ಬೆಳಗಾವಿ : ಟಿಪ್ಪರ್ ಬೈಕ್ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಹಿಡಲಗಿ ಗ್ರಾಮದ ಪ್ರವೀಣ್ ಕೋಲಕಾರ (27) ಮತ್ತು ಐಶ್ವರ್ಯ ನರಸನ್ನವರ(20) ಮೃತರು. ಪಾರಿಶ್ವಾಡ್ ಗ್ರಾಮದ ಸಂತೋಷ ಪಾಟೀಲ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರವೀಣ್, ನರಸನ್ನವರ ಹಾಗೂ ಸಂತೋಷ ಅವರು ಬೈಕ್ನಲ್ಲಿ ನಂದಗಡದಿಂದ ಖಾನಾಪುರಕ್ಕೆ ಬರುತ್ತಿದ್ದ ವೇಳೆ ಟಿಪ್ಪರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರು. ಟಿಪ್ಪರ್ ಗುದ್ದಿದ ಹೊಡೆತಕ್ಕೆ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ ಮತ್ತೊಬ್ಬರು ಗಾಯಗೊಂಡರು.
ಮೃತದೇಹಗಳನ್ನು ಖಾನಾಪುರ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.