This is the title of the web page
This is the title of the web page

Please assign a menu to the primary menu location under menu

State

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಇಂದಿನ ಯುವ ಪೀಳಿಗೆ ಸ್ಮರಿಸಿಕೊಳ್ಳಬೇಕು


ಖಾನಾಪುರ: ಸ್ವಾತಂತ್ರ್ಯ ಹೋರಾಟಗಾರರ ಜೀವನ ಆದರ್ಶ ಮಯವಾದದ್ದು,ಹೇಗಾದರೂ ಮಾಡಿ ಬ್ರಿಟಿಷರ ದಾಸ್ಯತ್ವದಿಂದ ಮುಕ್ತರಾಗಬೇಕೆಂದು ಅಂದು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಇಂದಿನ ಯುವ ಪೀಳಿಗೆ ಸ್ಮರಿಸಿಕೊಳ್ಳಬೇಕು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕೆಂದು ಎಸ್ ಎಸ್ ಶಾಸ್ತ್ರಿ ತಿಳಿಸಿದರು.

ಖಾನಾಪುರ ತಾಲೂಕಿನ ಇಟಗಿಯ ಸಂಭ್ರಮ ಫೌಂಡೇಶನ್ ಹಾಗೂ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಇಟಗಿ ಸಹಯೋಗದಲ್ಲಿ ‘ಬೆಳ್ಳಿ ಚುಕ್ಕಿ’ ವಿಶೇಷ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಅಂಗವಾಗಿ “ಸ್ವಾತಂತ್ರ್ಯ ಹೋರಾಟದಲ್ಲಿ ನಂದಗಡದ ಬಸಪ್ಪಣ್ಣ ಅರಗಾಂವಿ” ಅವರ ಪಾತ್ರದ ಕುರಿತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತ, ಗಾಂಧೀಜಿ ಅವರು ನಡೆಸಿದ ಉಪ್ಪಿನ ಸತ್ಯಾಗ್ರಹ, ಚಲೇಜಾವ ಚಳುವಳಿಗಳಂತೆ ದಿ. ಬಸಪ್ಪಣ್ಣ ಅರಗಾಂವಿಯವರು ಕೂಡಾ ನಂದಗಡದ ವ್ಯಾಪ್ತಿಯಲ್ಲಿ ತಮ್ಮದೇ ಆದ ವಿಶಿಷ್ಟ ಹೋರಾಟದ ಮೂಲಕ ಬ್ರಿಟಿಷರಿಗೆ ಪ್ರತಿರೋಧವನ್ನು ತೋರಿ, ಭಾರತ ಸ್ವಾತಂತ್ರ್ಯ ಗಳಿಸಲು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆಂದು ಸ್ಮರಿಸಿಕೊಂಡರು.

ಉಪನ್ಯಾಸಕರಾಗಿ ಆಗಮಿಸಿದ್ದ ವಿಜಯ ಪೂಜಾರ ಸಹಾಯಕ ಪ್ರಾಧ್ಯಾಪಕರು, ಕೆಎಲ್ಇ ಪದವಿ ಕಾಲೇಜು ಖಾನಾಪುರ ಇವರು, ದಿವಂಗತ ಬಸಪ್ಪಣ್ಣ ಅರಗಾಂವಿ ಅವರು ಹುಟ್ಟಿನಿಂದಲೇ ಸ್ವಾತಂತ್ರ್ಯದ ಕಿಚ್ಚನ್ನು ಮೈಗೂಡಿಸಿಕೊಂಡು ಬೆಳೆದವರು, ಕೆಲವೊಂದು ಜನರ ಗುಂಪು ಕಟ್ಟಿಕೊಂಡು, ಪ್ರತಿರೋಧವನ್ನು ತೋರುತ್ತಾ ಅಂದಿನ ಬ್ರಿಟಿಷ್ ಆಡಳಿತಕ್ಕೆ ತಲೆ ನೋವಾಗಿದ್ದರು. ಇಟಗಿಯ ದಿ.ಬಿ ಎಮ್ ಸಾಣಿಕೊಪ್ಪ ಹಾಗೂ ಅರಗಾಂವಿ ಅವರು ಸೇರಿಕೊಂಡು, ನಾಡಿನ ತುಂಬೆಲ್ಲ ಸ್ವಾತಂತ್ರ್ಯ ಪಡೆಯುವುದಕ್ಕೆ ಜನರನ್ನು ಹುರಿದುಂಬಿಸುತ್ತ, ಊರಿಂದೂರಿಗೆ ಅಲೆದಾಡುತ್ತಾ, ಹೋರಾಟದ ಜೀವನ ಮಾಡಿದಂತವರು. ಸ್ವಾತಂತ್ರ್ಯ ನಂತರವೂ ಕೂಡ ಅವರು ಕನ್ನಡ ಭಾಷೆಯ ಉಳಿವಿಗೆ,ಬೆಳವಣಿಗೆಗೆ ಶ್ರಮಿಸಿದಂತವರು. ದಿ. ಬಸಪ್ಪಣ್ಣ ಅರಗಾವಿ ಅವರ ಬಾಲ್ಯ,ಜನಪರ ಕಾರ್ಯಗಳು, ವ್ಯಾಪಾರ ವಹಿವಾಟು ಮುಂತಾದವುಗಳನ್ನು ಸ್ಮರಿಸಿಕೊಳ್ಳುತ್ತ, ಅಂದಿನ ಜೀವನಕ್ಕೂ ಇಂದಿನ ಜೀವನಕ್ಕೂ ವ್ಯತ್ಯಾಸ ತಿಳಿಸುತ್ತ,ಯುವ ಪೀಳಿಗೆಗೆ ಮಾದರಿಯಾಗುವಂತಹ ವ್ಯಕ್ತಿಯ ಚಿತ್ರಣವನ್ನು ಉಪನ್ಯಾಸದ ಮೂಲಕ ಬಿಚ್ಚಿಟ್ಟರು.

ಅತಿಥಿಗಳಾಗಿ ಆಗಮಿಸಿದ್ದ ನಂದಗಡದ ಬಸಪ್ಪಣ್ಣ ಅರಗಾವಿ ಅವರ ಸುಪುತ್ರ ಚಂದ್ರಕಾಂತ ವಾಲಿಯವರು ಮಾತನಾಡುತ್ತಾ, ತಮ್ಮ ತಂದೆಯವರಿಂದ ತಾವು ಸಾಕಷ್ಟು ಪಾಠವನ್ನು ಕಲಿತಿದ್ದೇವೆ. ಇಂದಿಗೂ ಕೂಡ ಅವರ ಆದರ್ಶಮಯ ಜೀವನವನ್ನು ಪಾಲಿಸಿಕೊಂಡು ಬಂದಿರುತ್ತೇವೆ. ಅವರು ಹಾಕಿಕೊಟ್ಟ ಸರಳ ಆದರ್ಶಮಯ ಮಾರ್ಗ ನಮ್ಮನ್ನು ಇಂದಿಗೂ ಪ್ರಗತಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದೆ. ತಂದೆಯವರನ್ನು ಚಿಕ್ಕಂದಿನಿಂದಲೂ ಗಮನಿಸುತ್ತಾ ಬಂದಿದ್ದು, ಅವರ ಸ್ವಾತಂತ್ರ್ಯ ಹೋರಾಟದ ಚಿತ್ರಣ ಈಗಲೂ ನನ್ನ ಕಣ್ಣಮುಂದಿದೆ, ಸಂಭ್ರಮ ಫೌಂಡೇಶನ್ ಇಟಗಿ ಹಾಗೂ ಜನತಾ ಶಿಕ್ಷಣ ಪ್ರಸಾರ ಸಮಿತಿ ಇಟಗಿಯ ಸಹಯೋಗಾರ್ಥ ಕಾರ್ಯಕ್ರಮ ಪ್ರಶಂಸನೀಯ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಕಿರಣ ಕಲ್ಲಪ್ಪ ಗಣಾಚಾರಿ ಅಧ್ಯಕ್ಷರು ಸಂಭ್ರಮ ಫೌಂಡೇಶನ್ ಇಟಗಿ ಮಾತನಾಡುತ್ತಾ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಎಲೆಮರೆಯ ಕಾಯಿಯಂತಹ ಹೋರಾಟಗಾರರು ಇನ್ನೂ ಇದ್ದಾರೆ,ಅಂತಹ ಹೋರಾಟಗಾರರನ್ನು ಹುಡುಕಿ, ಅವರ ಕಥೆಯನ್ನು ಪುಸ್ತಕ ರೂಪದಲ್ಲಿ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ತಮ್ಮ ನೆರೆಹೊರೆಯ, ಅಕ್ಕಪಕ್ಕದ ಊರುಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಮಹನೀಯರನ್ನು ಗುರುತಿಸಿ ಅವರ ಬಗ್ಗೆ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಇಂದಿನ ವಿದ್ಯಾರ್ಥಿಗಳು,ಯುವ ಪೀಳಿಗೆ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಪ್ರಸಾರ ಸಮಿತಿ ಇಟಗಿಯ ಚೇರ್ಮನರಾದ ವಿಜಯ ಬಿ ಸಾಣಿಕೊಪ್ಪ ಹಾಗೂ ಆರ್ ಬಿ ಹುನಶೀಕಟ್ಟಿ ಪ್ರಾಚಾರ್ಯರು, ಬಿ ಎಂ ಸಾಣಿಕೊಪ್ಪ ಪದವಿ ಕಾಲೇಜು ಇಟಗಿ ಮತ್ತು ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದ ಜನತಾ ಶಿಕ್ಷಣ ಪ್ರಸಾರ ಸಮಿತಿ ಇಟಗಿಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಚರಾಸ್ಮಾ ಸಂಪಪೂ ಕಾಲೇಜು ಮತ್ತು ಬಿ ಎಂ ಎಸ್ ಪದವಿ ಕಾಲೇಜಿನ ಉಪನ್ಯಾಸಕರು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಹಾಜರಿದ್ದರು.ಪದವಿಪೂರ್ವ
ಕಾಲೇಜಿನ ವಿದ್ಯಾರ್ಥಿನಿಯರಾದ ಸೋನಿಯಾ ಇಂಚಲ,ರೂಪಾ ಸೋನಪ್ಪನವರ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿನಿಯರಾದ ಶ್ರೀದೇವಿ ಅಲ್ಲಯ್ಯನವರ ಮತ್ತು ಪವಿತ್ರಾ ಮಡ್ಡೀಮನಿ ಅವರು ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಭಾಷಣ ಮಾಡಿದರು.

ಶಂಕರ್ ವಿ ಗಣಾಚಾರಿ ನಿರ್ದೇಶಕರು ಜೆ ಎಸ್ ಪಿ ಎಸ್ ಇಟಗಿ ಸ್ವಾಗತಿಸಿದರು. ಬಸವರಾಜ್ ಸವದಿ ಪ್ರಾಧ್ಯಾಪಕರು ವಂದಿಸಿದರು. ಈಶ್ವರ ಆರ್ ಕರಮಳ್ಳವರ ಉಪನ್ಯಾಸಕರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.


Gadi Kannadiga

Leave a Reply