ಕೊಪ್ಪಳ ನವೆಂಬರ್ ೨೬ : ಕರ್ನಾಟಕ ನೀತಿ ಆಯೋಗದಿಂದ ಶೈಕ್ಷಣಿಕ ಅಭಿವೃದ್ಧಿ ಸೂಚ್ಯಂಕಗಳ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನವೆಂಬರ್ ೨೫ರಂದು ವಿಡಿಯೋ ಕಾನ್ಫೆರೆನ್ಸ್ ಜರುಗಿತು.
ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನಮ್ ಅವರು ವಿಡಿಯೊ ಸಂವಾದದಲ್ಲಿ ಭಾಗವಹಿಸಿ, ಕೊಪ್ಪಳ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ತೆಗೆದುಕೊಂಡ ಕ್ರಮಗಳು ಮತ್ತು ಶೈಕ್ಷಣಿಕ ಸುಧಾರಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಮಾಹಿತಿ ಮಂಡನೆ ಮಾಡಿದರು. ಇದಕ್ಕೆ
ಮುಖ್ಯ ಕಾರ್ಯದರ್ಶಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನೀತಿ ಆಯೋಗವು ಶೈಕ್ಷಣಿಕ ಸುಧಾರಣಾ ಕ್ರಮಗಳಿಗಾಗಿ ೮ ಸೂಚ್ಯಂಕಗಳನ್ನು ಅಭಿವೃದ್ಧಿ ಪಡಿಸಿದ್ದು, ಅವುಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಸುಧಾರಣೆ, ಮೂಲ ಶಿಕ್ಷಣದ ಸುಧಾರಣೆ, ಶಾಲಾ ದಾಖಲಾತಿಯನ್ನು ಹೆಚ್ಚಿಸುವ ಕ್ರಮಗಳು, ಶಾಲೆಗಳ ಡಿಜಿಟಲೀಕರಣ ಮತ್ತು ಇಂಟರ್ನೆಟ್ ಸೌಲಭ್ಯ ಸುಧಾರಣೆ, ಹೆಣ್ಣು ಮಕ್ಕಳು ಶಾಲೆಯಲ್ಲಿ ಹಾಜರಾತಿಯನ್ನು ಹೆಚ್ಚಿಸುವುದು, ಗಣಿತ ಮತ್ತು ಭಾಷ ಶಿಕ್ಷಣದ ಸುಧಾರಣೆ ಮತ್ತು ವೃತ್ತಿ ಶಿಕ್ಷಣವನ್ನು ಒದಗಿಸಲು ಕ್ರಮ ಕೈಗೊಳ್ಳುವ ಬಗ್ಗೆ ವಿವರ ಇರುತ್ತದೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯವನ್ನು ಶೈಕ್ಷಣಿಕ ಸುಧಾರಣೆಗೆ ಮಾರ್ಗದರ್ಶಿ ರಾಜ್ಯವಾಗಿ ನೀತಿ ಆಯೋಗವು ಗುರುತಿಸಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೈಗೊಂಡ ಕ್ರಮಗಳು ಮತ್ತು ಸೂಚ್ಯಂಕಗಳನ್ನು ಸಾಧಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಭೆಯಲ್ಲಿ ಮಾಹಿತಿಯನ್ನು ಮಂಡಿಸಲಾಯಿತು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನೀತಿ ಆಯೋಗದ ಪ್ರತಿನಿಧಿಗಳು, ಆಯ್ದ ರಾಜ್ಯಗಳ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಯುನಿಸೆಫ್ ಹಾಗೂ ಅಭಿವೃದ್ಧಿ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನ್ ಅತ್ತಾರ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ರಡ್ಡೇರ್ ಮತ್ತು ಯುನಿಸೆಫ್ನ ಜಿಲ್ಲಾ ಕರ್ಯಕ್ರಮ ವ್ಯವಸ್ಥಾಪಕರಾದ ಹರೀಶ್ ಜೋಗಿ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
Gadi Kannadiga > State > ಶೈಕ್ಷಣಿಕ ಅಭಿವೃದ್ಧಿ ಸೂಚ್ಯಂಕಗಳ ಕುರಿತ ನೀತಿ ಆಯೋಗದಿಂದ ವಿಡಿಯೋ ಕಾನ್ಫರೆನ್ಸ್ ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಸುಧಾರಣಾ ಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಮೆಚ್ಚುಗೆ
ಶೈಕ್ಷಣಿಕ ಅಭಿವೃದ್ಧಿ ಸೂಚ್ಯಂಕಗಳ ಕುರಿತ ನೀತಿ ಆಯೋಗದಿಂದ ವಿಡಿಯೋ ಕಾನ್ಫರೆನ್ಸ್ ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಸುಧಾರಣಾ ಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಮೆಚ್ಚುಗೆ
Suresh26/11/2022
posted on