ಮೈಸೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಆದರೆ ಪರೀಕ್ಷೆಗೆ ಭಯಪಟ್ಟು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್.ಡಿ.ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ.
ಅನು(18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಓದುತ್ತಿದ್ದರು. ಎಂದಿನಂತೆ ಬೆಳಿಗ್ಗೆ ತಂದೆ, ಪರೀಕ್ಷೆ ಇದೆ ಓದಿಕೊ ಎಂದು ಹೇಳಿ ರೂಂಗೆ ತೆರಳಿದ್ದಾರೆ. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿದು ವಿದ್ಯಾರ್ಥಿಗಳು, ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಚ್.ಡಿ.ಕೋಟೆಯಲ್ಲಿ ಪ್ರಕರಣ ದಾಖಲಾಗಿದೆ.