ಕನ್ನಡದ ಮೊದಲ ಚಿತ್ರಕ್ಕೆ ೯೦ ವರ್ಷ

Murugesh Shivapuji
ಕನ್ನಡದ ಮೊದಲ ಚಿತ್ರಕ್ಕೆ ೯೦ ವರ್ಷ
WhatsApp Group Join Now

ಕನ್ನಡದ ಮೊದಲ ಚಲನಚಿತ್ರ ತೆರೆ ಕಂಡಿದ್ದು ಮಾರ್ಚ್ ೩ , ೧೯೩೪. ಅದು ವಾಕಿ ಚಿತ್ರ ಸತಿ ಸುಲೋಚನಾ. ಆದರೆ ಅದಕ್ಕಿಂತ ಮೊದಲು ಸಿದ್ಧವಾಗಿ ಸೆನ್ಸಾರ್ ಅನುಮತಿಯನ್ನೂ ಪಡೆದಿದ್ದ ಚಿತ್ರ ” ಭಕ್ತ ಧ್ರುವ. ಅದು ತೆರೆ ಕಂಡಿದ್ದು ನಂತರ. ಆದ್ದರಿಂದ ಚಲನಚಿತ್ರದ ಇತಿಹಾಸದಲ್ಲಿ ಮೊದಲ ಚಿತ್ರವಾಗಿ ದಾಖಲಾಗುವ ಅದೃಷ್ಟ ಸತಿ ಸುಲೋಚನಾ ಚಿತ್ರದ್ದಾಗಿತ್ತು.
ಈ ಕನ್ನಡ ಚಿತ್ರ ನಿರ್ಮಿಸಿದವನು ರಾಜಸ್ತಾನದಿಂದ ಬೆಂಗಳೂರಿಗೆ ಬಂದು ನೆಲೆಸಿದ ಮಾರವಾಡಿ ಚಮನಲಾಲ ಡೂಂಗಾಜಿ ಎಂಬಾತ. ಆತ ೧೯೩೨ ರಲ್ಲಿ ಸೌಥ್ ಇಂಡಿಯಾ ಮೂವಿಟೋನ್ ಎಂಬ ಚಿತ್ರನಿರ್ಮಾಣ ಸಂಸ್ಥೆ ಸ್ಥಾಪಿಸಿದ. ಅವನೊಡನೆ ಶಾಹ ಬೂರಮಲ್, ಚಮನ್ ಲಾಲಜಿ ಎಂಬವರೂ ಇದ್ದರು. ಖ್ಯಾತ ರಂಗನಟ ಎಂ. ವಿ. ಸುಬ್ಬಯ್ಯ ನಾಯ್ಡು ಮತ್ತು ಆರ್. ನಾಗೇಂದ್ರ ರಾವ್ ಅವರೇ ಈ ಚಿತ್ರ ನಿರ್ಮಾಣಕ್ಕೆ ಪ್ರೇರಣೆ. ತೆಲುಗು ಭಾಷೆಯಲ್ಲಿ ಮೂಕಿ ಚಿತ್ರಗಳನ್ನು ನಿರ್ಮಿಸಿದ್ದ ವೈ. ವಿ. ( ಯರ್ರಗುಡಿಪಾಟಿ ವರದ ರಾವ್) ಅವರನ್ನು ಚಿತ್ರ ನಿರ್ದೇಶನಕ್ಕೆ ಕರೆತರಲಾಯಿತು. ಚಿತ್ರಕತೆ ಹಾಡುಗಳನ್ನು ರಚಿಸಲು ನಾಟಕಕಾರರಾಗಿದ್ದ ಬೆಳ್ಳಾವೆ ನರಹರಿ ಶಾಸ್ತ್ರಿ ಅವರನ್ನು ಕೇಳಿದಾಗ ಅವರು ೧೬ ಹಾಡುಗಳ ಸಹಿತ ಚಿತ್ರಕಥೆ ಸಿದ್ಧಪಡಿಸಿಕೊಟ್ಟರು.
ಆಗ ಕರ್ನಾಟಕದಲ್ಲಿ ಸ್ಟುಡಿಯೋ ಸೌಲಭ್ಯವಿರಲಿಲ್ಲ. ಕೊಲ್ಲಾಪುರ ಅಥವಾ ಚೆನ್ನೈಗೆ ಹೋಗಬೇಕಿತ್ತು. ಈ ತಂಡದವರು ೧೯೩೩ ರಲ್ಲಿ ಕೊಲ್ಲಾಪುರಕ್ಕೆ ಹೋಗಿ ಅಲ್ಲಿಯ ಛತ್ರಪತಿ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿದರು. ಈ ಚಿತ್ರೀಕರಣ ಎರಡು ತಿಂಗಳು ನಡೆಯಿತು ಮತ್ತು ಒಟ್ಟು ೪೦ ಸಾವಿರ ರೂ. ವೆಚ್ಚ ತಗುಲಿತು. ಸಿನಿಮಾ ೧೭೩ ನಿಮಿಷಗಳದಾಗಿತ್ತು. ೧೯೩೪ ರ ಮಾರ್ಚ್ ಮೂರರಂದು ಸತಿ ಸುಲೋಚನಾ ಬೆಂಗಳೂರಿನ ಸಿಟಿ ಮಾರ್ಕೆಟ್ ಹತ್ತಿರದ ಪ್ಯಾರಾಮೌಂಟ್ ಹಾಲ್ ( ದೊಡ್ಡಣ್ಣ ಹಾಲ್ ) ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಕಂಡಿತು. ಇದು ಕರ್ನಾಟಕದ ಮೊದಲ ಚಿತ್ರಮಂದಿರ. ನಂತರ ಇದರಲ್ಲಿ ಪರಿಮಳ ಮತ್ತು ಪ್ರದೀಪ ಎಂಬ ಎರಡು ಸಿನಿಮಾ ಥೇಟರುಗಳಾದವು.
ಸತಿ ಸುಲೋಚನಾ ರಾಮಾಯಣದ ಕತೆಯಲ್ಲಿ ಬರುವ ರಾವಣನ ಮಗ ಇಂದ್ರಜಿತುವಿನ ಪತ್ನಿ ಸುಲೋಚನಾ ಅವಳಿಗೆ ಸಂಬಂಧಿಸಿದ್ದು. ಇಂದ್ರಜಿತುವಾಗಿ ಸುಬ್ಬಯ್ಯ ನಾಯ್ಡು, ಸುಲೋಚನಳಾಗಿ ತ್ರಿಪುರಾಂಬಾ, ರಾವಣನಾಗಿ ನಾಗೇಂದ್ರರಾವ್, ರಾಮನಾಗಿ ಡಿ.ಎ. ಮೂರ್ತಿರಾವ್, ಲಕ್ಷ್ಮಣನಾಗಿ ವೈ. ವಿ. ರಾವ್, ನಾರದನಾಗಿ ಸಿ. ವಿ. ಶೇಷಾಚಲಂ, ಸಖಿಯಾಗಿ ಪದ್ಮಾದೇವಿ ಮಂಡೋದರಿಯಾಗಿ ಲಕ್ಷ್ಮಿ ಇವರು ನಟಿಸಿದರು. ಈ ಮೊದಲ ಸಿನಿಮಾ ಎಂಟು ವಾರಗಳ ಕಾಲ ಹೌಸಫುಲ್ ಪ್ರದರ್ಶನ ಕಂಡಿತು. ಸುತ್ತಮುತ್ತಲಿನ ಹಳ್ಳಿಗಳಿಂದ ಜನ ಚಕ್ಕಡಿಯಲ್ಲಿ ಬಂದು ಸಿನಿಮಾ ನೋಡಿದರು. ನಾಗೇಂದ್ರರಾಯರೇ ಇದಕ್ಕೆ ಸಂಗೀತ ನಿರ್ದೇಶನ ಮಾಡಿದರು.
ಮುಂದೆ ಭಕ್ತಧ್ರುವ ಸಿನಿಮಾ ತೆರೆಕಂಡಿತು. ಅದನ್ನು ಮರಾಠಿಯ ಪಾರ್ಶ್ವನಾಥ ಅಲ್ಟೇಕರ ನಿರ್ದೇಶಿಸಿದ್ದರು. ನಂತರ ಹೊನ್ನಪ್ಪ ಭಾಗವತರ್ ಭಕ್ತ ಕುಂಬಾರ ಮತ್ತು ಮಹಾಕವಿ ಕಾಳಿದಾಸ ಚಿತ್ರಗಳನ್ನು ನಿರ್ಮಿಸಿದರು. ( ೧೯೪೯ ಮತ್ತು ೧೯೫೫) . ಅದರಲ್ಲಿ ಪಂಡರಿಬಾಯಿ ಮತ್ತು ಬಿ. ಸರೋಜಾದೇವಿ ನಾಯಕಿಯರಾಗಿ ಕಾಣಿಸಿಕೊಂಡರು.
‌ಆ ಕಾಲದಲ್ಲಿ ಯಾವ ಸೌಕರ್ಯಗಳು ಇರಲಿಲ್ಲ. ಸುಲೋಚನಾ ಸಿನಿಮಾವನ್ನು ಸೂರ್ಯನ ಬೆಳಕಿನಲ್ಲೇ ಕನ್ನಡಿಗಳ ಮೂಲಕ ಸೆರೆಹಿಡಿದರು. ಯುದ್ಧದ ದೃಶ್ಯಕ್ಕಾಗಿ ಎರಡು ಕ್ಯಾಮರಾ ಬಳಸಲಾಯಿತು. ಕಣ್ಣೀರು ತರಿಸಲು ಆಗ ಗ್ಲಿಸರಿನ್ ಇರಲಿಲ್ಲ. ನೀರ ಹನಿ ಸಿಂಪಡಿಸಲಾಗುತ್ತಿತ್ತು.
‌ಮೊದಲ ಸಿನಿಮಾದಲ್ಲಿ ನಟಿಸಿದ ತ್ರಿಪುರಾಂಬಾ ನಂತರ ಕೇವಲ ಪುರಂದರದಾಸ ಎಂಬ ಸಿನಿಮಾದಲ್ಲಿ ಮಾತ್ರ ನಟಿಸಿದರು.
ಇಂದು ಸಿನಿಮಾ ತಯಾರಿಸಲು ಅತ್ಯಾಧುನಿಕ ಸೌಕರ್ಯಗಳಿವೆ. ಆದರೆ ಅಂದು ಯಾವ ಸೌಕರ್ಯಗಳಿಲ್ಲದ ಕಾಲದಲ್ಲಿ ಈ ಸಾಹಸ ಮಾಡಿ ಚಿತ್ರರಂಗಕ್ಕೆ ತಳಹದಿ ನಿರ್ಮಿಸಿದವರು ನಿಜಕ್ಕೂ ಅಭಿನಂದನಾರ್ಹರು.
‌ ‌‌ – ಎಲ್. ಎಸ್. ಶಾಸ್ತ್ರಿ

WhatsApp Group Join Now
Telegram Group Join Now
Share This Article
error: Content is protected !!