ಬಳ್ಳಾರಿ ನ.೧೭, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಕ್ರಿಯೆಗೆ ತನ್ನದೇ ಮಹತ್ವವಿದೆ. ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಸ್ಪಷ್ಟವಾದ ಅರಿವು ಮತ್ತು ಮಹತ್ವ ತುಂಬಾ ಅಗತ್ಯವಾಗಿದೆ ಎಂದು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮೋಹನ್ದಾಸ್ ಕೆ. ಅವರು ತಿಳಿಸಿದರು.
ಅವರು ಗುರುವಾರದಂದು ಬೆಳಿಗ್ಗೆ ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಫ್ ಸಮಿತಿ ಮತ್ತು ಲೀಡ್ ಕಾಲೇಜಿನ ಮತದಾರರ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಿಲ್ಲಾ ಲೀಡ್ ಕಾಲೇಜು ಮಟ್ಟದ ಸ್ಪರ್ಧಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಕಾರ್ಯಕ್ರಮಕ್ಕೆ ಮುನ್ನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಚುನಾವಣೆಯ ಸಂದರ್ಭದಲ್ಲಿ ಮತದಾರರು ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಚುನಾವಣಾ ಕಣದಲ್ಲಿರುವ ಉತ್ತಮ ಉಮೇದುವಾರರನ್ನು ಆರಿಸಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೀಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ.ಮಂಜುನಾಥ ರೆಡ್ಡಿ ಅವರು ಮಾತನಾಡಿ, ವಿದ್ಯಾರ್ಥಿಗಳು ಮತದಾರರ ಕ್ಲಬ್ ನಡೆಸುವ ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಜಿಲ್ಲಾ ಪಂಚಾಯತ್ನ ಯೋಜನಾಧಿಕಾರಿ ಲಕ್ಷö್ಮಣ್ ಬಿ.ಶೃಂಗೇರಿ ಅವರು ಉದ್ಘಾಟಿಸಿದರು. ಜಿಲ್ಲಾ ಸ್ವೀಪ್ ಸಮಿತಿಯ ಅಧೀಕ್ಷಕರಾದ ಎಂ.ಬಸವರಾಜ ಹಿರೇಮಠ್, ಪರೀಕ್ಷಾ ನಿಯಂತ್ರಕರಾದ ಶೋಭರಾಣಿ ಹಾಜರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಲೀಡ್ ಕಾಲೇಜ್ ಮತದಾರರ ಕ್ಲಬ್ ಸಂಚಾಲಕರಾದ ಡಾ.ವೈ.ಜನಾರ್ಧನರೆಡ್ಡಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಆರಂಭದಲ್ಲಿ ಹುಸೇನ್ಬೀ ಪ್ರಾರ್ಥಿಸಿದರು. ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿಭಾಗದ ಸಂಯೋಜಕರಾದ ಡಾ.ಕಾವಲ್ಲಯ್ಯ ಸಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಡಾ.ಸುಜಾತ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಲಿಂಗಪ್ಪ, ಶೇಷಣ್ಣ, ವೀರೇಶ್ ಮುಂತಾದವರು ಭಾಗವಹಿಸಿದ್ದರು. ಜಿಲ್ಲೆಯ ೧೨ ಕಾಲೇಜುಗಳಿಂದ ಸುಮಾರು ೮೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
Gadi Kannadiga > State > ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಅರಿವು ಅಗತ್ಯ- ಡಾ.ಮೋಹನ್ದಾಸ್