ಪ್ರಥಮ ಪ್ರಸಾದ ನಿಲಯ ಆರಂಭಿಸಿದ್ದು ಡೆಪುಟಿ ಚನ್ನಬಸಪ್ಪ; ಡಾ.ತೋಂಟದ ಸಿದ್ದರಾಮ ಶ್ರೀಗಳು 

Murugesh Shivapuji
ಪ್ರಥಮ ಪ್ರಸಾದ ನಿಲಯ ಆರಂಭಿಸಿದ್ದು ಡೆಪುಟಿ ಚನ್ನಬಸಪ್ಪ; ಡಾ.ತೋಂಟದ ಸಿದ್ದರಾಮ ಶ್ರೀಗಳು 
WhatsApp Group Join Now
ಬೆಳಗಾವಿ; ಬೆಳಗಾವಿಯಲ್ಲಿ ಮೊಟ್ಟಮೊದಲ ಪ್ರಸಾದ ನಿಲಯವನ್ನು ಆರಂಭಿಸುವ ಮೂಲಕ ನಾಡಿನಲ್ಲೆಲ್ಲ ಪ್ರಸಾದ ನಿಲಯಗಳ ಆರಂಭಕ್ಕೆ ಕಾರಣರಾದವರು ಡೆಪ್ಯುಟಿ ಚನ್ನಬಸಪ್ಪನವರು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಅವರು ನುಡಿದರು.
ಅವರು ಶನಿವಾರ ಬೆಳಗಾವಿಯಲ್ಲಿ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳ 135 ನೆಯ ಜಯಂತಿ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಮಾವೇಶ ದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಎರಡು ನೂರು ವರ್ಷಗಳ ಹಿಂದೆ ಕಾಲು ನಡಿಗೆಯಿಂದ ಪುಣೆ ಶಹರಕ್ಕೆ ಹೋಗಿ ಇಂಜಿನಿಯರಿಂಗ್ ಪದವಿ ಪಡೆದ ಚನ್ನಬಸಪ್ಪ ಧಾರವಾಡ ಅವರು ಇಂಜಿನಿಯರಾಗಿ ನೌಕರಿ ಮಾಡದೆ ಅಂದು ಶಿಕ್ಷಣ ಇಲಾಖೆಯಲ್ಲಿ ಶಾಲಾ ಇನ್ಸಪೆಕ್ಟರ್ ಆಗಿ ಸೇವೆಯನ್ನು ಪ್ರಾರಂಭಿಸಿದರು ಅವರ ಹುದ್ದೆಯ ಹೆಸರು ಡೆಪುಟಿ ಎಂದಿತ್ತು. ಅವರು ಮಾಡಿದ ಕೆಲಸ ಎಂದರೆ ಕನ್ನಡ ಶಾಲೆಗಳನ್ನು ಪ್ರಾರಂಭ ಮಾಡಿದ್ದು ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು ಬಡ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬುದೇ ಅವರ ಧ್ಯೇಯವಾಗಿತ್ತು ಅಂತಹ ಸಂದರ್ಭದಲ್ಲಿ ಅವರನ್ನು ಅಂದಿನ ಚಿತ್ರದುರ್ಗದ ಮಹಾಲಿಂಗ ಸ್ವಾಮಿಗಳು ಕರೆಸಿಕೊಂಡು ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭಿಸಲು ಅಂದಿನ ಕಾಲದಲ್ಲಿ  300 ರೂಪಾಯಿಗಳನ್ನು ಪ್ರತಿ ತಿಂಗಳು ಅಂದಿನ ಶ್ರೀಗಳು ನೀಡುತ್ತಿದ್ದರು ಹೀಗೆ 165 ವರ್ಷದ ಹಿಂದೆ ಮೊಟ್ಟಮೊದಲ ಪ್ರಸಾದ ನಿಲಯ ಬೆಳಗಾವಿಯ ಕೇಳಕರ ಬಾಗದಲ್ಲಿ 40 ವಿದ್ಯಾರ್ಥಿಗಳಿಂದ ಪ್ರಾರಂಭವಾಯಿತು ಹೀಗೆ ಮೊಟ್ಟಮೊದಲ ಉಚಿತ ಪ್ರಸಾದ ನಿಲಯ ಪ್ರಾರಂಭಕ್ಕೆ ಕಾರಣಕರ್ತರಾದ ಚನ್ನಬಸಪ್ಪ ಧಾರವಾಡ ಮತ್ತು ಅದಕ್ಕೆ ಆರ್ಥಿಕ ಸಹಾಯವನ್ನು ನೀಡಿದ ಚಿತ್ರದುರ್ಗದ ಶ್ರೀ ಮಹಾಲಿಂಗ ಸ್ವಾಮಿಗಳನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು. ಮುಂದೆ ಮಹಾಲಿಂಗ ಸ್ವಾಮಿಗಳು ಲಿಂಗೈಕ್ಯರಾದ ನಂತರ ಅವರಿಂದ ಬರುತ್ತಿದ್ದ ಆರ್ಥಿಕ ಸಹಾಯ ನಿಂತು ಹೋಯಿತು ಆಗ ಚೆನ್ನಬಸಪ್ಪನವರು ತಮ್ಮ ಬಂಗಾರವನ್ನೆಲ್ಲ ಮಾರಿ ಸಾಧ್ಯವಾದಷ್ಟು ದಿನ ಪ್ರಸಾದ ಮೇಲೆ ನಡೆಸಿದರು ಆದರದು ಬಹಳ ದಿನ ಸಾಗಲಿಲ್ಲ ಪ್ರಸಾದ ನಿಲಯ ಮುಚ್ಚಿಹೋಯಿತು. ಅದಾದ 75 ವರ್ಷಗಳ ನಂತರ ಕೆಎಲ್ಇ ಸಪ್ತರ್ಷಿಗಳು ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜನ್ನು ಪ್ರಾರಂಭ ಮಾಡುವ ಸಂದರ್ಭದಲ್ಲಿ ಅಲ್ಲಿ ಕಲಿಯುವ ಮಕ್ಕಳಿಗಾಗಿ ಪ್ರಸಾದ ನಿಲಯವನ್ನು ಪ್ರಾರಂಭಿಸುವಂತೆ 1932 ರಲ್ಲಿ ಡಾ. ಶಿವಬಸವ ಸ್ವಾಮಿಗಳನ್ನು ವಿನಂತಿಸಿ ಕೊಂಡಾಗ ಶ್ರೀಗಳು ಬೆಳಗಾವಿಯಲ್ಲಿ ಪ್ರಸಾದ ನಿಲಯವನ್ನು  ಪ್ರಾರಂಭ ಮಾಡಿದರು ತದನಂತರ ನಾಡಿನ ವಿವಿಧ ಮಠಗಳಲ್ಲಿ ಪ್ರಸಾದ ನಿಲಯಗಳು ಪ್ರಾರಂಭವಾದವು. ಇದಕ್ಕೆ ಮೂಲ ಕಾರಣಕರ್ತರಾದ ಚನ್ನಬಸಪ್ಪ ಧಾರವಾಡ ಅವರು ಬಹಳಷ್ಟು ಕನ್ನಡ ಶಾಲೆಗಳನ್ನು ಪ್ರಾರಂಭ ಮಾಡಿದರು ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮದೆಲ್ಲವನ್ನು ಧಾರೆ ಎರೆದವರು ಡೆಪುಟಿ ಹುದ್ದೆಯಲ್ಲಿದ್ದ ಅವರ ಮನೆತನದ ಹೆಸರು ಧಾರವಾಡ ಎಂಬುದನ್ನು ಜನ ಮರೆತೇ ಹೋಗುವಷ್ಟು ಅವರು ಡೆಪುಟಿ ಚೆನ್ನಬಸಪ್ಪ ಎಂದೆ ಜನಪ್ರಿಯರಾದರು. ಲಿಂಗೈಕ್ಯ ಡಾ ಶಿವಬಸವ ಸ್ವಾಮೀಜಿಯವರು ಪ್ರಾರಂಭಿಸಿದ ಉಚಿತ ಪ್ರಸಾದ ನಿಲಯಗಳು 75 ಪೂರೈಸಿದ ಸಂದರ್ಭದಲ್ಲಿ  ಅರ್ಥಪೂರ್ಣ ಸಮಾವೇಶವಾಯಿತು. ಹಳೆಯ ವಿದ್ಯಾರ್ಥಿಗಳ ಸಂಘದಿಂದ ಪ್ರತಿ ವರ್ಷ ಇಂಜಿನಿಯರಿಂಗ್ ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಗುತ್ತಿದೆ ಎಂದು ಡಾ.ತೋಂಟದ ಸಿದ್ದರಾಮ ಸ್ವಾಮೀಜಿಯವರು ಪ್ರಸಾದ ನಿಲಯಗಳ ಪ್ರಾರಂಭದ ಕುರಿತು ವಿವರಿಸಿದರು.
 ಅಥಣಿಯ ಮೋಟಗಿಮಠದ  ಶ್ರೀ. ಚನ್ನಬಸವ ಮಹಾಸ್ವಾಮಿಗಳವರು ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು  ತಾಂಬಾಳ- ಕಾಸರಶಿರಸಿ  ಷಣ್ಮುಖ ಶಿವಯೋಗಿಗಳ ಮಠದ ಶ್ರೀ.ವಿಜಯಕುಮಾರ ಮಹಾಸ್ವಾಮಿಗಳು ವಹಿಸಿದ್ದರು .ಸಮ್ಮುಖದಲ್ಲಿ ಅರಳಿಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶ್ರೀ.ಶಿವಮೂರ್ತಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಸಾನಿಧ್ಯದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾ ಸ್ವಾಮಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಿ ಹಂದಿಗುಂದದ ಶ್ರೀ ಶಿವಾನಂದ ಸ್ವಾಮೀಜಿಯವರು ಮತ್ತು ಶೇಗುಣಸಿಯ ಡಾ. ಮಹಾಂತ ಪ್ರಭು ಸ್ವಾಮೀಜಿಯವರು ಮತ್ತು ಹಲವಾರು ಮಠಗಳ ಶ್ರೀಗಳು ‌ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ. ಮಠದಿಂದ ಕೊಡ ಮಾಡಲಾಗುವ  “ಪ್ರಸಾದ ಶ್ರೀ ಗೌರವ ” ಪ್ರಶಸ್ತಿಯನ್ನು  ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳಾದ ಕೊಪ್ಪಳದ ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಶ್ರೀ. ಮಲಕಾರಿ ರಾಮಪ್ಪ  ಒಡೆಯರ ,  ಬೆಳಗಾವಿಯ ಹಿರಿಯ ಪತ್ರಕರ್ತ ಶ್ರೀ.ಮುರುಗೇಶ ಶಿವಪೂಜಿ ,  ಸಂಕೇಶ್ವರದ ಉಪನ್ಯಾಸಕ ಶ್ರೀ. ಬಿ.ಆರ್. ಮಜಗಿ  ಮತ್ತು ಬೆಳಗಾವಿಯ ಗುತ್ತಿಗೆದಾರ ಶ್ರೀ. ನಾನಾಗೌಡಾ ಬಿರಾದಾರ್ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿಯ ಡಾ.ಹೇಮಾವತಿ ಸೊನೋಳ್ಳಿ ವಿರಚಿತ ಆತ್ಮ ಚರಿತ್ರೆ “ಹೇಮಸಿರಿ” ಮತ್ತು ಬೆಳಗಾವಿಯ ಶ್ರೀಮತಿ. ಜ್ಯೋತಿ ಬದಾಮಿ ವೀರಚಿತ ” ಋಣಿ ” ಕವನ ಸಂಕಲನ ಗ್ರಂಥಗಳು ಲೋಕಾರ್ಪಣೆಗೊಳಿಸಲಾಯಿತು. ಪ್ರಾಧ್ಯಾಪಕ ಎ.ಕೆ. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ವಿಜ್ಞಾನ ಕೇಂದ್ರದ ನಿರ್ದೇಶಕ ರಾಜಶೇಖರ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಸಿ. ಸೋಮಶೇಖರ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಿಗಿಮಠ, ಡಾ.ರವಿ ಪಾಟೀಲ, ಭಾರತ್ ಸೇವಾದಳದ ವಿಶ್ರಾಂತ ದಳಪತಿ ಬಸವರಾಜ್ ಹಟ್ಟಿಗೌಡರ, ಜಾಗತಿಕ ಲಿಂಗಾಯಿತ ಮಹಾಸಭಾದ ಕಾರ್ಯದರ್ಶಿ ಅಶೋಕ ಮಳಗಲಿ  ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!