ಕೊಪ್ಪಳ ಜನವರಿ ೨೧ : ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಹೊಸ ಕುಂಟೋಜಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಜನವರಿ ೨೧ರಂದು ಬೆಳಗ್ಗೆ, ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣಕ್ಕೆ ಆಗಮಿಸುತ್ತಿದ್ದಂತೆ ಶಾಲಾ ವಿದ್ಯಾರ್ಥಿಗಳು ಸಾಲಾಗಿ ನಿಂತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನಮ್ ಮತ್ತು ಇನ್ನೀತರ ಅಧಿಕಾರಿಗಳಿಗೆ ಸ್ವಾಗತ ಕೋರಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯ ಪ್ರದರ್ಶನ ಮಳಿಗೆಗಳಿಗೆ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಕೃಷಿ ಇಲಾಖೆ, ಪಶುಪಾಲನೆ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳಿಗೆ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಮಾಹಿತಿ ಪಡೆದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಳಿಗೆಯಲ್ಲಿ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಮೊಟ್ಟೆ, ಹಾಲು, ಶೇಂಗಾಚಿಕ್ಕಿ, ಮೊಳಕೆಭರಿತ ಕಾಳು ಸೇರಿದಂತೆ ಆಹಾರ ಧಾನ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕೃಷಿ ಕೂಲಿಕಾರರಿಗೆ ಅನುಕೂಲವಾಗುವ ಹಲವಾರು ಮಾಹಿತಿಯ ಮೂಲಕ ಜಿಲ್ಲಾ ಪಂಚಾಯತ್‌ನ ನರೇಗಾ ಮಾಹಿತಿ ಕೇಂದ್ರವು ಗಮನ ಸೆಳೆಯಿತು.
ಮತದಾರ ದಿನಾಚರಣೆಗೆ ಚಾಲನೆ: ಮತದಾರರ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳು, ಗ್ರಾಮದ ಯುವ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಚಾಲನೆ ನೀಡಿದರು. ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕುಂಟೋಜಿಯ ಮುಖ್ಯಾಧ್ಯಾಪಕಾರದ ಅನ್ನದಾನಪ್ಪ ಪೂಜಾರ ಅವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಸಹ ಮಾನವ ಸರಪಳಿ ರಚಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮತದಾನದ ಬಗ್ಗೆ ಘೋಷಣೆ ವಾಚಿಸಿ ಅರಿವು ಮೂಡಿಸಿ ಗಮನ ಸೆಳೆದರು.
ಫಲಾನುಭವಿಗಳಿಗೆ ಸೌಲಭ್ಯ ವಿತರಣೆ: ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಅಂಗನವಾಡಿ ಮಕ್ಕಳಿಗೆ ಸುಕನ್ಯಾ ಸಮೃದ್ದಿ ಯೋಜನೆಯ ಪಾಸ್ ಬುಕ್‌ಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ೬ ಜನ ಫಲಾನುಭವಿಗಳಿಗೆ ಆಹಾರ ಇಲಾಖೆಯಿಂದ ಆದ್ಯತಾ ಪಡಿತರ ಚೀಟಿಗಳನ್ನು ಸಹ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಿಂದ ಪರೀಕ್ಷಾ ಪೂರ್ವ ತರಬೇತಿಗೆ ಅಯ್ಕೆಯಾದ ವಿದ್ಯಾರ್ಥಿಗೆ ಪ್ರವೇಶ ಪತ್ರ ನೀಡಲಾಯಿತು.
ಅಕ್ಷರ ದಾಸೋಹ ಕೇಂದ್ರಕ್ಕೆ ಚಾಲನೆ: ಇದೆ ವೇಳೆ ಜಿಲ್ಲಾಧಿಕಾರಿಗಳು, ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಅಡುಗೆ ಕೇಂದ್ರವಾದ ಅಕ್ಷರ ದಾಸೋಹ ಕೇಂದ್ರವನ್ನು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ಗ್ರಾಮ ಸಂಚಾರ: ಕಾರ್ಯಕ್ರಮದ ನಿಮಿತ್ತ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು, ಗ್ರಾಮ ಸಂಚಾರ ನಡೆಸಿದರು. ಮೊದಲಿಗೆ ಗ್ರಾಮದ ಅಂಗನವಾಡಿ ಕೇಂದ್ರ ೩ ಮತ್ತು ಕೇಂದ್ರ ೨ಕ್ಕೆ ಭೇಟಿ ನೀಡಿ, ಮಕ್ಳಳ ಕಲಿಕಾ ವಿಧಾನ, ಅವರಿಗೆ ನೀಡುವ ಆಹಾರ ಧಾನ್ಯಗಳ ಬಗ್ಗೆ ಮಾಹಿತಿ ಪಡೆದರು. ಅಂಗನವಾಡಿ ಕೇಂದ್ರ ೩ರಲ್ಲಿ ಬಾಲ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗನವಾಡಿ ಶಿಕ್ಷಕಿಯರಾದ ಕರಿಯಮ್ಮ, ರಾಜೇಶ್ವರಿ ಮತ್ತು ಅಡುಗೆ ಸಹಾಯಕರಾದ ಲೇಪಮ್ಮ, ರಾಜಮ್ಮ ಇದ್ದರು.
ನ್ಯಾಯಬೆಲೆ ಅಂಗಡಿಗೆ ಭೇಟಿ: ಇದೆ ವೇಳೆ ಜಿಲ್ಲಾಧಿಕಾರಿಗಳು ಗ್ರಾಮದ ನ್ಯಾಯ ಬೆಲೆ ಅಂಗಡಿ, ನಾಗರಿಕ ಸೇವಾ ಕೇಂದ್ರವಾದ ಗ್ರಾಮ್ ಒನ್ ಕೇಂದ್ರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಪರೇಟರ್ ಶರಣಪ್ಪ ಅವರು ಗ್ರಾಮ ಒನ್ ಕೇಂದ್ರದ ಸೇವೆಗಳ ಬಗ್ಗೆ ವಿವರಿಸಿದರು.
ಅರ್ಜಿ ಸಲ್ಲಿಸಲು ವ್ಯವಸ್ಥೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಅಧಾರ್ ನೋಂದಣಿಗೆ ತಾತ್ಕಾಲಿಕ ಕೇಂದ್ರ ತೆರೆಯಲಾಗಿತ್ತು. ಸಮಾರಂಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷರಾದ ಭಾಗ್ಯಶ್ರೀ, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಕಾರಟಗಿ ತಹಸೀಲ್ದಾರರಾದ ಎಂ.ಬಸವರಾಜ, ತಾಪಂ ಕಾರ್ಯನಿರ್ವಹಣಾಧಿಕಾರಿಗಳಾದ ನರಸಪ್ಪ, ಕಾರಟಗಿ ಇನ್ಸಪೆಕ್ಡರ್ ಸಿದ್ರಾಮಯ್ಯ ಬಿ.ಎಂ., ಕನಕಗಿರಿ ಸಿಡಿಪಿಓ ಶ್ವೇತಾ ಎಸ್., ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಬಸಪ್ಪ ಹಳ್ಳದ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣಪ್ಪ ಚವ್ಹಾಣ್, ಕನಕಗಿರಿಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿ.ಕೆ., ಕಾರ್ಯಕ್ರಮ ಅಧಿಕಾರಿಗಳಾದ ಸಿದ್ದಪ್ಪ ಕುರಿ, ಗಂಗಾವತಿಯ ರಾಷ್ಟ್ರೀಯ ಬಾಲಸ್ವಾಸ್ತ್ಯ ಕಾರ್ಯಕ್ರಮದ ವೈದ್ಯರು ಮತ್ತು ಸಿಬ್ದಂದಿ ಇದ್ದರು.
Gadi Kannadiga > State > ಹೊಸ ಕುಂಟೋಜಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ