ನಾವು ಮನುಷ್ಯರಾಗಿ ಬದುಕುವದನ್ನು ಕಲಿಸುವುದೇ ರಂಗಭೂಮಿ

Murugesh Shivapuji
ನಾವು ಮನುಷ್ಯರಾಗಿ ಬದುಕುವದನ್ನು ಕಲಿಸುವುದೇ ರಂಗಭೂಮಿ
WhatsApp Group Join Now

ಸವದತ್ತಿ: ನಾವು ಮನುಷ್ಯರಾಗಿ ಬದುಕುವದನ್ನು ಕಲಿಸುವುದೇ ರಂಗಭೂಮಿ. ಇದರ ಮೂಲಕ ಮೊದಲು ನಮ್ಮನ್ನು ನಾವು ಅರ್ಥಮಾಡಿಕೊಳ್ಳುವದನ್ನು ಕಲಿಯುತ್ತೇವೆ. ಇದು ನಮಗೆ ದೊಡ್ಡ ಆಧ್ಯಾತ್ಮವಾಗಿದೆ ಎಂದು ಕರ್ನಾಟಕ ನಾಟಕ ಅಕಾದೆಮಿಯ ರಾಜ್ಯ ಸಮಿತಿಯ ಸದಸ್ಯರಾದ ಶ್ರೀ ಬಾಬಾಸಾಹೇಬ ಕಾಂಬಳೆ ಹೇಳಿದರು..
ಇಲ್ಲಿನ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ, ಕರ್ನಾಟಕ ನಾಟಕ ಅಕಾದೆಮಿ ಬೆಂಗಳೂರು, ಸಕ್ರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಧಾರವಾಡ ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿಯ ಸಹಯೋಗದಲ್ಲಿ ಆಧುನಿಕ ಕನ್ನಡ ರಂಗಭೂಮಿಯ ದಿನಾಚರಣೆ, ಝಾಕೀರ ನದಾಫ ಅವರ ಎರಡು ನಾಟಕಗಳ ಲೋಕಾರ್ಪಣೆ ಮತ್ತು ಕಾಲೇಜು ನಾಟಕ ರಂಗ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಪ್ರಾಚಾರ್ಯ, ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಓದು, ಬರಹ, ಸಾಂಸ್ಕೃತಿಕ ಚಟುವಟಿಕೆಗಳು ಬೇಡವಾಗಿರುವ ಕಾಲದಲ್ಲಿ ನಾವಿದ್ದೇವೆ. ಕಲೆ, ಸಾಹಿತ್ಯ, ಸಂಗೀತ ಮತ್ತು ಲಲಿತ ಕಲೆಗಳು ಅಜ್ಞಾನದಲ್ಲಿರುವ ಮನುಷ್ಯನನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುತ್ತವೆ.
ಸರ್ವ ಕಲೆಗಳ ಸಂಗಮವೇ ರಂಗಭೂಮಿ. ಇದು ಬತ್ತಿ ಹೋಗುತ್ತಿರುವ ಮಾನವೀಯತೆಯ ಗುಣವನ್ನು ನಮ್ಮಲ್ಲಿ ಬೆಳೆಸುತ್ತದೆ. ಕಲಾವಿದನನ್ನು ಅಜರಾಮರನನ್ನಾಗಿ ಮಾಡುತ್ತದೆ. ಮನುಷ್ಯನನ್ನು ಸಮಾಜಮುಖಿಯಾಗಿ ಬದುಕಲು ಕಲಿಸುತ್ತದೆ. ಅದಕ್ಕಾಗಿಯೇ ನಾಟಕವನ್ನು ಪಂಚಮವೇದ ಎಂದು ಕರೆದಿದ್ದಾರೆ.
ಗಾಂಧೀಜಿಯವರು ಬಾಲ್ಯಕಾಲದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ನೋಡದೇ ಇದ್ದರೆ ಅವರಿಗೆ ಸತ್ಯದ ಕುರಿತು ಚಿಂತನೆ ಮಾಡಲು ಸಾಧ್ಯವಾಗುತ್ತಿರಲಿಲ್ಲವೇನೋ? ಆನಂತರದಲ್ಲಿ ಅವರು ನನ್ನ ಸತ್ಯಾನ್ವೇಷಣೆ ಎನ್ನುವ ಪುಸ್ತಕ ರಚಿಸಲು ಸಾಧ್ಯವಾಗಿದ್ದು ಸತ್ಯಹರಿಶ್ಚಂದ್ರ ನಾಟಕವನ್ನು ನೋಡಿದ ಮೇಲೆ ಎಂದು ಗಾಂಧೀಜಿಯ ಅನುಭವದ ವಿಚಾರಗಳನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ.ಎನ್.ಎ.ಕೌಜಗೇರಿ ವಹಿಸಿದ್ದರು, ಯಲ್ಲವ್ವ ಪಟ್ಟದಕಲ್ಲು ಮತ್ತು ಸಂಗಡಿಗರು ಪ್ರಾರ್ಥಿಸಿದರು, ಪ್ರೊ.ಕೆ.ರಾಮರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕುಮಾರಿ.ಸಹನಾ ಬಾರ್ಕಿ ಅತಿಥಿಗಳನ್ನು ಪರಿಚಯಿಸಿದರು, ಈ ವೇಳೆ ಶಿಬಿರದ ನಿರ್ದೇಶಕರಾದ ಕಲ್ಲಪ್ಪ ಪೂಜೇರ ಅವರಿಗೆ ಗೌರವಿಸಲಾಯಿತು, ಈ ಸಂದರ್ಭದಲ್ಲಿ ಝಾಕೀರ ನದಾಫ ಅವರ ದೇವಸೂರ ಮತ್ತು ಹುಚ್ಚರ ಕನಸು ಎರಡು ನಾಟಕಗ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.ಈ ವೇಳೆ ರಾಜಶೇಖರ ನಿಡವಣಿ, ಚಂದ್ರಶೇಖರ್ ಪಠಾಣಿ, ಝಾಕೀರ ನದಾಫ ಮತ್ತು ಡಾ. ಅರುಂಧತಿ ಬದಾಮಿ ಉಪಸ್ಥಿತರಿದ್ದರು. ವಚನಾ ಬಸಿಡೋಣಿ ನಿರೂಪಿಸಿದರು, ಶಿವಾನಂದ ತಾರಿಹಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

WhatsApp Group Join Now
Telegram Group Join Now
Share This Article
error: Content is protected !!