ಗದಗ ಜನೆವರಿ ೨೦ : ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಮತ್ತು ಆಯಾ ತಾಲೂಕುಗಳ ತಹಶೀಲ್ದಾರರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಸಲಿದ್ದಾರೆ.
ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷವಾಕ್ಯದೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ. ಅವರು ಜನೆವರಿ ೨೧ ರಂದು ನಡೆಸುವರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರುವರು.
ಜನೆವರಿ ೨೧ ರಂದು ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಆಯಾ ತಹಶೀಲ್ದಾರರು ಆಯ್ದ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲಿದ್ದು ವಿವರ ಇಂತಿದೆ: ಗದಗ ತಾಲೂಕಿನ ಶ್ಯಾಗೋಟಿಯಲ್ಲಿ ಕಿಶನ್ ಕಲಾಲ, ನರಗುಂದ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಅಮರವಾಡಗಿ, ಗಜೇಂದ್ರಗಡ ತಾಲೂಕಿನ ವದೇಗೋಳ ಗ್ರಾಮದಲ್ಲಿ ರಜನೀಕಾಂತ್ ಕೆಂಗೇರಿ, ಶಿರಹಟ್ಟಿ ತಾಲೂಕಿನ ಕುಸಲಾಪುರ ಗ್ರಾಮದಲ್ಲಿ ಕಲಗೌಡ ಪಾಟೀಲ, ರೋಣ ತಾಲೂಕಿನ ಮೇಲ್ಮಠ ಗ್ರಾಮದಲ್ಲಿ ವಾಣಿ, ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಪರಶುರಾಮ ಸತ್ತಿಗೇರಿ ಅವರು ಸಾರ್ವಜನಿಕರಿಂದ ಕಂದಾಯ ವಿಷಯಕ್ಕೆ ಸಂಬಂಧಿಸಿದಂತೆ ಅಹವಾಲುಗಳನ್ನು ಪಡೆದು ಪರಿಹಾರ ನೀಡಲಿದ್ದಾರೆ.