಬಲಿದಾನದ ಮಾಡಿದವರ ಕಥೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಬಹುದೊಡ್ಡ ಕಾರ್ಯವಾಗಬೇಕೆಂದು ಸಂಭ್ರಮ ಫೌಂಡೇಶನ್ ಅಧ್ಯಕ್ಷರಾದ ಕಿರಣ ಗಣಾಚಾರಿ ತಿಳಿಸಿದರು.
ಅವರು ಇತ್ತೀಚೆಗೆ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಚ.ರಾ.ಸ್ಮಾ.ಪ.ಪೂ.ಕಾಲೇಜ ಇಟಗಿ ಸಭಾಂಗಣದಲ್ಲಿ ಸಂಭ್ರಮ ಫೌಂಡೇಶನ್ ಹಾಗೂ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಸಹಯೋಗದಲ್ಲಿ ‘ಬೆಳ್ಳಿ ಚುಕ್ಕಿ’ ವಿಶೇಷ ಕಾರ್ಯಕ್ರಮ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಬಸವಣ್ಣೆಪ್ಪ ಮ ಸಾಣಿಕೊಪ್ಪ ಅವರ ಪಾತ್ರದ ಕುರಿತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಸ್ವಾತಂತ್ರ‍್ಯ ಹೋರಾಟಗಾರರಾದ ಇಟಗಿ ಗ್ರಾಮದ ದಿವಂಗತ ಬಸವಣ್ಣೆಪ್ಪ ಮ ಸಾಣಿಕೊಪ್ಪರವರ ಕೊಡುಗೆ ಅಪಾರ, ಅವರಂತೆ ಅದೆಷ್ಟೋ ಹೋರಾಟಗಾರರ ಯಶೋಗಾಥೆಗಳು ನಮಗೆ ತಿಳಿಯದೇ ಉಳಿದಿವೆ ಎಂಧರು. ಅಂಥಹ ಇತಿಹಾಸವನ್ನು ನಾವು ನೀವೆಲ್ಲ ಹುಡುಕಿ ನಾಡಿಗೆ ಪರಿಚಯಿಸುವಂತಹ ಕೆಲಸಗಳು ಆಗಬೇಕಾಗಿದೆ ಮತ್ತು ಅವರ ಆದರ್ಶ ಮಾರ್ಗಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಬೇಕಾಗಿದೆ ಎಂದು ಅವರು ಹೇಳಿದರು.

ಉಪನ್ಯಾಸ ನೀಡಿದ ಖಾನಾಪೂರ ಮಾಜಿ ತಾಲೂಕಾ ಕಸಾಪ ಅಧ್ಯಕ್ಷರಾದ ವಿಜಯ ವೀ. ಬಡಿಗೇರ ಮಾತನಾಡಿ ದಿವಂಗತ ಬಸವಣ್ಣೆಪ್ಪ ಮ ಸಾಣಿಕೊಪ್ಪ ಅವರು ಶಾಲೆಯಲ್ಲಿ ಓದುತ್ತಿರುವಾಗಲೇ ಹೋರಾಟದ ಸೆಳೆತಕ್ಕೆ ಸಿಕ್ಕವರು. ಯುವಕರಾಗಿದ್ದಾಲೂ ಉದ್ಯೋಗದ ಜೊತೆಗೆ ಹೋರಾಟದ ಹಾದಿ ತುಳಿದು ಖಾನಾಪೂರ, ನಂದಗಡ, ಇಟಗಿ ಭಾಗಗಳಲ್ಲಿ ನಂದಗಡದ ಅರಗಾಂವಿ, ಚೆನ್ನಪ್ಪ ವಾಲಿ ಮುಂತಾದ ಜನರ ಗುಂಪು ಕಟ್ಟಿಕೊಂಡು, ಬ್ರಿಟಿಷರಿಗೆ ಪ್ರತಿರೋಧವನ್ನು ತೋರುತ್ತಾ ನಾಡಿನ ತುಂಬೆಲ್ಲ ಜನರನ್ನು ಹುರಿದುಂಬಿಸುತ್ತ, ಖಾದಿ ಪ್ರಚಾರ, ಸ್ವದೇಶಿ ಚಳುವಳಿ ಮುಂತಾದ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ದಿ.ಬಸವಣ್ಣೆಪ್ಪ ಮ ಸಾಣಿಕೊಪ್ಪ ಅವರ ಸುಪುತ್ರ ರವಿ ಮ ಸಾಣಿಕೊಪ್ಪ ಮಾತನಾಡುತ್ತಾ, ತಮ್ಮ ತಂದೆಯವರಿಂದ ತಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಇಂದಿಗೂ ಕೂಡ ಅವರ ಆದರ್ಶಮಯ ಜೀವನವನ್ನು ಪಾಲಿಸಿಕೊಂಡು ಬಂದಿರುತ್ತೇವೆ. ಅವರು ಹಾಕಿಕೊಟ್ಟ ಸರಳ ಆದರ್ಶಮಯ ಮಾರ್ಗ ನಮ್ಮನ್ನು ಇಂದಿಗೂ ಪ್ರಗತಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದೆ ಎಂದರು. ತಂದೆಯವರನ್ನು ಚಿಕ್ಕಂದಿನಿಂದಲೂ ಗಮನಿಸುತ್ತಾ ಬಂದಿದ್ದು, ಅವರ ಸ್ವಾತಂತ್ರ‍್ಯ ಹೋರಾಟದ ಚಿತ್ರಣ ಈಗಲೂ ನನ್ನ ಕಣ್ಣಮುಂದಿದೆ, ಸಂಭ್ರಮ ಫೌಂಡೇಶನ್ ಇಟಗಿ ಹಾಗೂ ಜನತಾ ಶಿಕ್ಷಣ ಪ್ರಸಾರ ಸಮಿತಿ ಇಟಗಿಯ ಸಹಯೋಗಾರ್ಥ ಕಾರ್ಯಕ್ರಮ ಪ್ರಶಂಸನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಭ್ರಮ ಪೌಂಡೇಶನ್ ಉಪಾಧ್ಯಕ್ಷರಾದ ಕಲ್ಲಪ್ಪ ವೀ ಗಣಾಚಾರಿ, ಜನತಾ ಶಿಕ್ಷಣ ಪ್ರಸಾರ ಸಮಿತಿಯ ಚೇರ್ಮನ್ ವಿಜಯ ಬಿ ಸಾಣಿಕೊಪ್ಪ, ಉಪಾಧ್ಯಕ್ಷರಾದ ಗೌಡಪ್ಪ ಪುಂಡಿ, ಕಾರ್ಯದರ್ಶಿಗಳಾದ ಶ್ರೀಶೈಲ ತುರಮುರಿ,ನಿರ್ದೇಶಕರಾದ ಶಂಕರ ಗಣಾಚಾರಿ,ಚ.ರಾ.ಸ್ಮಾ.ಸಂ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ಶಾಸ್ತ್ರೀ, ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಚರಾಸ್ಮಾ ಸಂಪಪೂ ಕಾಲೇಜು ಮತ್ತು ಬಿಎಂಎಸ್ ಪದವಿ ಕಾಲೇಜಿನ ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯರಾದ ಆರ್. ಬಿ. ಹುಣಶೀಕಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ವಿ.ಎಲ್.ನಾಯಕ ವಂದಿಸಿದರು. ಉಪನ್ಯಾಸಕರಾದ ಈಶ್ವರ ಆರ್ ಕರಮಳ್ಳವರ ನಿರೂಪಿಸಿದರು.


Gadi Kannadiga

Leave a Reply