ಬೆಳಗಾವಿ: ಇವರ ಬಳಿ ರೇಷನ್ ಕಾರ್ಡ್ ಇಲ್ಲ ಅಥವಾ ಸರಕಾರದ ಯಾವುದೇ ಸಹಾಯವಿಲ್ಲ, ಆದರೆ ಗಂಡು ಸಂತಾನದ ಅಪೇಕ್ಷೆಯಿಂದ ಆರು ಮಕ್ಕಳಿಗೆ ಜನ್ಮವಿತ್ತು ತಮ್ಮಹೊಟ್ಟೆ ಹೊರೆದುಕೊಳ್ಳಲಾರದೆ ಒದ್ದಾಡುತ್ತಿರುವ ಕುಟುಂಬ.ಒಂದೆರಡು ಹೊತ್ತು ಊಟ ದೊರೆತರೆ ಇನ್ನೊಂದು ಹೊತ್ತು ಉಪವಾಸವೇ ಗತಿ.ತಂದೆಗೆ ಯಾವಾಗಲೋ ಕೆಲಸ ಸಿಕ್ಕಿದರೂ ದುಡಿದ ಹಣವೆಲ್ಲ ಕುಡಿತಕ್ಕೆ ಮೀಸಲು.
ಮಕ್ಕಳಿಗೆ ಬಟ್ಟೆಬರೆಯಾಗಲಿ ಮಲಗಲು ಹಾಸಿಗೆ ಹೊದಿಕೆಯಾಗಲಿ ಯಾವುದೇ ವ್ಯವಸ್ಥೆಯಿಲ್ಲ.ಇಂತಹ ಒಂದು ಬಡ ಕುಟುಂಬ ಕಾಕತಿ ತಾಲೂಕಿನ ಲಕ್ಷ್ಮಿ ನಗರದಲ್ಲಿದ್ದು10×10 ವಿಸ್ತೀರ್ಣದ ಶೆಡ್ ಒಂದರಲ್ಲಿ ದಿನಕಳೆಯುತ್ತಿದ್ದಾರೆ.ಈ ಮಾಹಿತಿಯು 1098 ಚೈಲ್ಡ್ ಹೆಲ್ಪ್ ಲೈನ್ ನ ಶ್ರೀಮತಿ ಲೀಲಾವತಿ ಹಿರೇಮಠ ಅವರಿಂದ ದೊರೆತಿದ್ದು ಸದಾ ಅನಾಥ ಮಕ್ಕಳಿಗಾಗಿ ಸಹಾಯ ಹಸ್ತವನ್ನು ಚಾಚುವ ವೇದಾಂತ ಫೌಂಡೇಶನ್ ನ ಅಧ್ಯಕ್ಷ ಶ್ರೀ ಸತೀಶ್ ಪಾಟಿಲ್, ಫೌಂಡೇಷನ್ ನ ಸಂಚಾಲಕರಾದ ಶ್ರೀ, ಆರ್.ಡಿ.ಪಾಠಕ್, ಹಾಗೂ ಗ್ರಾಮೀಣ ಬಿ.ಈ.ಓ.ಆಫೀಸಿನ ಮ್ಯಾನೇಜರ್ ಶ್ರೀ ಬಾಳೆಕುಂದ್ರಿ ಯವರು ಈ ಕುಟುಂಬದ ನೆರವಿಗಾಗಿ ಧಾವಿಸಿದರು.ಶ್ರೀ ಆರ್.ಡಿ.ಪಾಠಕ್ ರವರು 2 ತಿಂಗಳಿಗಾಗುವ ರೇಷನ್ ನೀಡಿದರೆ, ಶ್ರೀ ಉಮೇಶ ಬಾಳೆಕುಂದ್ರಿಯವರು ಮಕ್ಕಳ ತಾಯಿಗೆ ಸೀರೆಗಳು ಹಾಗೂ ಬ್ಲ್ಯಾಂಕೇಟ್ ಗಳನ್ನು ನೀಡಿದರು.ಶ್ರೀ ಸತೀಶ ಪಾಟೀಲ್ ರವರು ಮಕ್ಕಳಿಗೆ ತಿಂಡಿತಿನಿಸುಗಳನ್ನು ನೀಡಿದರು.ಈ ಸಂದರ್ಭದಲ್ಲಿ ಶ್ರೀ ಬಾಳೆಕುಂದ್ರಿಯವರು ಕುಟುಂಬದಲ್ಲಿ ಹೆಚ್ಚು ಮಕ್ಕಳಿದ್ದು ಅವರು ಪಡುತ್ತಿರುವ ತೊಂದರೆಗಳ ಬಗ್ಗೆ ಕಿವಿಮಾತು ಹೇಳಿದರು.ಪಾಲಕರು ತಮ್ಮ ತಪ್ಪನ್ನು ಒಪ್ಪಿಕೊಂಡರು.ಪಾಲಕರ ಒಪ್ಪಿಗೆ ಮೇರೆಗೆ ಈ ಕುಟುಂಬದ ಇಬ್ಬರು ಹೆಣ್ಣು ಮಕ್ಕಳನ್ನು ತಿಲಕವಾಡಿಯ ಒಂದು ಆಶ್ರಮಕ್ಕೆ ಸೇರಿಸುವ ನಿರ್ಧಾರ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ವೇದಾಂತ ಫೌಂಡೇಶನ್ ನ ಉಪಾಧ್ಯಕ್ಷ ಶ್ರೀ ಸುನಿಲ್ ದೇಸುರಕರ, ಶ್ರೀ ಎನ್. ಡಿ.ಮಾದರ್ ಮತ್ತಿತರರು ಉಪಸ್ಥಿತರಿದ್ದರು. ಸಮಾಜದ ಇತರ ವ್ಯಕ್ತಿಗಳು ಮುಂದೆ ಬಂದು ಈ ಕುಟುಂಬಕ್ಕೆ ಬಿ.ಪಿ.ಎಲ್.ಕಾರ್ಡ್, ಕುಟುಂಬದ ಯಜಮಾನನಿಗೆ ಯಾವುದಾದರೂ ಕೆಲಸ ಕೊಡಿಸಬೇಕೆಂಬ ಬೇಡಿಕೆ ವೇದಾಂತ ಫೌಂಡೇಶನ್ ನದು.