ಕೊಪ್ಪಳ ಡಿಸೆಂಬರ್ ೧೩ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಯಲಬುರ್ಗಾ ಹಾಗೂ ಪ್ರಾ.ಆ.ಕೇಂದ್ರ ಬೇವೂರು ಇವರ ಸಂಯುಕ್ತಾಶ್ರಯದಲ್ಲಿ ಡಿ.೦೯ ರಂದು ಮಂಡಲಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷಯ ಮುಕ್ತ ಶಾಲೆ ಎಂಬ ವಿನೂತನ ಕಾರ್ಯಕ್ರಮ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ೨೦೨೫ನೇ ಇಸವಿ ವೇಳೆಗೆ ಕ್ಷಯ ಮುಕ್ತ ಭಾರತ ದೇಶವನ್ನಾಗಿ ಮಾಡಬೇಕು ಎಂಬುದು ಪ್ರಧಾನ ಮಂತ್ರಿಯವರ ಕನಸಾಗಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆಯಿಂದ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಮೂಲಕ ಕ್ಷಯರೋಗದ ಬಗ್ಗೆ ಸಾರ್ವಜನಿಕರಿಗೆ/ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಕ್ಷಯರೋಗವು ಮೈಕೋ ಬ್ಯಾಕ್ಟೀರಿಯಾ ಟ್ಯೂಬರ್ ಕ್ಯೂಲೋಸಿಸ್ ಎಂಬ ರೋಗಾಣುವಿನಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಇದು ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯಲ್ಲಿ ಸೇರಿಕೊಂಡು ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಮದ್ಯಪಾನ ಸೇವನೆ ಮಾಡುವವರು, ಧೂಮಪಾನ ವ್ಯಸನಿಗಳು ಈ ರೋಗಕ್ಕೆ ಬೇಗನೇ ತುತ್ತಾಗುತ್ತಾರೆ ಎಚಿಧು ಹೇಳಿದರು.
ಎರಡು ವಾರಗಳಿಂದ ಸತತ ಕೆಮ್ಮು, ಕಫ ಬರುವುದು, ಕಫದಲ್ಲಿ ರಕ್ತ ಬೀಳುವುದು, ಹಸಿವು ಆಗದೇ ಇರುವುದು, ತೂಕ ಕಡಿಮೆಯಾಗುವುದು, ಸಾಯಂಕಾಲ ವೇಳೆ ಜ್ವರ ಬರುವುದು, ಕಿವಿ ಹಿಂದುಗಡೆ ಹಾಗೂ ಕಂಕುಳಗಳಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು ಕ್ಷಯರೋಗದ ಲಕ್ಷಣವಾಗಿದ್ದು, ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಉಚಿತ ಕಫ ಪರೀಕ್ಷೆ ಮಾಡಿಸಬೇಕು. ಖಚಿತ ಪಟ್ಟರೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಉಪಕೇಂದ್ರಗಳಲ್ಲಿ ೬-೮ ತಿಂಗಳ ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಹಾಗೂ ನಿಕ್ಷಯ ಯೋಜನೆಯಡಿಯಲ್ಲಿ ಪ್ರತಿ ರೋಗಿಗಳಿಗೆ ಪೌಷ್ಠಿಕ ಆಹಾರ ಸೇವಿಸಲು ಪ್ರತಿ ತಿಂಗಳು ಅವರ ಖಾತೆಗೆ ರೂ.೫೦೦/- ಜಮೆ ಮಾಡಲಾಗುತ್ತದೆ. ಹಾಗೂ ಅವರ ಮನೆಗೆ ಆಶಾ ಮತ್ತು ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಅನುಸರಣೆ ಮಾಡುವರು. ಮಕ್ಕಳು ದೇಶದ ಸಂಪತ್ತು ಅವರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಹಾಗೂ ವಸತಿನಿಲಯ, ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ, ಕ್ಷಯರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸುತ್ತಿದ್ದಾರೆ. ೨೦೨೫ಕ್ಕೆ ಕ್ಷಯ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಬೇಕಾಗಿದೆ. ಇದಕ್ಕೆ ಎಲ್ಲಾ ಸಂಘ-ಸಂಸ್ಥೆಗಳು ಕೈಜೋಡಿಸಿ ಸಹರಿಸುವಂತೆ ಮನವಿ ಮಾಡಿದರು.
ಹಿ.ಆ.ನಿ.ಅಧಿಕಾರಿ ಮಾಹಾದಯ್ಯ ಅವರು ಮಾತನಾಡಿ, ಸೊಳ್ಳೆಯಿಂದ ಹರಡುವ ಖಾಯಿಲೆಗಳಾದ ಡೆಂಗ್ಯೂ, ಚಿಕನ್‌ಗೂನ್ಯ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗಗಳ ಲಕ್ಷಣಗಳು, ನಿಯಂತ್ರಣ ಹಾಗೂ ಮುಂಜಾಗೃತ ಕ್ರಮಗಳ ಕುರಿತು ವಿವರಗಳನ್ನು ತಿಳಿಸಿದರು.
ಎನ್.ವಿ.ಬಿ.ಡಿ.ಸಿ.ಪಿ ಮೇಲ್ವಿಚಾರಕರಾದ ಇಂಮ್ತಿಯಾಜ್ ಅವರು ಸೊಳ್ಳೆಯ ಜೀವನಚಕ್ರ, ಪೌಷ್ಠಿಕ ಆಹಾರ, ಕೈತೊಳೆಯುವ ವಿಧಾನಗಳ ಬಗ್ಗೆ ಹಾಗೂ ಇತರೆ ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವಿವರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳಾದ ಸೋಮಶೇಖರಯ್ಯ, ಸಹ-ಶಿಕ್ಷಕರು, ಆಶಾ ಸುಗಮಕಾರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Gadi Kannadiga > Local News > ಕ್ಷಯ ಮುಕ್ತ ಶಾಲೆ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿ